
ಪ್ರಾತಿನಿಧಿಕ ಚಿತ್ರ
ಮಂಗಳೂರು: ಕರ್ನಾಟಕದ ಡಿಜಿಟಲ್ ಕ್ಷೇತ್ರದ ಕಾರ್ಯತಂತ್ರವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಸಿಲಿಕಾನ್ ಬೀಚ್ ಕಾರ್ಯಕ್ರಮ (ಎಸ್‌ಬಿಪಿ) ಮತ್ತು ಡೆಲಾಯ್ಟ್ ಜಂಟಿಯಾಗಿ, ‘ಇಂದು ಮಂಗಳೂರು: ಭಾರತದ ಮುಂದಿನ ಸಂಭಾವ್ಯ ಡೇಟಾ ಸೆಂಟರ್ ಹಬ್ ಒಂದು ಕಾರ್ಯಸಾಧ್ಯತಾ ಅಧ್ಯಯನ' ಎಂಬ ಶೀರ್ಷಿಕೆಯಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿವೆ.
ಬೆಂಗಳೂರು ಟೆಕ್ ಶೃಂಗಸಭೆ 2025ರಲ್ಲಿ ನಡೆದ ಡೇಟಾ ಸೆಂಟರ್ ದುಂಡು ಮೇಜಿನ ಸಭೆಯಲ್ಲಿ ಈ ವರದಿಯನ್ನು ಔಪಚಾರಿಕವಾಗಿ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ ಅವರಿಗೆ ಈ ವರದಿ ನೀಡಲಾಯಿತು.
ಕರಾವಳಿ ಅನುಕೂಲಗಳು, ಸ್ಪರ್ಧಾತ್ಮಕ ಭೂಮಿ ಮತ್ತು ಇಂಧನ ಆರ್ಥಿಕತೆ, ವಿಸ್ತರಿಸುತ್ತಿರುವ ಜಿಸಿಸಿ ಚಟುವಟಿಕೆ ಮತ್ತು ಬೆಳೆಯುತ್ತಿರುವ ಎಐ ಅಳವಡಿಕೆ, ಸಂಭಾವ್ಯ ಜಲಾಂತರ್ಗಾಮಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಮತ್ತು ಹಸಿರು ಇಂಧನ ಇವೆಲ್ಲವೂ ಹಬ್‌ಗೆ ಪೂರಕವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, 'ಕರ್ನಾಟಕವು ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ನಿರಂತರವಾಗಿ ಮುನ್ನಡೆಸಿದೆ ಮತ್ತು ನಾವು ಕೃತಕ ಬುದ್ಧಿಮತ್ತೆ, ಡೇಟಾ ಪ್ರಾಬಲ್ಯ, ಕ್ಲೌಡ್ ಅಳವಡಿಕೆ ಮತ್ತು ಡಿಜಿಟಲ್ ಆಯಾಮಗಳಿಂದ ರೂಪುಗೊಂಡ ಯುಗವನ್ನು ಪ್ರವೇಶಿಸುತ್ತಿರುವಾಗ, ಭವಿಷ್ಯಕ್ಕೆ ಸಿದ್ಧವಾದ ಅಡಿಪಾಯಗಳನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಧ್ಯಯನದ ಒಳನೋಟಗಳು ಕರ್ನಾಟಕದ ಡಿಜಿಟಲ್ ಮೂಲಸೌಕರ್ಯ ಚೌಕಟ್ಟಿನಲ್ಲಿ ಮಂಗಳೂರು ಒಂದು ಮಾದರಿ ಆಗಲು ಅಗ್ರ ಸ್ಥಾನದಲ್ಲಿದೆ. ಕರಾವಳಿ ಅನುಕೂಲ, ಸ್ಪರ್ಧಾತ್ಮಕ ಪರಿಸರ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಪ್ರತಿಭೆ ಮತ್ತು ಕೈಗಾರಿಕಾ ವ್ಯವಸ್ಥೆಯೊಂದಿಗೆ, ಈ ಪ್ರದೇಶವು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು' ಎಂದರು.
ಕೆಡಿಇಎಂ ಮತ್ತು ಸಿಲಿಕಾನ್ ಬೀಚ್ ಕಾರ್ಯಕ್ರಮದ ಸ್ಥಾಪಕ ಸದಸ್ಯ ರೋಹಿತ್ ಭಟ್ ಮಾತನಾಡಿ, ಮಂಗಳೂರು ಭಾರತದ ಪ್ರಮುಖ ಕರಾವಳಿ ಪ್ರದೇಶದಲ್ಲಿ ಪ್ರದೇಶ. ಈ ಸ್ಥಳವನ್ನು ಡೇಟಾ ಸೆಂಟರ್ ಆಗಿ ಹೇಗೆ ವಿಕಸನಗೊಳ್ಳಬಹುದು ಎಂಬುದಕ್ಕೆ ಈ ಕಾರ್ಯಸಾಧ್ಯತಾ ಅಧ್ಯಯನವು ಸ್ಪಷ್ಟ ನಿರೂಪಣೆ ನೀಡುತ್ತದೆ ಎಂದರು.
ಭಾರತಕ್ಕಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಿಲಿಕಾನ್ ಬೀಚ್‌ಅನ್ನು ರಚಿಸಬಹುದು. ಮಂಗಳೂರು ಇನ್ನು ಮುಂದೆ ಉದಯೋನ್ಮುಖ ನಗರ ಮಾತ್ರವಲ್ಲ, ಇದು ಭಾರತದ ಮುಂದಿನ ದೊಡ್ಡ ಅವಕಾಶ ಎಂದು ಅವರು ಹೇಳಿದರು.
ಈ ಯೋಜನೆಯ ನಿರೀಕ್ಷೆಗಳು: ಮಂಗಳೂರು ಉಡುಪಿ ಕರಾವಳಿ ತೀರದ ದೀರ್ಘಕಾಲೀನ ಡಿಜಿಟಲ್ ಮತ್ತು ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವುದು.
ಡೇಟಾ ಮೂಲಸೌಕರ್ಯ, ಎಂಜಿನಿಯರಿಂಗ್, ಕಾರ್ಯಾಚರಣೆಗಳು ಮತ್ತು ಕೃತಕ ಬುದ್ಧಿಮತ್ತೆ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವುದು.
ಕರ್ನಾಟಕವನ್ನು ದತ್ತಾಂಶ ವಲಯದಲ್ಲಿ ರಾಷ್ಟ್ರಕ್ಕೆ ನಾಯಕನಾಗಿ ಬೆಳೆಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.