ADVERTISEMENT

ಮಂಗಳೂರು | ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಕಾರು; ಫಿಸಿಯೋಥೆರಪಿಸ್ಟ್‌ ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 12:13 IST
Last Updated 17 ಜೂನ್ 2025, 12:13 IST
   

ಮಂಗಳೂರು: ನಗರದ ನಂತೂರು ಮತ್ತು ಪಂಪ್‌ವೆಲ್ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಾರುತಿ ಸ್ವಿಫ್ಟ್‌ ಕಾರು ಸೋಮವಾರ ರಾತ್ರಿ ಉರುಳಿ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಕೇರಳದ ಆಲಪ್ಪುಝ ನಿವಾಸಿ ಡಾ.ಮೊಹಮ್ಮದ್ ಅಮಲ್ ಎಂದು ಗುರುತಿಸಲಾಗಿದೆ. ದೇರಳಕಟ್ಟೆಯ ವೈದ್ಯಕೀಯ ಕಾಲೇಜೊಂದರಲ್ಲಿ ಫಿಸಿಯೋಥೆರಪಿ ಪದವಿ ಪಡೆದಿದ್ದ ಅವರು ಅದೇ ಸಂಸ್ಥೆಯಲ್ಲೇ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರಿನಲ್ಲಿ ಅಮಲ್ ಅವರ ಜೊತೆ ಪ್ರಯಾಣಿಸುತ್ತಿದ್ದ ದೇರಳಕಟ್ಟೆಯ ವೈದ್ಯಕೀಯ ಕಾಲೇಜೊಂದರ ಬಿಡಿಎಸ್ ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ. ಕೇರಳದ ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಂತೂರು ಕಡೆಯಿಂದ ಪಂಪ್‌ವೆಲ್‌ ಕಡೆಗೆ ಸೋಮವಾರ ರಾತ್ರಿ 11.45ರ ಸುಮಾರಿಗೆ ಸಾಗುತ್ತಿದ್ದ ಕಾರು ಬಜ್ಜೋಡಿ ತಾರೆತೋಟದ ಬಳಿಯ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂರು ಪಲ್ಟಿಯಾಗಿತ್ತು. ಕಾರಿನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಮೊಹಮ್ಮದ್ ಅಮಲ್ ಅವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಕಾರು ಪಲ್ಟಿಯಾದ ಬೆನ್ನಲ್ಲೇ ಐಷರ್ ವಾಹನವೂ ಇದೇ ಸ್ಥಳದಲ್ಲಿ ಉರುಳಿಬಿದ್ದಿದೆ. ರಸ್ತೆಯಲ್ಲಿ ಉರುಳಿ ಬಿದ್ದ ಕಾರನ್ನು ನೋಡಿದ್ದ ಐಷರ್ ವಾಹನದ ಚಾಲಕ ಹಠಾತ್ ಬ್ರೇಕ್‌ ಹಾಕಿದ್ದ. ಅದು ಕಾರಿನಿಂದ ಸ್ವಲ್ಪ ದೂರದಲ್ಲೇ ಹೆದ್ದಾರಿಗೆ ಅಡ್ಡವಾಗಿ ಪಲ್ಟಿಯಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ನಗರದ ಸಂಚಾರ ಪೂರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹಮ್ಮದ್ ಅಮಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.