ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯ: ಕಾಲೇಜುಗಳ ಸಂಖ್ಯೆ 155ಕ್ಕೆ ಇಳಿಕೆ

ಮಂಗಳೂರು ವಿ.ವಿ: ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸದ 5 ಕಾಲೇಜುಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 14:28 IST
Last Updated 8 ಜನವರಿ 2025, 14:28 IST
ಸಭೆಯಲ್ಲಿ ಕುಲಪತಿ ಪ್ರೊ.‌ಪಿ.ಎಲ್.ಧರ್ಮ ಮಾತನಾಡಿದರು. ಕುಲಸಚಿವ ಕೆ.ರಾಜು ಮೊಗವೀರ ಭಾಗವಹಿಸಿದ್ದರು
ಸಭೆಯಲ್ಲಿ ಕುಲಪತಿ ಪ್ರೊ.‌ಪಿ.ಎಲ್.ಧರ್ಮ ಮಾತನಾಡಿದರು. ಕುಲಸಚಿವ ಕೆ.ರಾಜು ಮೊಗವೀರ ಭಾಗವಹಿಸಿದ್ದರು   

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಐದು ಕಾಲೇಜುಗಳು 2025–26ನೇ ಸಾಲಿನಲ್ಲಿ ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳ ಸಂಖ್ಯೆ 155ಕ್ಕೆ ಕುಸಿದಿದೆ.

ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ 2025–26ನೇ ಸಾಲಿನಲ್ಲಿ 33 ಸರ್ಕಾರಿ ಕಾಲೇಜುಗಳು, 104 ಖಾಸಗಿ ಆಡಳಿತದ ಕಾಲೇಜುಗಳು ಹಾಗೂ  ಶಾಶ್ವತ ಸಂಯೋಜನೆ ಹೊಂದಿರುವ ಐದು ಕಾಲೇಜುಗಳು, ಒಂಬತ್ತು ಸ್ವಾಯತ್ತ ಕಾಲೇಜುಗಳು ಹಾಗೂ ನಾಲ್ಕು ಘಟಕ ಕಾಲೇಜುಗಳು ಮಾತ್ರ ಮಾನ್ಯತೆ ಮುಂದುವರಿಸಿವೆ. 

2024–25ನೇ ಸಾಲಿನಲ್ಲಿ ಮಾನ್ಯತೆ ನವೀಕರಣಕ್ಕೆ 12 ಕಾಲೇಜುಗಳು ಅರ್ಜಿ ಸಲ್ಲಿಸಿರಲಿಲ್ಲ. 

ADVERTISEMENT

ಕುಲಪತಿ ಪ್ರೊ.ಪಿ.ಎಲ್‌. ಧರ್ಮ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಗಣೇಶ್‌ ಸಂಜೀವ್‌ ಈ ವಿಚಾರ ತಿಳಿಸಿದರು. 

‘ಮಂಗಳೂರಿನ ಕೆನರಾ ವಿಕಾಸ್ ಪ್ರಥಮ ದರ್ಜೆ ಕಾಲೇಜು, ನಿಧಿ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಯೇಟಿವ್‌ ಆರ್ಟ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ಮೊಡಂಕಾಪುವಿನ ಕಾರ್ಮೆಲ್‌ ಕಾಲೇಜು, ಪುತ್ತೂರಿನ ಮೇಧಾ ಕಾಲೇಜು, ಸಿದ್ಧಕಟ್ಟೆಯ ಗುಣಶ್ರೀ ಪ್ರಥಮ ದರ್ಜೆ ಕಾಲೇಜುಗಳು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಹೊಸ ತಂಡದ ಸೇರ್ಪಡೆಯ ಸಲುವಾಗಿ ಮಾನ್ಯತೆ ನವೀಕರಣ ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸಿಲ್ಲ. ಈ ಕಾಲೇಜುಗಳಲ್ಲಿನ ಎರಡನೇ ವರ್ಷದ ಹಾಗೂ ಮೂರನೇ ವರ್ಷದ ವಿದ್ಯಾರ್ಥಿಗಳು ಕಲಿಕೆ ಮುಂದು
ವರಿಸುವುದಕ್ಕೆ ಅಡ್ಡಿ ಇಲ್ಲ’ ಎಂದರು.

‘ಕಾಲೇಜುಗಳು ಮಾನ್ಯತೆ ನವೀಕರಿಸದಿದ್ದರೂ ಮುಂದುವರಿಕೆ ಶುಲ್ಕ ಪಾವತಿಸಿ, ಅದನ್ನು ಉಳಿಸಿಕೊಳ್ಳಲು ಹಿಂದೆ ಅವಕಾಶವಿತ್ತು. ಸತತ ಮೂರು ವರ್ಷಗಳು ಮಾನ್ಯತೆ ನವೀಕರಿಸದೇ ಹೋದರೆ ಮಾತ್ರ, ಕಾಲೇಜಿನ ಚಟುವಟಿಕೆ ಮುಂದುವರಿಸಲು ವಿಶ್ವವಿದ್ಯಾನಿಲಯಕ್ಕೆ ಹೊಸತಾಗಿ ಅರ್ಜಿ ಸಲ್ಲಿಸಬೇಕಾಗುತ್ತಿತ್ತು. ಆದರೆ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ  ನಿರ್ವಹಣೆಯ ಏಕೀಕೃತ ವ್ಯವಸ್ಥೆ (ಯುಯುಸಿಎಂಎಸ್‌) ಜಾರಿಯಾದ ಬಳಿಕ ಕಾಲೇಜುಗಳು ಅರ್ಜಿ ಸಲ್ಲಿಸಿದೇ, ಕೇವಲ ಮುಂದುವರಿಕೆ ಶುಲ್ಕ ಪಾವತಿಸಿ ಮಾನ್ಯತೆಯನ್ನು ಉಳಿಸಿಕೊಳ್ಳಲು ಅವಕಾಶವಿಲ್ಲ. ಒಂದು ವರ್ಷ ಮಾನ್ಯತೆ ನವೀಕರಿಸದಿದ್ದರೂ ಮತ್ತೆ ಮಾನ್ಯತೆ ಪಡೆಯಬೇಕಾದರೆ, ಹೊಸತಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು. 

ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ವಿಶ್ವವಿದ್ಯಾನಿಲಯದ ಅಧೀನದ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದೆ. 135 ಕಾಲೇಜುಗಳ ಮಾನ್ಯತೆ ಮುಂದುವರಿಸಲು ಸಮಿತಿ ಶಿಫಾರಸು ಮಾಡಿತ್ತು. 32 ಕಾಲೇಜುಗಳಲ್ಲಿ ಹೊಸ ಕೋರ್ಸ್‌ ಆರಂಭಿಸಲು ಹಾಗೂ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಪರಿಷ್ಕರಿಸಲು ಅನುಮೋದನೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.

ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಉಡುಪಿ ಅಜ್ಜರಕಾಡಿನ ಜಿ.ಶಂಕರ್‌ ಪ್ರಥಮ ದರ್ಜೆ ಕಾಲೇಜುಗಳು ಶಾಶ್ವತ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು. 

ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕೂಡ ಶಾಶ್ವತ ಅನುಮೋದನೆಗೆ ಅರ್ಜಿ ಸಲ್ಲಿಸಿತ್ತು. ಆದರೆ ಆ ಕಾಲೇಜು ನ್ಯಾಕ್‌ ಮಾನ್ಯತೆ ನವೀಕರಿಸಿರಲಿಲ್ಲ. ಆ ಕಾಲೇಜಿಗೆ ಶಾಶ್ವತ ಮಾನ್ಯತೆ ನೀಡುವ ಬದಲು ತಾತ್ಕಾಲಿಕ ಮಾನ್ಯತೆಯನ್ನು ಮುಂದುವರಿಸಬಹುದು ಎಂದು ಸ್ಥಳೀಯ ವಿಚಾರಣಾ ಸಮಿತಿ ಶಿಫಾರಸು ಮಾಡಿತ್ತು. ನ್ಯಾಕ್‌ ನಿಂದ ತ್ವರಿತವಾಗಿ ಮಾನ್ಯತೆ ಪಡೆಯುವ ಷರತ್ತು ವಿಧಿಸಿ ಆ ಕಾಲೇಜಿಗೆ ಶಾಶ್ವತ ಮಾನ್ಯತೆ ನೀಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಹೊಸ ಕೋರ್ಸ್‌: ವಿ.ವಿ ಗಮನಕ್ಕೆ ತರುವುದು ಕಡ್ಡಾಯ’

ಯಾವುದೇ ಸ್ವಾಯತ್ತ ಕಾಲೇಜು ಹೊಸ ಕೋರ್ಸ್‌ಗಳನ್ನು ಆರಂಭಿಸುವುದಕ್ಕೆ ಮುನ್ನ ವಿಶ್ವವಿದ್ಯಾಲಯದ ಗಮನಕ್ಕೆ ತರಬೇಕು. ಕೋರ್ಸ್‌ಗಳಿಗೆ ವಿಶ್ವವಿದ್ಯಾನಿಲಯದ ಪ್ರತಿನಿಧಿಯನ್ನು ಹೊಂದಿರುವ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಕುಲಪತಿ ಪ್ರೊ.ಪಿ.ಎಲ್‌.ಧರ್ಮ ತಿಳಿಸಿದರು.

ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ 2024–25ನೇ ಸಾಲಿನಲ್ಲಿ ಆರಂಭಿಸಿರುವ ಬಿಸಿಎ (ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ) ಮತ್ತು ಬಿಸಿಎ (ಡೇಟಾ ಅನಾಲಿಟಿಕ್ಸ್‌) ಕೋರ್ಸ್‌ಗಳಿಗೆ ತಲಾ ವಿದ್ಯಾರ್ಥಿಗಳ ಪ್ರವೇಶಾತಿಗೆ ಬಿಎಸ್ಸಿ (ಮನೋವಿಜ್ಞಾನ ಸಸ್ಯವಿಜ್ಞಾನ ಪ್ರಾಣಿವಿಜ್ಞಾನ) ಕೋರ್ಸ್‌ಗೆ ಘಟನೋತ್ತರ ಅನುಮೋದನೆ ನೀಡಲಾಯಿತು.

‘ಈ ಕೋರ್ಸ್‌ಗಳನ್ನು ಕಾಲೇಜು ವಿಶ್ವವಿದ್ಯಾಲಯದ ಗಮನಕ್ಕೆ ತಾರದೆಯೇ ಆರಂಭಿಸಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಇದಕ್ಕೆ ಅನುಮೋದನೆ ನೀಡುತ್ತಿದ್ದೇವೆ. ಇನ್ನು ಯಾವುದೇ ಕಾಲೇಜು ವಿಶ್ವವಿದ್ಯಾಲಯದ ಗಮನಕ್ಕೆ ತಾರದೆಯೇ ಹೊಸ ಕೋರ್ಸ್‌ ಆರಂಭಿಸುವುದನ್ನು ಅವಕಾಶ ನೀಡುವುದಿಲ್ಲ’ ಎಂದು ಕುಲಪತಿ ತಿಳಿಸಿದರು. 

ಹೊಸ ಕೋರ್ಸ್‌ಗಳ ಕುರಿತು ಪರಿಶೀಲನೆ ನಡೆಸಲು ಸಮಿತಿಯನ್ನು ವಿಶ್ವವಿದ್ಯಾಲಯ ರಚಿಸಿತ್ತು. ಆ ಸಮಿತಿಯು ಈ ಕೋರ್ಸ್‌ಗಳಿಗೆ ಅನುಮೋದನೆ ನೀಡಬಹುದು ಎಂದು ಶಿಫಾರಸು ಮಾಡಿತ್ತು. ಬಿಸಿಎ (ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ) ಕೋರ್ಸ್‌ಗೆ ಬೇಡಿಕೆ ಹೆಚ್ಚಿದ್ದರಿಂದ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 60ರಿಂದ 120ಕ್ಕೆ ಹೆಚ್ಚಿಸಲು ಕಾಲೇಜಿನ ಪ್ರಾಂಶುಪಾಲರು  ಅನುಮೋದನೆ ಕೋರಿದ್ದರು. ಅದಕ್ಕೂ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.

ತುಳು ವಿಭಾಗ– ಕರಡು ನಿಯಮ ಅನುಮೋದನೆ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಭಾಷೆಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸ್ಥಾಪನೆಗೆ ಸಂಬಂಧಿಸಿದ ಕರಡು ನಿಯಮಾವಳಿಗೆ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿತು. ‘ಈ ಕರಡು ನಿಯಮಾವಳಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಅನುಮೋದನೆ ಸಿಕ್ಕ ಬಳಿಕ ತುಳು ಸ್ನಾತಕೋತ್ತರ ವಿಭಾಗವನ್ನು ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕುಲಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.