
ಚುನಾಯಿತ ಕೌನ್ಸಿಲ್ ಇದ್ದರೆ ಮಾತ್ರ 15ನೇ ಹಣಕಾಸು ಆಯೊಗದ ಅನುದಾನ | 2025–26ನೇ ಸಾಲಿನಲ್ಲೂ ಬಿಡುಗಡೆಯಾಗಿಲ್ಲ ಅನುದಾನ?
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 2026–27ನೇ ಸಾಲಿನ ಬಜೆಟ್ ತಯಾರಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ಆಸ್ತಿ ತೆರಿಗೆ ಮತ್ತಿತರ ಮೂಲಗಳಿಂದ ಇದುವರೆಗಿನ ಕಂದಾಯ ಸಂಗ್ರಹವೂ ನಿರೀಕ್ಷಿತ ಪ್ರಮಾಣದಲ್ಲಿದೆ. ಚುನಾಯಿತ ಪರಿಷತ್ತು ಅಸ್ತಿತ್ವದಲ್ಲಿಲ್ಲದ ಕಾರಣ ಈ ವರ್ಷ 15ನೇ ಹಣಕಾಸು ಆಯೋಗದ ಅನುದಾನವನ್ನು ಪಾಲಿಕೆ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದೆ.
ಪಾಲಿಕೆಯಲ್ಲಿ 2025–26ನೇ ಸಾಲಿನ ಬಜೆಟ್ ಮಂಡನೆ ವೇಳೆ ಚುನಾಯಿತ ಪರಿಷತ್ತು ಅಸ್ತಿತ್ವದಲ್ಲಿತ್ತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕದ್ರಿ ಮನೋಹರ ಶೆಟ್ಟಿ 2025–26ನೇ ಸಾಲಿನ ಬಜೆಟ್ ಮಂಡಿಸಿದ್ದರು. 2025–26ನೇ ಸಾಲಿನ ಬಜೆಟ್‌ನಲ್ಲಿ ₹ 422.78 ಕೋಟಿ ಕಂದಾಯ ಸ್ವೀಕೃತಿ ನಿರೀಕ್ಷಿಸಿ, ₹ 388.67 ಕೋಟಿ ವೆಚ್ಚವನ್ನು ಒಳಗೊಂಡ ₹34.11 ಕೋಟಿ ಮಿಗತೆ ಬಜೆಟ್ ಮಂಡಿಸಲಾಗಿತ್ತು.
15ನೇ ಹಣಕಾಸು ಆಯೋಗದಿಂದ ₹19.57 ಕೋಟಿ (ಹಳೆ ಬಾಕಿ ಸೇರಿಸಿ) ಅನುದಾನ ನಿರೀಕ್ಷಿಸಿ ವಿವಿಧ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು. ಆ ಬಜೆಟ್ ಜಾರಿಯಾಗುವ ಸಂದರ್ಭದಲ್ಲಿ ಪಾಲಿಕೆಯಲ್ಲಿ ಚುನಾಯಿತ ಪರಿಷತ್ತು ಅಸ್ತಿತ್ವದಲ್ಲಿರಲಿಲ್ಲ. ಹಾಗಾಗಿ ₹19.57 ಕೋಟಿ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಈ ಅನುದಾನದ ಕಾಮಗಾರಿಗಳ ಅನುಷ್ಠಾನಕ್ಕೆ ಧಕ್ಕೆ ಉಂಟಾಗಿದೆ ಎನ್ನುತ್ತವೆ ಪಾಲಿಕೆ ಮೂಲಗಳು.
ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲ್ ಆಡಳಿತ ಕೊನೆಗೊಂಡು ಒಂದು ವರ್ಷವಾಗಿದೆ. ಪಾಲಿಕೆ ಚುನಾವಣೆ ಸದ್ಯಕ್ಕಂತೂ ನಡೆಯುವ ಯಾವುದೇ ಲಕ್ಷಣವೂ ಇಲ್ಲ. 2026–27ನೇ ಸಾಲಿನ ಬಜೆಟ್ ತಯಾರಿ ಪ್ರಕ್ರಿಯೆಗಳು ಭರದಿಂದ ನಡೆದಿವೆ. ಎಲ್ಲ ನಿರೀಕ್ಷೆಯಂತೆಯೇ ನಡೆದರೆ ಈ ತಿಂಗಳ ಕೊನೆಯ ವಾರದಲ್ಲಿ ಬಜೆಟ್ ಮಂಡಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಚುನಾಯಿತ ಕೌನ್ಸಿಲ್ ಇಲ್ಲದೆಯೇ ಬಜೆಟ್ ಮಂಡನೆ ಆಗುತ್ತಿರುವ ಕಾರಣ ಈ ವರ್ಷವೂ 15ನೇ ಹಣಕಾಸು ಆಯೋಗದ ಅನುದಾನ ಕೈತಪ್ಪುವುದು ಬಹುತೇಕ ನಿಶ್ಚಿತ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.
‘15ನೇ ಹಣಕಾಸು ಆಯೋಗದ ನಿಧಿಯು ನಗರದ ಜನರ ಕಾನೂನು ಬದ್ಧ ಹಕ್ಕು. ಇದು ನಗರದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣ. ಸರ್ಕಾರವು ಸಕಾಲದಲ್ಲಿ ಚುನಾವಣೆ ನಡೆಸದ ಕಾರಣಕ್ಕಾಗಿ ನಗರದ ಜನರು ಅದರಿಂದ ವಂಚಿತರಾಗಬೇಕಾದ ಸ್ಥಿತಿ ಎದುರಾಗಿದೆ. ಸರ್ಕಾರ ಮಾಡಿದ ತಪ್ಪಿಗೆ ನಗರದ ಜನತೆ ಸುಮಾರು ₹ 20 ಕೋಟಿಗಳಷ್ಟು ನುದಾನ ಕಳೆದು ಕೊಳ್ಳಬೇಕಾದುದು ಎಷ್ಟು ಸರಿ’ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರಶ್ನಿಸಿದರು.
‘ಸಂವಿಧಾನದ 74ನೇ ತಿದ್ದುಪಡಿ ಬಳಿಕ ನಗರ ಪಾಲಿಕೆಗಳಿಗೂ ಕಾಲ ಕಾಲಕ್ಕೆ ಚುನಾವಣೆ ನಡೆಸುವುದು ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯ. ಸರ್ಕಾರವು ನಿಯಮ ಪ್ರಕಾರ ವಾರ್ಡ್‌ವಾರು ಮತದಾರರ ಪಟ್ಟಿ ಹಾಗೂ ಮೀಸಲಾತಿ ನಿಗದಿಪಡಿಸುವ ಮೂಲಕ ಪಾಲಿಕೆ ಚುನಾವಣೆ ನಡೆಸುವುದಕ್ಕೆ ಅನುವು ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.
‘15ನೇ ಹಣಕಾಸು ಆಯೋಗದ ಅನುದಾನ 2026–27ನೇ ಸಾಲಿನಲ್ಲಿ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬುದನ್ನು ನಾವು ಈ ಹಂತದಲ್ಲೇ ಹೇಳಲಾಗದು. ನಾವಂತೂ ಇದೇ ತಿಂಗಳಲ್ಲಿ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಂಡಿದ್ದೇವೆ’ ಎಂದು ನಗರ ಪಾಲಿಕೆಯು ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗುರಿಯ ಸನಿಹಕ್ಕೆ ಕಂದಾಯ ಸ್ವೀಕೃತಿ
2025–26ನೇ ಸಾಲಿನ ಬಜೆಟ್‌ನಲ್ಲಿ ಪಾಲಿಕೆಯು ₹112 ಕೋಟಿ ಕಂದಾಯ ಸ್ವೀಕೃತಿ ಗುರಿಯನ್ನು ನಿಗದಿಪಡಿಸಿತ್ತು. ಈ ಗುರಿ ಸಾಧನೆಗೆ ಮಾ.31ರ ವರೆಗೆ ಕಾಲಾವಕಾಶವಿದೆ. ಪಾಲಿಕೆಯು ಬುಧವಾರದವರೆಗೆ ಕಂದಾಯ ಸ್ವೀಕೃತಿಯಲ್ಲಿ ಒಟ್ಟು ₹106.9 ಕೋಟಿ ಸಾಧನೆ ಮಾಡಿದೆ. ‘ಕಂದಾಯ ಸಂಗ್ರಹದಲ್ಲಿ ನಾವು ಗುರಿಯ ಸನಿಹಕ್ಕೆ ತಲುಪಿದ್ದೇವೆ. ವರ್ಷಾಂತ್ಯದೊಳಗೆ ಗುರಿ ಮೀರಿ ಸಾಧನೆ ಮಾಡುವ ವಿಶ್ವಾಸ ಇದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.