ADVERTISEMENT

ಕುಸಲ್ದರಸನ ‘ಸನ್ಮಾನಗಳ ಅರಮನೆ’: ನವೀನ್‌ ಪಡೀಲ್‌ ಅವರ ಬಣ್ಣದ ಬದುಕಿನ ಹೆಜ್ಜೆಗರುತು

ನವೀನ್‌ ಡಿ. ಪಡೀಲ್‌ ಅವರ ಬಣ್ಣದ ಬದುಕಿನ ಹೆಜ್ಜೆಗುರುತು

ಪ್ರದೀಶ್ ಎಚ್.ಮರೋಡಿ
Published 18 ಸೆಪ್ಟೆಂಬರ್ 2022, 19:30 IST
Last Updated 18 ಸೆಪ್ಟೆಂಬರ್ 2022, 19:30 IST
ನವೀನ್‌ ಡಿ. ಪಡೀಲ್‌ ಅವರು ತಮ್ಮ ಮನೆಯಲ್ಲಿ ಜೋಡಿಸಿಟ್ಟಿರುವ ಸನ್ಮಾನ ಪರಿಕರಗಳು
ನವೀನ್‌ ಡಿ. ಪಡೀಲ್‌ ಅವರು ತಮ್ಮ ಮನೆಯಲ್ಲಿ ಜೋಡಿಸಿಟ್ಟಿರುವ ಸನ್ಮಾನ ಪರಿಕರಗಳು   

ಮಂಗಳೂರು: ಕಲಾವಿದರಿಗೆ ಅಭಿಮಾನಿಗಳಿಂದ, ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ಸಿಗುವುದು ಸಾಮಾನ್ಯ. ‘ಕುಸಲ್ದರಸೆ’ ಖ್ಯಾತಿಯ ನವೀನ್‌ ಡಿ. ಪಡೀಲ್‌ ತಮಗೆ ದೊರೆತ ಸನ್ಮಾನಗಳಿಗಾಗಿಯೇ ‘ವಿಶೇಷ ಅರಮನೆ’ ಕಟ್ಟಿದ್ದಾರೆ.

ತುಳು ರಂಗಭೂಮಿಯಲ್ಲಿ 34 ವರ್ಷ, ಚಿತ್ರರಂಗದಲ್ಲಿ ಎರಡು ದಶಕಗಳಿಂದ ಬಣ್ಣ ಹಚ್ಚುತ್ತಿರುವ ನವೀನ್‌ ಡಿ. ಪಡೀಲ್‌ ಅವರಿಗೆ ಸಿಕ್ಕ ಸನ್ಮಾನಗಳಿಗೆ ಲೆಕ್ಕವಿಲ್ಲ. ಅಲ್ಲದೆ, ಹಲವು ಸಂಘಸಂಸ್ಥೆಗಳ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ತುಳು ಸಿನಿಮಾ ರಂಗದಲ್ಲಿ ನೀಡುವ ಉತ್ತಮ ನಟ, ಹಾಸ್ಯನಟ, ಪೋಷಕ ನಟ ಸೇರಿದಂತೆ ಹಲವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹಿರಿಮೆ ಅವರದು. ಮೂರೂವರೆ ದಶಕದಲ್ಲಿ ಸ್ವೀಕರಿಸಿದ ಪ್ರಶಸ್ತಿ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ಜೋಪಾನವಾಗಿ ಕೂಡಿಟ್ಟು, ಅದಕ್ಕಾಗಿ ಮಂಗಳೂರು ನಗರದ ಪಡೀಲ್‌ನಲ್ಲಿರುವ ತಮ್ಮ ಮನೆಯಲ್ಲಿ ವಿಶೇಷ ಸ್ಥಳವನ್ನು ಕಾಯ್ದಿರಿಸಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ.

‘ಸನ್ಮಾನದ ಪರಿಕರಗಳಿಗಾಗಿಯೇ ಮನೆಯಲ್ಲಿ ಎರಡು ಕೋಣೆಗಳನ್ನು ಅವರು ಮೀಸಲಿಟ್ಟಿದ್ದಾರೆ. ಮಾತ್ರವಲ್ಲ, ಆ ಕೋಣೆಯ ಗೋಡೆಯಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ,ಯಕ್ಷಗಾನ ದಂತಕತೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ತಮ್ಮ ಭಾವಚಿತ್ರವನ್ನು ಕಲಾವಿದರಿಂದ ಆಕರ್ಷಕವಾಗಿ ಬಿಡಿಸಿದ್ದು, ಗಮನ ಸೆಳೆಯುತ್ತಿದೆ. ಆ ಕೋಣೆಗಳಲ್ಲಿ ಸನ್ಮಾನದ ಪರಿಕರಗಳಿಗಾಗಿಯೇ ಪ್ರತ್ಯೇಕ ರ‍್ಯಾಕ್‌ ಮಾಡಿದ್ದು, ಪ್ರತಿಯೊಂದು ಸನ್ಮಾನ ಪತ್ರ, ಸ್ಮರಣಿಕೆಗಳು ಒಂದೊಂದು ಕಥೆ ಹೇಳುತ್ತಿವೆ. ಕಲಾವಿದನಿಗೆ ಜಾತಿ– ಧರ್ಮದ ಸಂಕೋಲೆ ಎನ್ನುವ ಅವರು ಹಿಂದೂ– ಮುಸ್ಲಿಂ– ಕ್ರೈಸ್ತ ಭಾವೈಕ್ಯದ ಸಂದೇಶವನ್ನು ಸಾರುವ ಚಿತ್ರವೊಂದನ್ನು ಇಲ್ಲಿ ಜೋಡಿಸಿದ್ದಾರೆ.

ADVERTISEMENT

ನವೀನ್‌ ಡಿ. ಪಡೀಲ್‌ ಅವರ ವೃತ್ತಿಬದುಕಿನ ಹೆಜ್ಜೆಗುರುತುಗಳ ನೆನಪುಗಳು ಇದೇ ಅರಮನೆಯಲ್ಲಿ ಕಾಣಸಿಗುತ್ತದೆ. ತಾವು ಮೊದಲ ಬಾರಿಗೆ ಮಲಯಾಳಂ ಚಿತ್ರನಟ ಮಮ್ಮುಟ್ಟಿ ಜತೆ ತೆಗೆದ ಭಾವಚಿತ್ರವನ್ನು ಇಲ್ಲಿ ಜೋಡಿಸಿದ್ದಾರೆ. ಸೃಜನ್‌ ಲೋಕೇಶ್‌ ಅವರ ‘ಮಜಭಾರತ’ ಷೋನ ನೆನಪುಗಳು, ಕುಡ್ಲ ಕಫೆ ಚಿತ್ರಕ್ಕಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಂದ ‘ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ’ ಸ್ವೀಕರಿಸುವ ಚಿತ್ರ ಮುಂತಾದ ನೆನಪುಗಳು ಇಲ್ಲಿ ಅನಾವರಣಗೊಂಡಿವೆ. ಜತೆಗೆ ‘ತೆಲಿಕೆದ ಬೊಳ್ಳಿ’ ದೇವದಾಸ್‌ ಕಾಪಿಕಾಡ್‌ ಅವರ ಕುಟುಂಬದ ಹಳೆಯ ಚಿತ್ರವೂ ಇಲ್ಲಿದೆ. ಸಾಯಿಬಾಬಾ, ಡಿ.ವೀರೇಂದ್ರ ಹೆಗ್ಗಡೆ ಚಿತ್ರಕ್ಕೆ ಇಲ್ಲಿ ಸ್ಥಾನ ನೀಡಲಾಗಿದೆ.

‘ಕಲಾವಿದನಿಗೆ ಪ್ರಶಸ್ತಿಗಳೇ ಆಸ್ತಿ’

‘ಕಲಾವಿದನಿಗೆ ಸನ್ಮಾನ, ಪ್ರಶಸ್ತಿಗಳೇ ಆಸ್ತಿ. ನಾನು ಬೇರೇನೂ ಆಸ್ತಿ ಮಾಡಿಲ್ಲ. ಅಭಿಮಾನಿಗಳು, ಸಂಘ ಸಂಸ್ಥೆಗಳು ಪ್ರೀತಿ– ಗೌರವದಿಂದ ಚಪ್ಪಾಳೆ ತಟ್ಟಿ ನೀಡಿದ ಸನ್ಮಾನಗಳಿಗೆ ನಾವು ಅಷ್ಟೇ ಗೌರವ ನೀಡಬೇಕು ಎಂಬುದು ನನ್ನ ನಿಲುವು. ಇದಕ್ಕಿಂತ ಹೆಚ್ಚು ನಾವೇನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸನ್ಮಾನಗಳ ಪರಿಕರಗಳಿಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂಬುದು ಹಲವು ವರ್ಷಗಳ ಕನಸಾಗಿತ್ತು. ಎರಡು ವರ್ಷಗಳ ಹಿಂದೆ ಮನೆ ಕಟ್ಟುವಾಗ ನನ್ನ ಕನಸು ಈಡೇರಿದ ಸಂತೋಷವಿದೆ’ ಎನ್ನುತ್ತಾರೆ ನವೀನ್‌ ಡಿ. ಪಡೀಲ್‌.

‘35 ವರ್ಷಗಳ ಬಣ್ಣದ ಬದುಕಿನಲ್ಲಿ ನಾನು ಏನು ಮಾಡಿದ್ದೇನೆ ಎಂಬುದಕ್ಕೆ ಈ ಪುಟ್ಟ ಅರಮನೆಯಲ್ಲಿ ಉತ್ತರ ಸಿಗುತ್ತದೆ’ ಎಂದು ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.