ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿದರು. ರವಿಚಂದ್ರ ನಾಯಕ್, ಕೆ.ರವಿಶಂಕರ್, ಅರುಣ್ ಕೆ. ಹಾಗೂ ಶ್ರೀಧರ ಮಲ್ಹಾಡ್ ಭಾಗವಹಿಸಿದ್ದರು
ಮಂಗಳೂರು: 28 ಹೊಸ್ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲು ಪರವಾನಗಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗವು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವನ್ನು ಕೋರಿದೆ.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಇಲ್ಲಿ ಸೋಮವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಈ ಕುರಿತು ಬೇಡಿಕೆ ಸಲ್ಲಿಸಿದರು.
‘ಸರ್ಕಾರ ಶಕ್ತಿ ಯೋಜನೆ ಆರಂಭಿಸಿದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಈಚಿನ ವರ್ಷಗಳಲ್ಲಿ ಜನಸಂಖ್ಯೆಯೂ ಹೆಚ್ಚಳವಾಗಿದ್ದು, ಜಿಲ್ಲೆಗೆ ಹೆಚ್ಚುವರಿ ಬಸ್‌ಗಳ ಅಗತ್ಯವಿದೆ. ಈ ಬಗ್ಗೆ ಜನರಿಂದ ಬಂದ ಬೇಡಿಕೆ ಆಧಾರದಲ್ಲಿ ಈ ಕೋರಿಕೆ ಸಲ್ಲಿಸಿದ್ದೇವೆ’ ಎಂದು ರಾಜೇಶ್ ಶೆಟ್ಟಿ ತಿಳಿಸಿದರು.
1991 ಮತ್ತು 1993ರಲ್ಲಿ ಜಿಲ್ಲಾ ಮ್ಯಾಜಿಸ್ಟೇಟ್ ಹೆಚ್ಚುವರಿ ಬಸ್ ಸೇವೆಗೆ ಪರವಾನಗಿ ನೀಡುವುದನ್ನು ನಿರ್ಬಂಧಿಸಿ ಹೊರಡಿಸಿದ್ದ ಅಧಿಸೂಚನೆಯ (ಡಿಎಂ ನೋಟಿಫಿಕೇಷನ್) ಷರತ್ತುಗಳಿಂದ ಕೆಎಸ್‌ಆರ್‌ಟಿಸಿಗೆ ವಿನಾಯಿತಿ ನೀಡುವಂತೆ ಅವರು ಕೋರಿದರು.
ಪಿ.ಎಂ ಇ–ಬಸ್ ಸೇವಾ ಯೋಜನೆಯಡಿ ನಗರಕ್ಕೆ 100 ಇ–ಬಸ್‌ಗಳು ಮಂಜೂರಾಗಿವೆ. ಹೊಸ ಬಸ್ ಸೇವೆ ಒದಗಿಸಲು ಡಿಎಂ ಅಧಿಸೂಚನೆಯಿಂದ ಸಮಸ್ಯೆಯಾಗುತ್ತಿದೆ ಎಂದು ಅವರು ಪ್ರಾಧಿಕಾರದ ಗಮನಕ್ಕೆ ತಂದರು.
‘ಕೆಎಸ್‌ಆರ್ಟಿಸಿಯು ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸಲು ಪರವಾನಗಿ ನೀಡಬಾರದು. ಈ ಕುರಿತ ವ್ಯಾಜ್ಯಕ್ಕೆ ಸಂಬಂಧಿಸಿ ಹೈಕೋರ್ಟ್ ತೀರ್ಪು ಪ್ರಕಟವಾಗಲು ಬಾಕಿ ಇದೆ. ಟ್ರಾಫಿಕ್ ಸರ್ವೆ ನಡೆಸಬೇಕು. ಅದರ ಆಧಾರದಲ್ಲಿ ಬಸ್‌ಗಳ ವೇಳಾಪಟ್ಟಿ ಪರಿಷ್ಕರಿಸಲು ಕ್ರಮ ವಹಿಸಬೇಕು’ ಎಂದು ಖಾಸಗಿ ಬಸ್ ಮಾಲೀಕರ ಪರ ವಕೀಲರು ಕೋರಿದರು.
ದ.ಕ. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ, ‘ಕೆಎಸ್‌ಆರ್‌ಟಿಸಿಯು ಹೊಸ ಬಸ್‌ಗಳಿಗೆ ಪರವಾನಗಿ ಕೇಳಿರುವ ಎಲ್ಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ಯಥೇಚ್ಚವಾಗಿ ಲಭ್ಯ ಇವೆ. ಖಾಸಗಿ ಬಸ್ ಮಾಲೀಕರು ನಷ್ಟದಲ್ಲಿದ್ದಾರೆ. ಈ ಮಾರ್ಗಗಳಲ್ಲಿ ಮತ್ತಷ್ಟು ಬಸ್‌ಗಳಿಗೆ ಪರವಾನಗಿ ನೀಡಿದರೆ, ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬಸ್ ಸೇವೆ ಕೊರತೆ ಇರುವಲ್ಲಿಗೆ ಬಸ್ ಸೌಕರ್ಯ ಕಲ್ಪಿಸಲು ಕೆೆಎಸ್‌ಆರ್‌ಟಿಸಿ ಆದ್ಯತೆ ನೀಡಲಿ’ ಎಂದು ಒತ್ತಾಯಿಸಿದರು.
‘ಹೊಸ ಬಸ್‌ಗಳಿಗೆ ಪರವಾನಗಿ ನೀಡುವ ಮುನ್ನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಮಾಡಬೇಕು’ ಎಂದು ಬಸ್ ಮಾಲೀಕ ದಿಲ್ ರಾಜ್ ಆಳ್ವ ಒತ್ತಾಯಿಸಿದರು.
‘ನಿಯಮಗಳಲ್ಲಿ ಅವಕಾಶವಿದೆಯೇ ಎಂಬುದನ್ನು ನೋಡಿಕೊಂಡು ಕೆಎಸ್‌ಆರ್‌ಟಿಸಿಯ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಹಾಡ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಡಿಸಿಪಿ (ಅಪರಾಥ ಮತ್ತು ಸಂಚಾರ) ಕೆ. ರವಿಶಂಕರ್ ಮೊದಲಾದವರು ಭಾಗವಹಿಸಿದ್ದರು.
ಕೃಷ್ಣಾಪುರ ಕುಂಜತ್ತಬೈಲ್ ಸುಲ್ತಾನ್ ಬತ್ತೇರಿ ಯಿಂದ ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸಲು ಕೆಎಸ್‌ಆರ್‌ಟಿಸಿ ಹೊಸ ಬಸ್ ಸೇವೆ ಆರಂಭಿಸಬೇಕುಹನುಮಂತ ಕಾಮತ್ ನಾಗರಿಕ ಹಿತರಕ್ಷಣಾ ಸಮಿತಿ
ನಂತೂರು ಕೆಪಿಟಿ ವೃತ್ತಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಮಿತಿ ಮೀರಿದೆ. ಬೆಳಿ್ಗೆ 7ರಿಮದ ರಾತ್ರಿ 8ರವರೆಗೆ ನಗರದ ಮೂಲಕ ಭಾರಿ ಗಾತ್ರದ ಟ್ರಕ್ ಸಂಚಾರ ನಿರ್ಬಂಧಿಸಿಜಿ.ಕೆ.ಭಟ್ ಸಾಮಾಜಿಕ ಕಾರ್ಯಕರ್ತ
ಕೆಸ್‌ಆರ್‌ಟಿಸಿ ಹೊಸ ಬಸ್ ಪ್ರಸ್ತಾವ– ಎಲ್ಲೆಲ್ಲಿಗೆ?
ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ– ಕಟೀಲು (ಕೊಟ್ಟಾರ– ಸುರತ್ಕಲ್–ಕಾಟಿಪಳ್ಳ– ಕಿನ್ನಿಗೋಳಿ ಮಾರ್ಗವಾಗಿ) ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ– ಸುರತ್ಕಲ್–ಫರಂಗಿಪೇಟೆ (ಎರಡು ಬಸ್) ಮಂಗಳೂರು–ಕಂಕನಾಡಿ ರೈಲ್ವೆ ಜಂಕ್ಷನ್ (ಜಿಲ್ಲಾಧಿಕಾರಿ ಕಚೇರಿ ಮರೋಳಿ ಮೂಲಕ) ಕೋಡಿಕಲ್– ಕಂಕನಾಡಿ ರೈಲ್ವೆ ಜಂಕ್ಷನ್ ಮಂಗಳೂರು– ಉಳಾಯಿಬೆಟ್ಟು ಸ್ಟೇಟ್ ಬ್ಯಾಂಕ್– ಫರಂಗಿಪೇಟೆ (ನಂತೂರು ಮೂಲಕ) ಸ್ಟೇಟ್ ಬ್ಯಾಂಕ್– ಕಂಕನಾಡಿ ರೈಲ್ವೆ ಜಂಕ್ಷನ್ (ನಂತೂರು ಮರೋಳಿ) ಅದ್ಯಪಾಡಿ–ಕಂಕನಾಡಿ ರೈಲ್ವೆ ಜಂಕ್ಷನ್ (ಪಂಪ್‌ವೆಲ್–ಕಾವೂರು– ಬಜಪೆ ಮಾರ್ಗವಾಗಿ) ಕಂಕನಾಡಿ ಮಾರುಕಟ್ಟೆ– ಅದ್ಯಪಾಡಿ (ಜ್ಯೋತಿ ಲಾಲ್ ಬಾಗ್ ಬಜಪೆ ಮೂಲಕ) ಸ್ಟೇಟ್ ಬ್ಯಾಂಕ್ – ಕನ್ನಗುಡ್ಡೆ (ಕಂಕನಾಡಿ ಮಾರುಕಟ್ಟೆ– ಪಂಪ್‌ವೆಲ್ ಜಿಲ್ಲಾಧಿಕಾರಿ ಕಚೇರಿ ಮೂಲಕ) ಸ್ಟೇಟ್ ಬ್ಯಾಂಕ್– ಕಟೀಲು (ಪಿವಿಎಸ್ –ಕುಂಟಿಕಾನ– ಬಜಪೆ ಮಾರ್ಗವಾಗಿ) ಸ್ಟೇಟ್‌ಬ್ಯಾಂಕ್– ಕಿನ್ನಿಗೋಳಿ (ಪಿವಿಎಸ್– ಲಾಲ್‌ಬಾಗ್– ಬಜಪೆ– ಕಟೀಲ್ ಮಾರ್ಗವಾಗಿ) ಪಡೀಲ್ –ಆಕಾಶಭವನ (ನಾಗುರಿ– ಕಂಕನಾಡಿ ಮಾರುಕಟ್ಟೆ– ಲಾಲ್‌ಬಾಗ್– ಕೊಂಚಾಡಿ ಮಾರ್ಗವಾಗಿ) ಮಂಗಳೂರು– ಕುಂಪಲ ಸ್ಟೇಟ್‌ಬ್ಯಾಂಕ್– ಮುಡಿಪು (ಎರಡು ಬಸ್) ಮುಡಿಪು– ಎನ್‌ಐಟಿಕೆ ಸ್ಟೇಟ್‌ಬ್ಯಾಂಕ್– ಮೂಡುಬಿದಿರೆ (ಎರಡು ಬಸ್) ಸ್ಟೇಟ್‌ಬ್ಯಾಂಕ್– ಪೊಳಲಿ ಮಂಗಳಾದೇವಿ– ಎಂಆರ್‌ಪಿಎಲ್ ತಲಪಾಡಿ– ಬಜಪೆ ಸ್ಟೇಟ್‌ಬ್ಯಾಂಕ್– ಮದಕ ಸ್ಟೇಟ್‌ಬ್ಯಾಂಕ್– ಕಟೀಲು ಮಂಗಳಾದೇವಿ– ಕಿನ್ನಿಗೋಳಿ ಮೂಡುಶೆಡ್ಡಿ– ಸೋಮೇಶ್ವರ ಬಜಪೆ– ಉಳ್ಳಾಲ ಕೋಟೆಪುರ ತಲಪಾಡಿ– ಸುರತ್ಕಲ್
ಇ– ರಿಕ್ಷಾಕ್ಕೆ ಮುಕ್ತ ಅವಕಾಶ: ಪರ– ವಿರೋಧ:
ಇಲೆಕ್ಟ್ರಿಕ್ ರಿಕ್ಷಾಗಳು ಗ್ರಾಮಾಂತರ ವಲಯದಲ್ಲಿ ಮಾತ್ರ ಸಂಚರಿಸಬೇಕು ಎಂದು ನಿಬಂಧನೆ ಹಾಕದೇ ಅವುಗಳೂ ನಗರದಲ್ಲಿ ಮುಕ್ತಾವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಇ– ರಿಕ್ಷಾ ಚಾಲಕರ ಸಂಘಟನೆಯ ಪ್ರಜೇಶ್ ಹಾಗೂ ಮೊಹಮ್ಮದ್ ರಿಯಾಜ್ ಒತ್ತಾಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದ.ಕ. ಆಟೊ ರಿಕ್ಷಾ ಚಾಲಕರ ಸಂಘಟನೆಯ ಅಧ್ಯಕ್ಷ ವಿಷ್ಣುಮೂರ್ತಿ ‘ನಗರದಲ್ಲಿ ಆಟೊ ರಿಕ್ಷಾಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚು ಆಗಿದ್ದರಿಂದ 1997ರಿಮದ ಹೊಸ ರಿಕ್ಷಾಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಗಮನ ಸೆಳೆದರು. ‘ಇ–ಆಟೋ ರಿಕ್ಷಾಗಳಿಗೆ ಪರವಾನಗಿ ನೀಡುವಾಗ ಅವರೇ ಅದನ್ನು ಓಡಿಸುತ್ತಾರೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಒಬ್ಬರಿಗೆ ಒಂದಕ್ಕಿಂತ ಹೆಚ್ಚು ರಿಕ್ಷಾ ಹೊಂದಲು ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು. ನಗರದಲ್ಲಿ ಹೆಚ್ಚುವರಿ ಆಟೋರಿಕ್ಷಾ ನಿಲ್ದಾಣ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ಕೆಲ ರಿಕ್ಷಾ ಚಾಲಕ ಅರುಣ್ ಒತ್ತಾಯಿಸಿದರು. ಟ್ರಕ್‌ಗಳಲ್ಲಿ ಮಿತಿ ಮೀರಿ ಭಾರ ಹೇರುವುದಕ್ಕೆ ಕಡಿವಾಣ ಹಾಕಬೇಕು ಎಂದು ಟ್ರಕ್ ಮಾಲೀಕರೊಬ್ಬರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.