ಮಂಗಳೂರಿನ ಮಹಾವೀರ ವೃತ್ತದ ಬಳಿ ಸ್ಥಾಪಿಸಿರುವ ವೃತ್ತಾಕಾರದ ಪೀಠದಲ್ಲಿ ಕಲಶದ ಆಕೃತಿಯನ್ನು ಮರುಸ್ಥಾಪಿಸುವ ಕಾರ್ಯ ಆರಂಭವಾಗಿದೆ
ಪ್ರಜಾವಾಣಿ ಚಿತ್ರ
ಮಂಗಳೂರು: ಮಹಾವೀರ ವೃತ್ತದಲ್ಲಿ (ಪಂಪ್‌ವೆಲ್) ಮೇಲ್ಸೇತುವೆ ಕಾಮಗಾರಿ ಸಲುವಾಗಿ ತೆರವುಗೊಳಿಸಿದ್ದ ಭಾರಿ ಗಾತ್ರದ ‘ಕಲಶ’ದ ಆಕೃತಿಯನ್ನು ಮರುಸ್ಥಾಪಿಸಲಾಗುತ್ತಿದೆ. ಅದನ್ನು ಸೋಮವಾರ ರಾತ್ರಿ ಪೀಠದ ಮೇಲೆ ತಂದಿರಿಸಲಾಯಿತು.
ಪಂಪ್‌ವೆಲ್‌ನಲ್ಲಿ ವಿಸ್ತಾರವಾದ ವೃತ್ತವನ್ನು ನಿರ್ಮಿಸಿ, ಅದಕ್ಕೆ ಮಹಾವೀರ ವೃತ್ತ ಎಂದು 2003ರಲ್ಲಿ ನಾಮಕರಣ ಮಾಡಲಾಗಿತ್ತು. ಆ ವೃತ್ತದ ಕೇಂದ್ರದಲ್ಲಿ ಕಲಶದ ಆಕೃತಿಯನ್ನು ಸ್ಥಾಪಿಸಲಾಗಿತ್ತು. ಮಂಗಳೂರು ಜೈನ್ ಸೊಸೈಟಿ ಹಾಗೂ ಜೈನ ಸಮುದಾಯದವರು ಅದರ ಉಸ್ತುವಾರಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆಯು ಈ ವೃತ್ತದ ಮೇಲೆಯೇ ಹಾದು ಹೋಗಿದ್ದು, ಅದರ ಕಾಮಗಾರಿ ಸಲುವಾಗಿ 2016ರ ಮಾರ್ಚ್‌ನಲ್ಲಿ ಕಲಶದ ಆಕೃತಿಯನ್ನು ತೆರವುಗೊಳಿಸಲಾಗಿತ್ತು. ಈಗ ಮೇಲ್ಸೇತುವೆ ಪಕ್ಕದಲ್ಲಿ ವೃತ್ತಾಕಾರದ ಪೀಠವನ್ನು ರಚಿಸಿ, ಅದರ ಮೇಳೆ ಕಲಶದ ಆಕೃತಿಯನ್ನು ಮರುಸ್ಥಾಪಿಸಲಾಗುತ್ತಿದೆ.
‘ಈ ಕಲಶದ ಆಕೃತಿಯನ್ನು ಮರುಸ್ಥಾಪಿಸಿ ಮಹಾವೀರ ವೃತ್ತದ ಸೌಂದರ್ಯ ಹೆಚ್ಚಿಸುವ ಕಾಮಗಾರಿಯನ್ನು ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರ ಪೀಠವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿದೆ. ಕಲಶದ ಆಕೃತಿಯನ್ನು ಮರುಸ್ಥಾಪಿಸಿ ವೃತ್ತವನ್ನು ನವೀಕರಿಸುವ ಕಾರ್ಯವನ್ನು ಮಂಗಳೂರು ಜೈನ್ ಸೊಸೈಟಿ ಹಾಗೂ ಜೈನ ಸಮುದಾಯದವರು ಸೇರಿ ನಿರ್ವಹಿಸುತ್ತಿದ್ದಾರೆ. ಒಂದೂವರೆ ತಿಂಗಳಲ್ಲಿ ಈ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಸೊಸೈಟಿಯ ಅಧ್ಯಕ್ಷ ಪುಷ್ಪರಾಜ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.