ADVERTISEMENT

ಮಂಗಳೂರು| ಸಮುದಾಯದ ಅಭಿವೃದ್ಧಿಗೆ ಹೋರಾಟ ನಿರಂತರ: ಸುಶೀಲಾ ನಾಡ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 4:49 IST
Last Updated 22 ಸೆಪ್ಟೆಂಬರ್ 2025, 4:49 IST
‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸಬಿತಾ ಮೋನಿಸ್‌ ಅವರೊಂದಿಗೆ ಸಂವಾದ ನಡೆಯಿತು
‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸಬಿತಾ ಮೋನಿಸ್‌ ಅವರೊಂದಿಗೆ ಸಂವಾದ ನಡೆಯಿತು   

ಮಂಗಳೂರು: ‘ಸವಾಲುಗಳನ್ನು ಎದುರಿಸದ ಹೊರತು ನಾವು ಮುಂದುವರಿಯಲು ಸಾಧ್ಯವಿಲ್ಲ. ನನ್ನ ಹೋರಾಟದ ಹಾದಿಯಲ್ಲಿ ಈವರೆಗೆ ಜೀವ ಬೆದರಿಕೆ ಅಥವಾ ಇನ್ಯಾವುದೇ ಬೆದರಿಕೆ ಎದುರಿಸಿಲ್ಲ. ಒಂದು ವೇಳೆ ಬೆದರಿಕೆ ಬಂದರೆ ಎದುರಿಸಲು ಸಿದ್ಧ’ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಹೇಳಿದರು.

ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ ಸಾಹಿತ್ಯ ಸದನದಲ್ಲಿ ಭಾನುವಾರ ಆಯೋಜಿಸಿದ ‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ತಮ್ಮ ಜೀವನಾನುಭವ ತೆರೆದಿಟ್ಟರು.

‘ವೃತ್ತಿಯಿಂದ ವಜಾಗೊಳಿಸಿದರೆ ಕೂಲಿ ಕೆಲಸ ಮಾಡಿಯಾದರೂ ಜೀವನ ನಿರ್ವಹಣೆ ಮಾಡುತ್ತೇನೆ. ಸಮುದಾಯದ ಅಭಿವೃದ್ಧಿಗಾಗಿ ಹೋರಾಟದ ಹಾದಿಯಿಂದ ಹಿಂದೆ ಸರಿಯುವುದಿಲ್ಲ. ನನ್ನ ಜೀವನ ಮತ್ತು ಹೋರಾಟದ ಅನುಭವ, ನಮ್ಮ ಸಮುದಾಯದ ಮೇಲಾದ ದೌರ್ಜನ್ಯ, ಅದರ ವಿರುದ್ಧದ ಆಕ್ರೋಶಗಳಿಂದ ನಾನು ಪಾಠ ಕಲಿತೆದ್ದೇನೆಯೇ ಹೊರತು, ಇತರ ವ್ಯಕ್ತಿಗಳ ಜೀವನಗಾಥೆ, ಸಾಧನೆಯ ಸ್ಫೂರ್ತಿಯಿಂದಲ್ಲ’ ಎಂದರು. 

ಅಜಲು ಆಚರಣೆಗಳು ಈಗಲೂ ಇವೆ. ಆದರೆ ಅದನ್ನು ಆಚರಿಸುವ ವಿಧಾನ ಬೇರೆ. ಕೊರಗರ ಡೋಲು ಅಜಲು ಪದ್ಧತಿಯಲ್ಲ. ಆದರೆ ಕೊರಗರಿಂದ ಯಾವ ಸ್ಥಳದಲ್ಲಿ ಡೋಲನ್ನು ಬಾರಿಸಲಾಗುತ್ತದೆ ಎನ್ನುವುದು ಅಜಲು ಪದ್ಧತಿ. ದೇವರಿಗೆ ಕೊರಗರ ಡೋಲು ಅವಶ್ಯಕತೆ ಇದೆ ಎಂದರೆ ಕೊರಗರು ಎಲ್ಲಿರಬೇಕಿತ್ತು ಎಂದು ಪ್ರಶ್ನಿಸಿದ ಅವರು ಕೊರಗರು ಡೋಲು ಬಾರಿಸಲು ಅವರನ್ನು ದೇವಸ್ಥಾನ ಹೊರಗೆ ದೂರದಲ್ಲಿ ನಿಲ್ಲಿಸಲಾಗುತ್ತದೆ ಅದು ಅಜಲಿನ ಆಚರಣೆ. ಹಿಂದೆಲ್ಲಾ ಕೊರಗರ ಮನೆಯಲ್ಲಿ ಸಂಭ್ರಮ ಅಥವಾ ಸೂತಕ ಇದ್ದರೂ ಅವರು ಬೇರೆಯವರ ಮನೆಯಲ್ಲಿ ಡೋಲು ಬಡಿಯಬೇಕಿತ್ತು. ಆದರೆ ಇಂದು ಕೊರಗರಿಗೆ ಬೇಕಾದಷ್ಟು ಹಣ ಕೊಟ್ಟು ಸಾವಿನ ಮನೆಯಲ್ಲಿ ಅವರಿಂದ ಡೋಲು ಬಾರಿಸಲಾಗುತ್ತದೆ ಎಂದರು.

ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ. ನಾನು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ನನ್ನೊಂದಿಗೆ ಮಕ್ಕಳು, ಅವರ ಪೋಷಕರು ಆತ್ಮೀಯವಾಗಿದ್ದಾರೆ. ಆದರೆ ಅವರ ಮನೆಯ ಹಬ್ಬ, ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ಅವರ ಮನೆಯ ಒಳಗೆ ನಾವು ಪ್ರವೇಶಿಸುತ್ತೇವೆ ಎಂದು ಬೇರೆ ಸಮುದಾಯದವರನ್ನು ಕರೆದರೂ ಕೊರಗರನ್ನು ಕರೆಯುವುದಿಲ್ಲ ಎಂದು ಹೇಳಿದರು.

ಕೊರಗರು ಅಭಿವೃದ್ಧಿಯಾಗಬೇಕಾದರೆ ಅವರಿಗೆ ಎರಡೂವರೆ ಎಕರೆ ಭೂಮಿ ಒದಗಿಸಬೇಕೆಂದು 1993ರಲ್ಲಿ ಡಾ.ಮಹಮ್ಮದ್ ಪೀರ್ ವರದಿಯಲ್ಲಿ ಸರ್ಕಾರಕ್ಕೆ ಸೂಚಿಸಲಾಗಿತ್ತು. ಇಂದಿಗೂ ಅದು ಅನುಷ್ಠಾನಗೊಂಡಿಲ್ಲ. ನಾವು ಭೂಮಿಗಾಗಿ ಹೋರಾಟ ನಡೆಸಿ ಭೂಮಿ ದಕ್ಕಿಸಿಕೊಂಡಿದ್ದೇವೆಯೇ ವಿನಾ ವರದಿ ಒಪ್ಪಿಕೊಂಡ ಸರ್ಕಾರ ನೀಡಿಲ್ಲ. ಕೊರಗರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು ಭೂಮಿ ಆಧಾರಿತವಾಗಿವೆ. ಆದರೆ ತುಂಡುಭೂಮಿ ಇಲ್ಲದೇ ಇರುವವರಿಗೆ ಯೋಜನೆಯ ಲಾಭ ಹೇಗೆ ಪ‍ಡೆಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಸರ್ಕಾರವೇ ಭೂಮಿ ಗುರುತಿಸಿ ನೀಡಿದರೆ ಅದು ಉತ್ತಮ ಕಾರ್ಯವಾಗುತ್ತದೆ ಎಂದರು.

ನಿವೃತ್ತ ಪ್ರಾಧ್ಯಾಪಕಿ ಸಬಿಹಾ ಭೂಮಿ ಗೌಡ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ ಸಮಾರೋಪ ಭಾಷಣ ಮಾಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಭಾಗವಹಿಸಿದ್ದರು. ಲೇಖಕಿಯರಾದ ಜ್ಯೋತಿ ಚೇಳೈರು, ಯಶೋದಾ ಮೋಹನ್‌, ಮೋಲಿ ಮಿರಾಂಡ, ಗುಣವತಿ ರಮೇಶ್ ಸಂವಾದ ನಡೆಸಿಕೊಟ್ಟರು. ಆಕೃತಿ ಭಟ್ ಆಶಯ ಗೀತೆ ಹಾಡಿದರು.

‘ಸಾಧಕಿಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸುಶೀಲಾ ನಾಡ ಮಾತನಾಡಿದರು
ನ್ಯೂನತೆ ಮೆಟ್ಟಿನಿಂತ ಸಬಿತಾ
‘ಎರಡೂ ಕೈಗಳಿಲ್ಲದೆ ನಾನು ಹುಟ್ಟಿದ್ದರಿಂದ ಸುತ್ತಮುತ್ತಲ ಊರಿನವರು ಬಂದು ವಿಶೇಷ ಎಂಬಂತೆ ನನ್ನನ್ನು ನೋಡಿ ಹೋಗುತ್ತಿದ್ದರಂತೆ. ಕೈಗಳಿಲ್ಲದ ನನ್ನನ್ನು ಡ್ರೈವರ್‌ ಕೆಲಸ ಮಾಡಿಕೊಂಡಿದ್ದ ಅಪ್ಪ ಬೀಡಿ ಕಟ್ಟುತ್ತಿದ್ದ ಅಮ್ಮ ಕಷ್ಟಪಟ್ಟು ಸಾಕಿದ್ದಾರೆ. ಮುದ್ದಿನಿಂದ ಸಾಕಿ ವಿದ್ಯಾಳಂತಳನ್ನಾಗಿ ಬೆಳೆಸಿ ಜೀವನದ ಎಲ್ಲಾ ಹಂತಗಳಲ್ಲೂ ಜೊತೆಯಾಗಿದ್ದಾರೆ. ಅಕ್ಕಂದಿರು ಮಿತ್ರರು ಶಿಕ್ಷಕರು ಪ್ರೋತ್ಸಾಹಿಸಿದ್ದರಿಂದಾಗಿ ನ್ಯೂನತೆ ಮೆಟ್ಟಿನಿಂತು ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸಬಿತಾ ಮೋನಿಸ್‌ ತಮ್ಮ ಜೀವನಗಾಥೆ ನಿರೂಪಿಸಿದರು. ಅಂಗನವಾಡಿಗೆ ಹೋಗುತ್ತಿದ್ದ ನಾನು ಕಾಲಿಗೆ ಬಳಪ ಸಿಕ್ಕಿಸಿ ಬರೆಯುವುದು ಕಲಿತೆ. ಶಾಲೆಗೆ ದಾಖಲಾತಿ ಮಾಡಲು ತೆರಳಿದಾಗ ಅಲ್ಲಿ ನನ್ನನ್ನು ವಿಶೇಷ ಶಾಲೆಗೆ ಸೇರಿಸುವಂತೆ ಹೆತ್ತವರಿಗೆ ತಿಳಿಸಿದ್ದರು. ಅವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಎರಡು ವರ್ಷ ಅಂಗನವವಾಡಿಯಲ್ಲೇ ಕಳೆದೆ. 1ನೇ ತರಗತಿಯಲ್ಲಿ ಗೆಳತಿಯರೊಂದಿಗೆ ಕೂರುತ್ತಿದ್ದೆ. ಒಂದು ದಿನ ಅಧಿಕಾರಿಗಳು ಭೇಟಿ ನೀಡಿದಾಗ ನಾನು ಸ್ಲೇಟ್‌ನಲ್ಲಿ ಬರೆದಿದ್ದನ್ನು ಗಮನಿಸಿ ಯಾಕೆ ಅವಳನ್ನು ಇನ್ನೂ ದಾಖಲಿಸಿಲ್ಲ ಎಂದು ಪ್ರಶ್ನಿಸಿ ದಾಖಲಿಸಲು ಸೂಚಿಸುತ್ತಾರೆ. ಅಲ್ಲಿಂದ ನಾನು ಹಿಂತಿರುಗಿ ನೋಡಿಲ್ಲ. ಶೈಕ್ಷಣಿಕ ಸಾಧನೆ ಮಾಡುತ್ತಾ ಹೋಗಿ ಮುಂದೆ ಎಂ.ಎಸ್‌ಡಬ್ಲ್ಯೂ ಪದವಿ ಮಾಡಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.