ಮಂಗಳೂರು: ನವರಾತ್ರಿಯ ಪರ್ವಕಾಲದಲ್ಲಿ ಜಿಲ್ಲೆಯ ಪ್ರಸಿದ್ಧ ದೇವಿ ಆರಾಧನೆ ಕ್ಷೇತ್ರಗಳಾದ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಮಂಗಳೂರು ನಗರದ ಮಂಗಳಾದೇವಿ, ಉರ್ವ ಮಾರಿಯಮ್ಮ, ಹಳೇಕೋಟೆ ಮಾರಿಯಮ್ಮ, ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ.
ಎಲ್ಲ ದೇವಾಲಯಗಳಲ್ಲೂ ನವರಾತ್ರಿಯ ಅಂಗವಾಗಿ ಬೆಳಗಿನಿಂದ ಸಂಜೆಯವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಹಸ್ರಾರು ಮಹಿಳೆಯರು ದೇವಿ ಸಾನ್ನಿಧ್ಯಕ್ಕೆ ತೆರಳಿ, ಪೂಜೆ, ಕುಂಕುಮಾರ್ಚನೆ, ದುರ್ಗಾ ನಮಸ್ಕಾರ ಸಮರ್ಪಿಸಿದರು.
ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿರುವ ಶಾರದೆ ನಿತ್ಯ ವಿಭಿನ್ನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಮಂದಸ್ಮಿತ ನವದುರ್ಗೆಯರು, ಮಹಾಗಣಪತಿ, ಆದಿಶಕ್ತಿ ಮೂರ್ತಿಯನ್ನು ಕಂಡು ಭಕ್ತರು ಕೃತಾರ್ಥರಾಗುತ್ತಿದ್ದಾರೆ.
ಕುದ್ರೋಳಿಯಲ್ಲಿ ಶುಕ್ರವಾರ ಅಂಬಿಕಾ ದುರ್ಗಾ ಹೋಮ, ಪುಷ್ಪಾಲಂಕಾರ ಪೂಜೆ, ಉತ್ಸವಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ತಾಳಮದ್ದಳೆ, ನೃತ್ಯ ಪ್ರದರ್ಶನಗೊಂಡಿತು. ‘ಮಿಸ್ಟರ್ ಮಂಗಳೂರು’ ದಸರಾ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು.
ಶೇಷವಸ್ತ್ರ ವಿತರಣೆ ಇಂದು
ಶುಕ್ರವಾರದಂದು ಮಂಗಳಾದೇವಿ ತಿಳಿ ಹಳದಿ ನೀಲಿಯಂಚಿನ ಸೀರೆಯುಟ್ಟು ಕುಮಾರಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದಳು. ಶನಿವಾರ ಲಲಿತಾ ಪಂಚಮಿಯಂದು ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕಟೀಲು ಕ್ಷೇತ್ರದಲ್ಲಿ ಲಲಿತಾ ಪಂಚಮಿ ವಿಶೇಷ ದಿನ. ದೇವಿಯ ಪ್ರಸಾದ ರೂಪದಲ್ಲಿ ಭಕ್ತರಿಗೆ ‘ಶೇಷವಸ್ತ್ರ’ ವಿತರಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆ ಹೊರ ಜಿಲ್ಲೆಗಳ ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ. ಕಷ್ಟ ಪರಿಹಾರಕ್ಕೆ ಹರಕೆ ಹೊತ್ತವರು ನವರಾತ್ರಿ ವೇಳೆ ಹುಲಿವೇಷ ಕಟ್ಟಿ ದೇವಿಗೆ ಹರಕೆ ಒಪ್ಪಿಸುವ ಸಂಪ್ರದಾಯ ಕಟೀಲು ಹಾಗೂ ಪೊಳಲಿ ಕ್ಷೇತ್ರದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.