ADVERTISEMENT

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ವೈಭವ

ಇಸ್ಕಾನ್‌ಗೆ ಭೇಟಿ ನೀಡಿದ ಭಕ್ತರು, ಮಳೆಯಲ್ಲೇ ಮೊಸರು ಕುಡಿಕೆ ಉತ್ಸವ ವೀಕ್ಷಿಸಿದರು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:16 IST
Last Updated 17 ಆಗಸ್ಟ್ 2025, 7:16 IST
ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು
ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು   

ಮಂಗಳೂರು: ಭಗವದ್ಗೀತೆ ಮೂಲಕ ಬದುಕಿನ ಅಂತಃಸತ್ವವನ್ನು ಉಪದೇಶಿಸಿದ ಶ್ರೀಕೃಷ್ಣ ದೇವರ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವವು ವೈಭವದಿಂದ ನಡೆಯಿತು.

ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ಆರಂಭವಾದ ಆಚರಣೆ ಶನಿವಾರ ಸಂಪನ್ನಗೊಂಡಿತು. ಉಳಿಯತ್ತಾಯ ವಿಷ್ಣು ಅಸ್ತೃ ಅವರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಪಿಸಲಾಯಿತು. ಬೆಳಿಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ಗಣಪತಿ ಹವನ ನಡೆಯಿತು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಕೆ.ಸಿ.ನಾಯ್ಕ್, ಸುಗುಣಾ ಸಿ. ನಾಯ್ಕ್, ಎಂ.ಬಿ.ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಪುರುಷೋತ್ತಮ ಭಾಗವಹಿಸಿದ್ದರು.

ಕುಳಾಯಿಯ ಇಸ್ಕಾನ್ ರಾಧಾ ಗೋವಿಂದ ಮಂದಿರದಲ್ಲಿ ಒಂದು ವಾರದಿಂದ ಪ್ರಾರಂಭವಾಗಿರುವ ಜನ್ಮಾಷ್ಟಮಿ ಆಚರಣೆಯಲ್ಲಿ ಶನಿವಾರ, ಪ್ರವಚನ, ಭಕ್ತಿ ಸಂಕೀರ್ತನೆ, ಡೋಲೋತ್ಸವ ಮೊದಲಾದ ಆಚರಣೆಗಳು ಮಂದಿರದ ಅಧ್ಯಕ್ಷ ನಾಮನಿಷ್ಠ ದಾಸ್ ನೇತೃತ್ವದಲ್ಲಿ ನಡೆದವು.

ADVERTISEMENT

ಕೊಡಿಯಾಲ್‌ಬೈಲ್ ಪಿವಿಎಸ್ ಕಲಾಕುಂಜದ ಇಸ್ಕಾನ್ ಮಂದಿರದಲ್ಲಿ ರಾಮ ನಾಮ ಹಾಗೂ ಕೃಷ್ಣ ನಾಮ ಸ್ಮರಣೆಯನ್ನು 108 ಬಾರಿ ಪಠಿಸಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ನಾಮ ಪಠಣೆ ಮಾಡುತ್ತ ಹೆಜ್ಜೆ ಹಾಕಿದರು.

ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಕೃಷ್ಣ ಆಸೀನರಾಗಿದ್ದ ಅಲಂಕೃತ ತೊಟ್ಟಿಲನ್ನು ತೂಗಿ ಭಕ್ತರು ಕೃತಾರ್ಥರಾದರು. ಅಲಂಕಾರ ಪೂಜೆ, ರಾಜಭೋಗ ಆರತಿ ನಡೆದ ನಂತರ ಮಧ್ಯಾಹ್ನ ದೇವರನ್ನು ಶಾರದಾ ವಿದ್ಯಾಲಯದ ಮೈದಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ಭಕ್ತಿಗೀತೆ ರಸಮಂಜರಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಕೃಷ್ಣನ ಬಾಲಲೀಲೆಯ ರೂಪಕ ಪ್ರಸ್ತುತಗೊಂಡವು. ಛದ್ಮವೇಷ ಸ್ಪರ್ಧೆ, ಚಿತ್ರಕಲೆಗಳು ಮಕ್ಕಳಿಗೆ ಮುದ ನೀಡಿದವು. ಕೃಷ್ಣ ವೇಷಧಾರಿ ಮಕ್ಕಳನ್ನು ಕಂಡು ಪಾಲಕರು ಭಾವಪರವಶರಾದರು. ನಡುರಾತ್ರಿಯವರೆಗೂ ಆಚರಣೆ ಮುಂದುವರಿಯಿತು.

ಮಂದಿರದ ಅಧ್ಯಕ್ಷ ಗುಣಾಕರ ರಾಮದಾಸ, ಉಪಾಧ್ಯಕ್ಷ ಸನಂದನ ದಾಸ, ಸಂಚಾಲಕ ಸುಂದರ ಗೌರ ದಾಸ ನೇತೃತ್ವ ವಹಿಸಿದ್ದರು.

ಎರಡೂ ಇಸ್ಕಾನ್ ಮಂದಿರಗಳಲ್ಲಿ ಅನ್ನದಾನ, ವ್ರತಾಚರಣೆಯ ಉಪಾಹಾರ ಸೇವೆ ನಡೆಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಕೊಟ್ಟಾರದಲ್ಲಿ ಮೊಸರು ಕುಡಿಕೆ‌ ಉತ್ಸವ ನಡೆಯಿತು 

ಮಂಗಳೂರಿನ ಇಸ್ಕಾನ್‌ವತಿಯಿಂದ ಶಾರದ ವಿದ್ಯಾಲಯದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು

ಶ್ರೀಕೃಷ್ಣ ಜನ್ಮಾಷ್ಟಮಿ‌ ಅಂಗವಾಗಿ ಮಂಗಳೂರಿನ ಕೊಟ್ಟಾರದಲ್ಲಿ ಮೊಸರು ಕುಡಿಕೆ‌ ಉತ್ಸವ ನಡೆಯಿತು 

ಮೊಸರು ಕುಡಿಕೆ ಸಡಗರ:

ಮಂಗಳೂರಿನ ಕೊಟ್ಟಾರ ಬೋಳಾರ ಅಶೋಕನಗರ ಹಾಗೂ ಬೊಕ್ಕಪಟ್ಣದಲ್ಲಿ ಸ್ಥಳೀಯ ಸಂಘಟನೆಗಳು ಹಮ್ಮಿಕೊಂಡಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ಯುವ ಉತ್ಸಾಹಿಗಳು ಭಾಗವಹಿಸಿದರು. ಎಡೆಬಿಡದೆ ಸುರಿದ ಮಳೆ ಕುಡಿಕೆ ಒಡೆಯುವವರ ಉತ್ಸಾಹವನ್ನು ತಗ್ಗಿಸಲಿಲ್ಲ. ಮಳೆಯಲ್ಲಿ ಮೀಯುತ್ತಲೇ ಪೈಪೋಟಿಯಲ್ಲಿ ಕುಡಿಕೆ ಒಡೆದು ಸಂಭ್ರಮಿಸಿದರು. ರಸ್ತೆ ಬದಿಯಲ್ಲಿ ಅಲಂಕರಿಸಿದ್ದ ಬಣ್ಣದ ದೀಪಗಳು ಮಳೆಯ ಹನಿಗಳನ್ನು ರಂಗಿನಲ್ಲಿ ತೋಯಿಸಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.