ADVERTISEMENT

ಬಳಕೆದಾರರ ಶುಲ್ಕ ಹೆಚ್ಚಳಕ್ಕೆ ಅನುಮತಿ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:58 IST
Last Updated 15 ಜನವರಿ 2023, 5:58 IST

ಮಂಗಳೂರು: ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಫೆಬ್ರುವರಿ 1ರಿಂದ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದೆ. ವಿಮಾನ ನಿಲ್ದಾಣವನ್ನು ನಡೆಸುತ್ತಿರುವ ಅದಾನಿ ಸಮೂಹ ಸಲ್ಲಿಸಿದ್ದ ಶುಲ್ಕ ಏರಿಕೆ ಪ್ರಸ್ತಾವಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (ಎಇಆರ್‌ಎಐ) ಶನಿವಾರ ಅನುಮತಿ ನೀಡಿದೆ.

2021ರ ಮೇ 31ರಂದು ಅದಾನಿ ಗ್ರೂಪ್ ಪರಿಷ್ಕೃತ ಶುಲ್ಕಕ್ಕೆ ಸಂಬಂಧಿಸಿದ ಪ್ರಸ್ತಾವ ಸಲ್ಲಿಸಿತ್ತು. ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್‌) ಸೇರಿದಂತೆ ವಿಮಾನ ನಿಲ್ದಾಣದ ಶುಲ್ಕಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ಏರಿಕೆ ಮಾಡುವ ಬಗ್ಗೆ ತಿಳಿಸಲಾಗಿತ್ತು. ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದ್ದು, ಇನ್ನು ಮುಂದೆ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಕೂಡ ಬಳಕೆದಾರರ ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗಿದೆ. ಈವರೆಗೆ ಇಲ್ಲಿಂದ ಹೊರಡುವ ಪ್ರಯಾಣಿಕರು ಮಾತ್ರ ಪಾವತಿಸುವ ಕ್ರಮವಿತ್ತು.

ಮಂಗಳೂರಿನಿಂದ ದೇಶೀಯ ನಿರ್ಗಮನದ ಯುಡಿಎಫ್‌ ಶುಲ್ಕವನ್ನು ಫೆಬ್ರುವರಿ 1ರಿಂದ 2023 ಮಾರ್ಚ್ 31ರವರೆಗೆ ಪ್ರಸ್ತುತ ಇದ್ದ ರೂ ₹ 150ರ ಬದಲಾಗಿ ₹ 350ಕ್ಕೆ ಹೆಚ್ಚಿಸಲಾಗುತ್ತದೆ. ಏಪ್ರಿಲ್ 2023ರಿಂದ ₹560 ಶುಲ್ಕ ಮತ್ತು 2024ರ ಏಪ್ರಿಲ್ ನಂತರ ₹700ಕ್ಕೆ ಹೆಚ್ಚಳವಾಗುತ್ತದೆ. ಏಪ್ರಿಲ್ 2025 ರ ನಂತರ ₹ 735 ಪಾವತಿಸಬೇಕಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರು 2023ರ ಫೆಬ್ರವರಿ 1ರಿಂದ ಮಾರ್ಚ್ 31ರವರೆಗೆ ₹ 150 ಪಾವತಿಸಬೇಕಾಗುತ್ತದೆ. ಈ ಶುಲ್ಕವು 2024ರಲ್ಲಿ ₹240, 2025ರಲ್ಲಿ ₹300 ಹಾಗೂ 2026ರಲ್ಲಿ ₹315ಕ್ಕೆ ಹೆಚ್ಚಳವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.