ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯ; ಡಿಜಿಲಾಕರ್‌ ಲೋಪ: ಸಿಗುತ್ತಿಲ್ಲ ಅಂಕಪಟ್ಟಿ

ಮಂಗಳೂರು ವಿಶ್ವವಿದ್ಯಾನಿಲಯ: ಅಂಕ ಪಟ್ಟಿ ನೀಡದೆಯೂ ಶುಲ್ಕ ವಸೂಲಿ– ವಿದ್ಯಾರ್ಥಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 6:47 IST
Last Updated 17 ಆಗಸ್ಟ್ 2024, 6:47 IST
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳೂರು ವಿಶ್ವವಿದ್ಯಾನಿಲಯ   

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ನೀಡುವ ವ್ಯವಸ್ಥೆಯ ದೋಷಪೂರಿತವಾಗಿದೆ. ಅಂಕಪಟ್ಟಿಗೆ ಶುಲ್ಕ ಪಡೆಯುವ ವಿಶ್ವವಿದ್ಯಾನಿಲಯ  ವಿದ್ಯಾರ್ಥಿಗಳ ಸಮಸ್ಯೆ ನೀಗಿಲಸು ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಈ ಬಗ್ಗೆ ಕೆಲ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಜೊತೆ ತಮ್ಮ ನೋವು ತೋಡಿಕೊಂಡಿದ್ದಾರೆ.

‘ಶುಲ್ಕ ಪಾವತಿಸಿದ ನಂತರವೂ ಅಂಕಪಟ್ಟಿಯಲ್ಲಿ ಹಲವು ಲೋಪದೋಷಗಳು ಕಂಡುಬರುತ್ತಿವೆ. ಇದರಿಂದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಸದ್ಯಕ್ಕೆ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣೆಯ ಏಕೀಕೃತ ವ್ಯವಸ್ಥೆ (ಯುಯುಸಿಎಂಎಸ್‌) ಪೋರ್ಟಲ್‌ನಲ್ಲಿ ಲಭ್ಯ ಇರುವ ಅಂಕಪಟ್ಟಿಗಳನ್ನು ಸಲ್ಲಿಸಿ ಎನ್ನುತ್ತಿದ್ದಾರೆ. ಸಕಾಲಕ್ಕೆ ಕೈಸೇರದ ಅಂಕಪಟ್ಟಿಯಿಂದಾಗಿ ಉದ್ಯೋಗಾವಕಾಶಗಳು ಕೈತಪ್ಪುತ್ತಿವೆ’ ಎಂದು ಕೇರಳದ ವಿದ್ಯಾ ಅಳಲು ತೋಡಿಕೊಂಡರು.  

ADVERTISEMENT

‘2023-24ರ ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾನಿಲಯ 27 ವಿಭಾಗಗಳಲ್ಲಿ ಸುಮಾರು 2,116 ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದು, ಪ್ರತಿ ಸೆಮಿಸ್ಟರ್‌ಗೆ ತಲಾ ₹230 ಅಂಕಪಟ್ಟಿ ಶುಲ್ಕವನ್ನು ಪಾವತಿಸಿದ್ದಾರೆ. ಅಂಕಪಟ್ಟಿ ಪ್ರೊಸೆಸಿಂಗ್ ಶುಲ್ಕದ ಹೆಸರಿನಲ್ಲಿ ಪ್ರತಿ ಸೆಮಿಸ್ಟರ್‌ಗೆ ವಿವಿಯ ಬೊಕ್ಕಸಕ್ಕೆ ವಿದ್ಯಾರ್ಥಿಗಳಿಂದ ಸುಮಾರು ₹5 ಲಕ್ಷ ಸೇರುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ವಿದ್ಯಾರ್ಥಿನಿ ಷರಿಶ್ಮಾ ಪ್ರಶ್ನಿಸಿದರು.

‘ಈ ಹಿಂದೆ ಅಂಕಪಟ್ಟಿ ಪ್ರತಿಗಳನ್ನು ಟೆಂಡರ್ ಕರೆದು ಮುದ್ರಿಸಲಾಗುತ್ತಿತ್ತು. ಇದಕ್ಕಾಗಿ ಪ್ರತಿ ಸೆಮಿಸ್ಟರ್‌ಗೆ ತಲಾ ₹230 ಮುದ್ರಣ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಬೇಕಿತ್ತು. ಆದರೆ, ಡಿಜಿ ಲಾಕರ್ ವ್ಯವಸ್ಥೆ ಜಾರಿಗೆ ಬಂದಮೇಲೂ ಈ ಶುಲ್ಕದಲ್ಲಿ ರಿಯಾಯಿತಿ ನೀಡದಿರುವುದು ಸರಿಯಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ’ ಎಂದು ವಾಯ್ಸ್ ಆಫ್ ಸ್ಟೂಡೆಂಟ್ಸ್ ವಿದ್ಯಾರ್ಥಿ ಸಂಘಟನೆಯ ಸದಸ್ಯ ನಿಖಿಲ್‌ ಹೇಳಿದರು.

‘ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿದಾಗ ಕೆಲವೊಮ್ಮೆ ಖಾಲಿ ಬರುತ್ತಿವೆ. ಪೂರ್ತಿ ಭರ್ತಿಯಾಗದ ಪುಟಗಳು ಕೈ ಸೇರುತ್ತಿವೆ. ಅನೇಕ ಸಲ ಪ್ರಯತ್ನಿಸಿದರೂ ಅಂಕಪಟ್ಟಿಯ ದೋಷ ಸರಿಯಾಗಿಲ್ಲ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ’ ಎಂದು ವಿದ್ಯಾರ್ಥಿ ಲಿನ್ಸ ದೂರಿದರು.

‘ಅಂಕಪಟ್ಟಿಯನ್ನು ನೀಡದಿದ್ದರೂ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಂದ ಪ್ರತಿ ಸೆಮಿಸ್ಟರ್‌ಗೆ ₹230  ಸಂಗ್ರಹಿಸುತ್ತಿದೆ. ಈ ಹಣವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎನ್ನುವುದು ಇದುವರೆಗೆ ನಮಗೆ ತಿಳಿದಿಲ್ಲ. ಮುದ್ರಿತ ಅಂಕಪಟ್ಟಿ ನೀಡದಿದ್ದರೆ ವಿದ್ಯಾರ್ಥಿಗಳಿಂದ ₹230 ಶುಲ್ಕ ಸಂಗ್ರಹಿಸುವುದನ್ನೂ ನಿಲ್ಲಿಸಬೇಕು’ ಎಂದು ವಿದ್ಯಾರ್ಥಿ ಶಂಕರ್ ಓಬಳಬಂಡಿ ಒತ್ತಾಯಿಸಿದರು.

‘ಕಷ್ಟ ಪಟ್ಟು ಪರೀಕ್ಷೆ ಬರೆದು ತೇರ್ಗಡೆ ಹೊಂದಿದರೂ ಡಿಜಿ ಲಾಕರ್‌ನಲ್ಲಿ ಅನುತ್ತೀರ್ಣ ಎಂದು ನಮೂದಿಸಲಾಗಿದೆ. ಸ್ನಾತಕೋತ್ತರ ಪದವಿ ಮುಗಿಸಿ ವರ್ಷ ಕಳೆದರೂ ಈ ಸಮಸ್ಯೆ ಬಗೆಹರಿಯಲಿಲ್ಲ. ಅಂಕಪಟ್ಟಿಯ ಮುದ್ರಿತ ಪ್ರತಿಗಾಗಿ ಬೇಡಿಕೆ ಇಟ್ಟಾಗ ಡಿಜಿ ಲಾಕರ್‌ನಲ್ಲೇ ಅಂಕಪಟ್ಟಿ ಅಪ್‌ಲೋಡ್‌ ಮಾಡಬೇಕು ಎಂಬುದು ಸರ್ಕಾರದ ನಿಯಮ. ಅದನ್ನು ಮೀರಲಾಗುವುದಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ವಿದೇಶದಲ್ಲಿ ದೊರೆತಿದ್ದ ಉನ್ನತ ಉದ್ಯೋಗವನ್ನು ಅಂಕ ಪಟ್ಟಿ ಸಿಗದ ಕಾರಣಕ್ಕೆ ಕಳೆದುಕೊಂಡೆ’ ಎಂದು ವಿವಿಯ ಹಳೆ ವಿದ್ಯಾರ್ಥಿ ಅಶಾಮ್ ಹೇಳಿದರು.

ಸಮಸ್ಯೆಗೆ ಶೀಘ್ರ ಪರಿಹಾರ

‘ಡಿಜಿಲಾಕರ್‌ನಿಂದ ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳುವಾಗ ತೊಂದರೆ ಎದುರಿಸುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಇದು ವಿಶ್ವವಿದ್ಯಾನಿಲಯದ ಕಡೆಯಿಂದ ಆದ ಲೋಪ ಅಲ್ಲ. ನಾವು ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಯುಯುಸಿಎಂಎಸ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಿದ್ದೇವೆ. ಈ ಸಮ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಸರ್ಕಾರಕ್ಕೆ ಈಗಾಗಲೇ ಎರಡು ಸಲ ಪತ್ರ ಬರೆದಿದ್ದೇವೆ. ಶೀಘ್ರವೇ ಇನ್ನೊಂದು ಪತ್ರ ಬರೆದು ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್‌.ದೇವೇಂದ್ರಪ್ಪ ಪ್ರತಿಕ್ರಿಯಿಸಿದರು.

‘ವಿದ್ಯಾರ್ಥಿಗಳಿಂದ ಅಂಕಪಟ್ಟಿ ಸಲುವಾಗಿ ಶುಲ್ಕ ಪಡೆದಿದ್ದು ನಿಜ. ಅದನ್ನು ಅಂಕಪಟ್ಟಿಯ ಮುದ್ರಣದ ಹೊರತಾಗಿಯೂ ಅನೇಕ ಪ್ರಕ್ರಿಯೆಗಳಿರುತ್ತವೆ. ಅದರ ವೆಚ್ಚ ಭರಿಸಲು ಶುಲ್ಕ ಹಣವನ್ನು ಬಳಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಂಕಪಟ್ಟಿ ಶುಲ್ಕ ಪರಿಷ್ಕರಣೆಗೆ ಕ್ರಮ ವಹಿಸಲಿದ್ದೇವೆ’  ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.