ADVERTISEMENT

ವಿಧಾನ ಪರಿಷತ್‌ ಚುನಾವಣಾ‌ ಕಣದಿಂದ ಹಿಂದೆ ಸರಿದ ಎಂ.ಎನ್.‌ರಾಜೇಂದ್ರಕುಮಾರ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 10:19 IST
Last Updated 20 ನವೆಂಬರ್ 2021, 10:19 IST
ಎಂ.ಎನ್.‌ರಾಜೇಂದ್ರಕುಮಾರ್
ಎಂ.ಎನ್.‌ರಾಜೇಂದ್ರಕುಮಾರ್   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಧಾನ ಪರಿಷತ್ ಚುನಾವಣೆಗೆಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕುತೂಹಲ‌ ಕೆರಳಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.‌ರಾಜೇಂದ್ರಕುಮಾರ್, ಇದೀಗ‌ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಬರಬಾರದು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತ ಸಹಕಾರಿಗಳ ಪ್ರೀತಿ ವಿಶ್ವಾಸವನ್ನು ಗಳಿಸಿದ್ದು, ಸಹಕಾರಿ ಕ್ಷೇತ್ರದ ಪ್ರಮುಖರ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರೆಲ್ಲರ ಆಶಯದಂತೆ ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತ ನಾಯಕರಾಗಿ ಉಳಿಯಲು ಬಯಸಿರುವುದಾಗಿ ತಿಳಿಸಿದ್ದಾರೆ.

ರಾಜಕೀಯ ಪ್ರವೇಶದಿಂದ ಸಹಕಾರಿಗಳೆಲ್ಲರಿಂದ ದೂರ ಉಳಿಯುವ ಸಾಧ್ಯತೆ ಇರುವುದರಿಂದ, ಸಹಕಾರಿ ನಾಯಕರಾಗಿಯೇ ಇರಬೇಕು ಎಂಬ ಆಶಯ‌ ವ್ಯಕ್ತಪಡಿಸಿರುವ‌ ರಾಜೇಂದ್ರಕುಮಾರ್, ಸ್ಪರ್ಧಾಕಣದಿಂದ ದೂರಸರಿಯಲು ನಿರ್ಧರಿಸಿದ್ದಾರೆ.

ADVERTISEMENT

ಸಹಕಾರಿಗಳೆಲ್ಲರ ಆಶಯದಂತೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ. ಸಹಕಾರ ಕ್ಷೇತ್ರದಿಂದಲೇ ಗುರುತಿಸಿಕೊಳ್ಳಬೇಕು ಹಾಗೂ ಸಹಕಾರ ಕ್ಷೇತ್ರಕ್ಕೆ ತಮ್ಮಿಂದಾಗುವ ಉತ್ತಮ ಕೆಲಸವನ್ನು ಮುಂದುವರಿಸುವ ಉದ್ದೇಶವಿದೆ. ಹಾಗಾಗಿ ಸಹಕಾರಿಗಳ ಆಶಯಕ್ಕೆ ಸ್ಪಂದಿಸುವ ಉದ್ದೇಶದಿಂದ ವಿಧಾನ ಪರಿಷತ್ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.

ರಾಜೇಂದ್ರಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮೊದಲು ಹೇಳಿದ್ದರು. ನಂತರ ಕಾಂಗ್ರೆಸ್ ಮುಖಂಡರ ಒತ್ತಾಯದ‌ ಮೇಲೆ‌ ಕೆಪಿಸಿಸಿ ಅಧ್ಯಕ್ಷ‌ ಡಿ.ಕೆ.‌ಶಿವಕುಮಾರ್ ಅವರನ್ನು ಭೇಟಿ‌ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ‌ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದವು.

ಇದು ಬಿಜೆಪಿ‌ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ‌ಶುಕ್ರವಾರ ನಗರದಲ್ಲಿ ನಡೆದ ಬಿಜೆಪಿ ಜನಸ್ವರಾಜ್‌ ಸಮಾವೇಶದಲ್ಲಿ‌ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ರಾಜೇಂದ್ರಕುಮಾರ್ ಅವರಿಗೆ ಪರೋಕ್ಷ ಎಚ್ಚರಿಕೆ‌ ನೀಡಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕನಲ್ಲಿ ನವೋದಯ ಟ್ರಸ್ಟ್ ಗೆ ಅವಕಾಶ ನೀಡಿರುವುದು, ಪ್ರತಿ ತಿಂಗಳು ಡಿಸಿಸಿ ಬ್ಯಾಂಕ್ ನಿಂದ ಟ್ರಸ್ಟ್ ಗೆ ₹19 ಲಕ್ಷ‌ ವರ್ಗಾವಣೆ ಮಾಡಿರುವುದು‌‌ ಕಾನೂನುಬಾಹಿರ.‌ ಈ ಬಗ್ಗೆ ತನಿಖೆ ನಡೆಸಿ‌, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ರಾಜೇಂದ್ರಕುಮಾರ ಕಣದಿಂದ ಹಿಂದೆ ಸರಿಯುವ‌ ನಿರ್ಧಾರ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.