ADVERTISEMENT

ಮಂಗಳೂರು | ಪಿಸ್ತೂಲ್ ಹಂಚಿದ ಆರೋಪಿಗೆ ಪಿಎಫ್ಐ ನಂಟು; ಐವರ ಬಂಧನ

ಶಸ್ತ್ರಾಸ್ತ್ರ ಮತ್ತು ಮಾದಕ ಪದಾರ್ಥ ಸಾಗಾಟ: 3 ಪಿಸ್ತೂಲು, 6 ಸಜೀವ ಗುಂಡು ವಶ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 4:18 IST
Last Updated 14 ಮಾರ್ಚ್ 2025, 4:18 IST
ಅಬ್ದುಲ್ ಲತೀಫ್
ಅಬ್ದುಲ್ ಲತೀಫ್   

ಮಂಗಳೂರು: ಶಸ್ತ್ರಾಸ್ತ್ರ ಮತ್ತು ಮಾದಕ ಪದಾರ್ಥ ಸಾಗಾಟಕ್ಕೆ ಸಂಬಂಧಿಸಿ ನಗರ ಅಪರಾಧ ಪತ್ತೆ ದಳದ ಸಿಬ್ಬಂದಿ ಬುಧವಾರ ಮತ್ತು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಪಿಸ್ತೂಲು ಮತ್ತು 12.9 ಕೆಜಿ ಗಾಂಜಾ ಸಹಿತ ಕೇರಳದ ಕಾಸರಗೋಡಿನ ಐವರನ್ನು ಬಂಧಿಸಲಾಗಿದೆ. ಇವರ ಪೈಕಿ ಒಬ್ಬನಿಗೆ ನಿಷೇಧಿತ ಸಂಘಟನೆ ಪಿಎಫ್‌ಐ ಜೊತೆ ನಂಟು ಇದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್‌ ತಿಳಿಸಿದರು.

ನಾಟೆಕಲ್ ಬಳಿ ವೆಸ್ಟ್ ಏಳೇರಿಯ ಮುಸ್ತಾಫ ಅವರ ಮಗ ನೌಫಲ್‌ ಮತ್ತು ಪೈವಳಿಕೆ ಸುಂಕದಕಟ್ಟೆ ಅಬ್ದುಲ್ ರೆಹಮಾನ್ ಅವರ ಮಗ ಮನ್ಸೂರ್‌, ಅರ್ಕುಳದಲ್ಲಿ ಕಾಸರಗೋಡು ಮಂಗಲ್ಪಾಡಿ ಕೋಟಾ ಹೌಸ್‌ನ ಮೊಹಮ್ಮದ್ ಅವರ ಮಗ ಅಬ್ದುಲ್ ಲತೀಫ್ ಅಲಿಯಾಸ್ ತೋಕ್ ಲತೀಫ್‌, ತಲಪಾಡಿಯಲ್ಲಿ ಕಡಂಬಾರ್‌ನ ದಿ.ಉಮ್ಮರ್ ಅವರ ಮಗ ಮೊಹಮ್ಮದ್ ಅಸ್ಗರ್‌ ಮತ್ತು ಮೊಹಮ್ಮದ್ ಅವರ ಮಗ ಮೊಹಮ್ಮದ್ ಸಾಲಿಯನ್ನು ಬಂಧಿಸಲಾಗಿದೆ. ಅಬ್ದುಲ್ ಲತೀಫ್‌ಗೆ ಪಿಎಫ್ಐ ಜೊತೆ ನಂಟು ಇದೆ ಎಂದು ಅವರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಹೊರವಲಯದ ವಾಮಂಜೂರು ಬಳಿಯ ಗುಜರಿ ಅಂಗಡಿಯಲ್ಲಿ ಜನವರಿಯಲ್ಲಿ ಆಕಸ್ಮಿಕವಾಗಿ ಗುಂಡು ಪ್ರಕರಣದಲ್ಲಿ ಬಂಧಿತ ಅದ್ದು ಅಲಿಯಾಸ್ ಬದ್ರುದ್ದೀನ್‌ಗೆ ಪಿಸ್ತೂಲ್ ಸರಬರಾಜು ಮಾಡಿದ ಆರೋಪಿ ಅಬ್ದುಲ್‌ ಲತೀಫ್‌. ಬದ್ರುದ್ದೀನ್ ಪಿಎಫ್ಐ ಸಂಘಟನೆಯ ಸದಸ್ಯ ಆಗಿದ್ದ ಎಂದರು.

ADVERTISEMENT

ನಾಟೆಕಲ್ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಶಂಕಾಸ್ಪದ ರೀತಿಯಲ್ಲಿ ಕಂಡುಬಂದ ಕೆಎಲ್ 14 ಜಿ 9080 ಸ್ಕಾರ್ಪಿಯೊದಲ್ಲಿ ಓಡಾಡುತ್ತಿದ್ದ ನೌಫಲ್ ಮತ್ತು ಮನ್ಸೂರ್‌ನನ್ನು ಪರಿಶೀಲಿಸಿದಾಗ 2 ಪಿಸ್ತೂಲ್‌ಗಳು, 4 ಸಜೀವ ಗುಂಡುಗಳು ಲಭಿಸಿವೆ. ವಾಹನ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಕೂಡ ಅವರಿಂದ ವಶಕ್ಕೆ ಪಡೆಯಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅರ್ಕುಳದಲ್ಲಿ ಅಬ್ದುಲ್ ಲತೀಫ್ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆತನಿಂದ ಕೆಎಲ್ 10 ಬಿಸಿ 6548 ಕಾರು, ಗಾಂಜಾ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಎಂಎಚ್‌ 02 ಬಿಟಿ 2287 ವೋಕ್ಸ್‌ ವ್ಯಾಗನ್‌ ಕಾರಿನಲ್ಲಿ ತೆರಳುತ್ತಿದ್ದ ಮೊಹಮ್ಮದ್ ಅಸ್ಗರ್ ಮತ್ತು ಮೊಹಮ್ಮದ್ ಸಾಲಿ ಬಳಿ ಒಂದು ಪಿಸ್ತೂಲ್‌, 2 ಸಜೀವ ಗುಂಡು ಪತ್ತೆಯಾಗಿದೆ. ಮೂರೂ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೌಲ್ಯ ₹ 40 ಲಕ್ಷ 50ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು. 

ವಿವಿಧ ಪ್ರಕರಣಗಳ ಆರೋಪಿಗಳು

ಬಂಧಿತರೆಲ್ಲರೂ ವಿವಿಧ ಪ್ರಕರಣಗಳಲ್ಲಿ ಕೇರಳ ಮತ್ತು ಕರ್ನಾಟಕ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು ಎಂದು ತಿಳಿಸಿದ ಅಗರವಾಲ್ ಅವರು ಅಬ್ದುಲ್‌ ಲತೀಫ್ ಕಳೆದ ವರ್ಷ ಉಳ್ಳಾಲದ ಅಸ್ಗರ್ ಎಂಬಾತನಿಗೆ ಪಿಸ್ತೂಲ್ ನೀಡಿದ ಪ್ರಕರಣದಲ್ಲಿಇ ಭಾಗಿಯಾಗಿದ್ದಾನೆ. ಕೊಲೆ, ಕೊಲೆ ಯತ್ನ, ಹಲ್ಲೆ, ದರೋಡೆ ಸೇರಿದಂತೆ 13 ಪ್ರಕರಣಗಳು ಈತನ ಮೇಲೆ ಇವೆ ಎಂದರು. ನೌಫಲ್ ಮೇಲೆ ಮಾದಕ ಪದಾರ್ಥ ಸಾಗಾಟಕ್ಕೆ ಸಂಬಂಧಿಸಿ ಕೇರಳದಲ್ಲಿ 6 ಪ್ರಕರಣಗಳು ದಾಖಲಾಗಿದ್ದು ಮನ್ಸೂರ್ ಮಾದಕ ವಸ್ತು ಸಾಗಾಟ ಹಾಗೂ ಜೀವ ಬೆದರಿಕೆಯ 4 ಪ್ರಕರಣಗಳು ಇವೆ. ಮೊಹಮ್ಮದ್ ಅಸ್ಗರ್ ದರೋಡೆ, ಕೊಲೆಯತ್ನ, ಮಾದಕ ವಸ್ತು ಸಾಗಾಟದ 17 ಪ್ರಕರಣಗಳು ಮತ್ತು ಮೊಹಮ್ಮದ್ ಸಾಲಿ ಮೇಲೆ ಮಾದಕ ವಸ್ತು, ಮರಳು ಸಾಗಾಟದ 10 ಪ್ರಕರಣಗಳು ಇವೆ ಎಂದು ಕಮಿಷನರ್ ವಿವರಿಸಿದರು. 

ನೌಫಲ್‌
ಮೊಹಮ್ಮದ್ ಅಸ್ಗರ್‌
ಮೊಹಮ್ಮದ್ ಸಾಲಿ
ವಶಪಡಿಸಿಕೊಂಡ ಶಸ್ತ್ರಾಸ್ತ್ರ ಗಾಂಜಾದೊಂದಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್‌ ಉಪ ಆಯುಕ್ತರಾದ ಸಿದ್ಧಾರ್ಥ ಗೋಯಲ್‌ ರವಿಶಂಕರ್ ಅವರೊಂದಿಗೆ ಸಿಸಿಬಿ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.