
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 30ರ ನಡುವಿನ ಅವಧಿಯಲ್ಲಿ ಕಳ್ಳತನವಾಗಿದ್ದ 233 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊಬೈಲ್ ಫೋನ್ ಕಳ್ಳತನದ ಬಗ್ಗೆ ನಿಗಾ ಇಡಲು ಸೆನ್ ಠಾಣೆಯ ಎಸಿಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದರು.
ಮೊಬೈಲ್ ಫೋನ್ ಕಳ್ಳತನವಾದಾಗ, ಸಂಶಯಾಸ್ಪದ ಕರೆಗಳು ಬಂದಾಗ ಸಾರ್ವಜನಿಕರು ‘ಸಂಚಾರ್ ಸಾಥಿ’ ಪೋರ್ಟಲ್ ಬಳಸಿಕೊಂಡು ನಂಬರ್ ಅನ್ನು ಬ್ಲಾಕ್ ಮಾಡಿಸಬಹುದು. ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಬಹುದು. ಜನರು ಈ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಇತ್ತೀಚೆಗೆ ಕಾಲ್ ಮರ್ಜಿಂಗ್ ಹೆಸರಿನಲ್ಲಿ ಕಾನ್ಪರೆನ್ಸ್ ಕಾಲ್ ಮಾಡಿ, ಮೋಸದಿಂದ ಒಟಿಪಿ ಪಡೆದು ಹಣ ವಂಚನೆ ಮಾಡಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವರೆಗೆ ಇಂತಹ ಪ್ರಕರಣ ದಾಖಲಾಗಿಲ್ಲ. ಆದರೆ, ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದರು.
4793 ಪ್ರಕರಣ:
ನಗರದ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಮೂರು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿ ನೋ ಪಾರ್ಕಿಂಗ್, ಪಾದಚಾರಿ ಮಾರ್ಗದ ಮೇಲೆ ವಾಹನ ನಿಲುಗಡೆ ಸೇರಿದಂತೆ ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿದ್ದ ಮಾಲೀಕ, ಚಾಲಕರ ವಿರುದ್ಧ 4,793 ಪ್ರಕರಣಗಳನ್ನು ದಾಖಲಿಸಿ ₹ 23.21 ಲಕ್ಷ ದಂಡ ವಿಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಹೇಳಿದರು.
ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ, ಹೆಚ್ಚು ಅಪಘಾತಗಳಾಗುವ ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ ₹5.62 ಲಕ್ಷ ದಂಡ ವಿಧಿಸಲಾಗಿದೆ. ಟಿಂಟೆಡ್ ಗ್ಲಾಸ್ ಉಪಯೋಗಿಸಿದ 5,865 ವಾಹನಗಳನ್ನು ಗುರುತಿಸಿ ₹24.85 ಲಕ್ಷ ದಂಡ ವಿಧಿಸಲಾಗಿದೆ. ಕೆಲವು ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ, ಸಭೆ ಮೂಲಕ ಅವರಿಗೆ ತಿಳಿವಳಿಕೆ ನೀಡಲಾಗಿದೆ. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿ ನೋಟಿಸ್ ನೀಡಲಾಗಿದೆ ಎಂದರು.
ಮಹಿಳೆಗೆ ₹17 ಲಕ್ಷ ಮರಳಿ ಸಿಕ್ಕಿದ ಖುಷಿ
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ಆನ್‌ಲೈನ್ ಮೂಲಕ ₹17 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಣವನ್ನು ದೂರುದಾರರಿಗೆ ಹಿಂದಿರುಗಿಸಲು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಮಿಥುನ್ ತಿಳಿಸಿದರು. ಅ.23ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ಬಿಜೈನ 79 ವರ್ಷದ ಮಹಿಳೆಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಅವರಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು ಬಂಧಿಸುವುದಾಗಿ ಹೆದರಿಸಿದ್ದಾರೆ. ಬಂಧನದಿಂದ ಪಾರಾಗಲು ಹಣವನ್ನು ಆರ್‌ಬಿಐನಲ್ಲಿ ಠೇವಣಿ ಇಡುವಂತೆ ತಿಳಿಸಿ ಭಯ ಹುಟ್ಟಿಸಿದ್ದಾರೆ. 5–6 ತಾಸು ದೂರವಾಣಿ ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ವಿಡಿಯೊ ಕರೆಯಲ್ಲಿ ಪೊಲೀಸ್ ಅಧಿಕಾರಿಯಂತೆ ಕಾಣಿಸಿಕೊಂಡು ದೂರುದಾರ ಮಹಿಳೆಯ ಖಾತೆಯಲ್ಲಿರುವ ₹17 ಲಕ್ಷ ಮೊತ್ತವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು. ಘಟನೆ ನಡೆದ ತಕ್ಷಣ ಪಕ್ಕದ ಮನೆಯ ಮಹಿಳೆಗೆ ದೂರುದಾರರು ತಿಳಿಸಿದ್ದು ಅವರು ತಕ್ಷಣ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ. ಸೆನ್ ಠಾಣೆ ಅಧಿಕಾರಿಗಳು ಸೈಬರ್ ಸಹಾಯವಾಣಿ ಮೂಲಕ ಸಂಬಂಧಪಟ್ಟ ಬ್ಯಾಂಕ್‌ಗೆ ಕರೆ ಮಾಡಿ ವರ್ಗಾವಣೆ ನಿಲ್ಲಿಸುವಂತೆ ತಿಳಿಸಿದ್ದಾರೆ. ಅ.27ರಂದು ಪೂರ್ಣ ಮೊತ್ತವು ದೂರುದಾರ ಮಹಿಳೆಯ ಖಾತೆಗೆ ವರ್ಗಾವಣೆಯಾಗಿದೆ ಎಂದು ತಿಳಿಸಿದರು. ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದ ಮಹಿಳೆ ತಮಗಾದ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.