ADVERTISEMENT

ಪೌರತ್ವ ತಿದ್ದಪಡಿ ಕಾಯ್ದೆ: ಬ್ಯಾರಿ ಅಕಾಡೆಮಿ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:46 IST
Last Updated 22 ಡಿಸೆಂಬರ್ 2019, 14:46 IST
ರಹೀಂ ಉಚ್ಚಿಲ್‌
ರಹೀಂ ಉಚ್ಚಿಲ್‌   

ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ಕುರಿತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ನೀಡಿದ ಹೇಳಿಕೆಯ ವಿಡಿಯೊ ತುಣುಕು ವೈರಲ್ ಆಗಿದೆ.

‘ಯಾರದೋ ಮಾತು ಕೇಳಿ ಪ್ರತಿಭಟನೆ ಮಾಡಬೇಡಿ. ಪ್ರತಿಭಟನೆಗೆ ಪೊಲೀಸ್ ಹಾಗೂ ಸರ್ಕಾರ ಅವಕಾಶ ನೀಡುತ್ತದೆ. ಆದರೆ, ಅವು ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಇದ್ದರೆ, ಸರ್ಕಾರಕ್ಕೆ ಅರ್ಥವಾಗುತ್ತದೆ. ಆದರೆ, ಈ ಪ್ರತಿಭಟನೆಗಳು ದಿಕ್ಕು ತಪ್ಪುತ್ತಿರುವುದು ಖೇದಕರ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಪೌರತ್ವ ತಿದ್ದುಪಡಿ ಕಾಯಿದೆಯಿಂದಾಗಿ ಮುಸ್ಲಿಮರು ದೇಶ ಬಿಟ್ಟು ಹೋಗಬೇಕು. ಇದು ಹಿಂದೂ ದೇಶ ಆಗುತ್ತದೆ ಎಂಬುದು ಹಸಿ ಹಸಿ ಸುಳ್ಳು. ಇಂತಹ ತಪ್ಪು ಕಲ್ಪನೆಗಳನ್ನು ಮುಸ್ಲಿಮರನ್ನು ಬೆದರಿಸುವ ಸಲುವಾಗಿಸೋಕಾಲ್ಡ್ ಜಾತ್ಯತೀತರು ಹಬ್ಬುತ್ತಿದ್ದಾರೆ. ಆದರೆ, ಭಾರತೀಯ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಪ್ರಧಾನಿ ಹಾಗೂ ಗೃಹ ಸಚಿವರು ತಿಳಿಸಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪಾಕಿಸ್ತಾನ, ಅಪ್ಗಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ವಿಚಾರವನ್ನು ಕಾಯ್ದೆಯಲ್ಲಿ ಹೇಳಿದ್ದಾರೆ. ಆದರೆ, ಅಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಹೀಗಾಗಿ, ಕಾಯ್ದೆಯಲ್ಲಿ ಅಲ್ಲಿನ ಅಲ್ಪಸಂಖ್ಯಾತರಿಗೆ ಮಾತ್ರ ಭಾರತದ ಪೌರತ್ವ ನೀಡಲಾಗಿದೆ. ಆದರೆ, ಈ ಬಗ್ಗೆ ಕೆಲವರು ತಪ್ಪು ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಮಂಗಳೂರು ಕರ್ಫ್ಯೂವಿನಿಂದ ಸಾಧಿಸಿದ್ದಾದರೂ ಏನು? ಕಾಯ್ದೆಯಲ್ಲಿ ಭಾರತೀಯ ಮುಸ್ಲಿಮರಿಗೆ ಪೌರತ್ವ ನಿರಾಕರಿಸಿದ್ದಾರೆಯೇ? ಭಾರತದಲ್ಲಿ ಜನಿಸಿದ ಮುಸಲ್ಮಾನನ ಪೌರತ್ವ ಕಿತ್ತುಕೊಂಡರೆ, ನಾನು ನನ್ನ ಬಿಜೆಪಿ ಸದಸ್ಯತ್ವ ಹಾಗೂ ಬ್ಯಾರಿ ಅಕಾಡೆಮಿಗೆ ರಾಜೀನಾಮೆ ನೀಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

‘ಬಾಂಗ್ಲಾ, ಪಾಕಿಸ್ತಾನ, ಅಪ್ಗಾನಿಸ್ತಾನದ ನುಸುಳುಕೋರರಿಗೆ ಮತದಾನದ ಹಕ್ಕು ನೀಡಿ, ತಮ್ಮ ಸಾಮ್ರಾಜ್ಯ ಸ್ಥಾಪಿಸುವ ಸಲುವಾಗಿ ಕೆಲವರು, ಹಿಂದೂ ಮತ್ತು ಮುಸ್ಲಿಮರ ಮಧ್ಯೆ ವಿಭಜಿಸುತ್ತಿದ್ದಾರೆ. ಇಂತಹ ಪ್ರಚೋದನೆ ನೀಡುವ ವ್ಯಕ್ತಿಗಳು ನಮ್ಮೊಳಗೆ ಇದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುತ್ತಿದ್ದಾರೆ. ಹೀಗೆ ‘ ಹೊತ್ತಿ ಉರಿಯುತ್ತದೆ’ ಎಂದು ಹೇಳುವವರಿಗೆ ಶಾಪ ತಟ್ಟುತ್ತದೆ’ ಎಂದಿದ್ದಾರೆ.

‘ಭಾರತೀಯರನ್ನು, ಬಹುಸಂಖ್ಯಾತರ ಭಾವನೆ ಗೌರವಿಸುವವರನ್ನು ಪರಕೀಯರು ಎನ್ನುವುದಿಲ್ಲ ಎಂದು ಸಂಘ ಪರಿವಾರದವರು ಹೇಳಿದ್ದಾರೆ. ಆದರೆ, ವಕ್ಫ್ ಆಸ್ತಿ ತಿಂದು ಹಾಕಿದವರ ಮಾತು ನೀವು ಕೇಳಬಾರದು. ದೇಶದಲ್ಲಿರುವ ಎಲ್ಲರೂ ಐಕ್ಯತೆಯಿಂದ ಇರುವ ಕಾನೂನು ಇದಾಗಿದ್ದು, ನಾವೆಲ್ಲ ದೇಶವನ್ನು ಕಾಪಾಡುವ’ ಎಂದು ಅವರು ಮನವಿ ಮಾಡಿದ್ದಾರೆ.

‘ನನಗೆ ರಾಜಕೀಯ ಪಕ್ಷಕ್ಕಿಂತ ಧರ್ಮ ಮುಖ್ಯ. ಅನ್ಯಾಯಕ್ಕೆ ಒಳಗಾದವರ ಜೊತೆ ನಿಲ್ಲುತ್ತೇನೆ. ಕೆಲವು ದುಷ್ಟ ಶಕ್ತಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೂ ಹೆದರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.