
ಮಂಗಳೂರು: ‘ಸ್ವಯಂಸೇವಕರು ಪರಿಣಾಮಕಾರಿ ಬದಲಾವಣೆ ಮೂಲಕ ಹೆಚ್ಚು ಸುಸ್ಥಿರ, ಪ್ರಗತಿಪರ ರಾಷ್ಟ್ರ ನಿರ್ಮಿಸಬಲ್ಲರು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಯುನೈಟೆಡ್ ನೇಷನ್ಸ್ ವಲಿಂಟಿಯರ್ಸ್ ಇಂಡಿಯಾ ಸಹಭಾಗಿತ್ವದಲ್ಲಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಾಯೋಜಕತ್ವದಲ್ಲಿ ಯುವನಿಕಾ ಫೌಂಡೇಷನ್, ಆರೋಗ್ಯ ಸ್ವಯಂಸೇವಕರು ಸಂಸ್ಥೆ, ಸೇಂಟ್ ಆ್ಯಗ್ನೆಸ್ ಕಾಲೇಜು ಸಹಯೋಗದಲ್ಲಿ ಕಾಲೇಜಿನಲ್ಲಿ ‘ಪ್ರತಿಯೊಂದು ಕೊಡುಗೆಯೂ ಮುಖ್ಯ’ ಶೀರ್ಷಿಕೆಯಡಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಅಂತರರಾಷ್ಟ್ರೀಯ ಸ್ವಯಂಸೇವಕರ ದಿನದ ಮಹತ್ವದ ಕುರಿತು ಮಾತನಾಡಿದರು. ಸ್ವಯಂಸೇವಕರು ಸಹಾನುಭೂತಿ, ಜವಾಬ್ದಾರಿ, ಉದ್ದೇಶದೊಂದಿಗೆ ಮುನ್ನಡೆಯುವಂತೆ ಪ್ರೇರೇಪಿಸಿದರು.
ವಿಶ್ವ ಸಂಸ್ಥೆ ಸ್ವಯಂಸೇವಕರ ಏಷ್ಯಾ ಮತ್ತು ಪೆಸಿಫಿಕ್ ಪ್ರಾದೇಶಿಕ ವ್ಯವಸ್ಥಾಪಕ ಕ್ರಿಶ್ಚಿಯನ್ ಹೇನ್ಜಲ್ (hainzl), ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಭಾಗವಹಿಸಿದ್ದರು. ಪ್ರಾಂಶುಪಾಲೆ ಎಂ. ವೆನಿಸ್ಸಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಸಂಸ್ಥೆ ಪ್ರಾಂಶುಪಾಲ ಎಂ. ಜೈಕಿಶನ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮ ಸಂಯೋಜಕ, ಯುವನಿಕಾ ಫೌಂಡೇಷನ್‌ನ ರಘುವೀರ್ ಸೂಟರ್‌ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಸ್ವಯಂಸೇವಕ ಸಂಸ್ಥೆಯ ನಿರ್ದೇಶಕಿ ರಿಷಿ ಬನ್ಸಿವಾಲ್ ಸ್ವಯಂಸೇವಕ ಅವಕಾಶಗಳ ಕುರಿತು ಮಾತನಾಡಿದರು.
ಅಂತರರಾಷ್ಟ್ರೀಯ ಸ್ವಯಂಸೇವಕರ ದಿನ 2025 ದಿನ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಸ್ವಯಂಸೇವಕರನ್ನು ಗೌರವಿಸಲಾಯಿತು. ಕ್ಯಾಡೆಟ್ ಸೆಲಿನ್ ಡಿಸಿಲ್ವ (ಆಲ್ ಇಂಡಿಯಾ ವಾಯು ಸೈನಿಕ್ ಕ್ಯಾಂಪ್), ಕ್ಯಾಡೆಟ್ ಸೋನಾಲ್ ಜೆಸಿಕಾ ಕ್ರಾಸ್ಟ (ಪ್ಯಾರಾ ಬೇಸಿಕ್ ಕೋರ್ಸ್, ಸೇಂಟ್ ಆ್ಯಗ್ನೆಸ್ ಕಾಲೇಜು), ಹಿತೇಷ್ ಬಂಗೇರ (ವಿಶ್ವವಿದ್ಯಾನಿಲಯ ಕಾಲೇಜು) ಅವರನ್ನು ಅವರ ನಾಯಕತ್ವ, ಸ್ವಯಂಸೇವೆಗಾಗಿ ಸನ್ಮಾನಿಸಲಾಯಿತು. ಗಾಯತ್ರಿ ಬಿ.ಕೆ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.