ADVERTISEMENT

ನಗರ ಪ್ರವಾಹ ತಡೆಗೆ ಯೋಜನೆ: ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 13:37 IST
Last Updated 25 ಜುಲೈ 2025, 13:37 IST
<div class="paragraphs"><p>ದಿಢೀರ್‌ ಪ್ರವಾಹ</p></div>

ದಿಢೀರ್‌ ಪ್ರವಾಹ

   

ಪಿಟಿಐ ಚಿತ್ರ 

ಮಂಗಳೂರು: ಮಂಗಳೂರು ನಗರದಲ್ಲಿ ನಿರಂತರ ಮಳೆಯಾದರೆ ಪ್ರವಾಹ ಪರಿಸ್ಥಿತಿ ಎದುರಾಗುವುದನ್ನು ತಡೆಗಟ್ಟಲು ಹೊಸ ದೃಷ್ಟಿಕೋನದ ಯೋಜನೆ ಅನುಷ್ಠಾನಗೊಳಿಸುವಂತೆ ಕೆಪಿಸಿಸಿ ಸದಸ್ಯ ಮೋಹನದಾಸ್ ಹೆಗ್ಡೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಮೂಲ ಸೌಕರ್ಯ ವೃದ್ಧಿ, ಹಸಿರು ತಂತ್ರಜ್ಞಾನದ ಮೂಲಕ 2030ರ ವೇಳೆಗೆ ಮಂಗಳೂರು ಪ್ರವಾಹ ನಿರೋಧಕ ನಗರವಾಗಿ ರೂಪುಗೊಳ್ಳಬೇಕು. ಪಂಪ್‌ವೆಲ್ ಮತ್ತು ಪಡೀಲ್ ಅಂಡರ್‌ಪಾಸ್‌ನಲ್ಲಿ ಆಗುವ ಪ್ರವಾಹ ಪರಿಸ್ಥಿತಿ ತಪ್ಪಿಸಬೇಕು. 100 ವರ್ಷಗಳ ಮಳೆ ಮಾಪನ ಅಂದಾಜಿಸಿ ಮಳೆ ನೀರಿನ ಜಾಲ ರೂಪಿಸಬೇಕು. ಮಳೆ ನೀರು ಧಾರಣ ಸಾಮರ್ಥ್ಯ ಹೊಂದಿರುವ ಉದ್ಯಾನಗಳು, ಮಳೆ ತೋಟ ಮತ್ತಿತರ ದೀರ್ಘಕಾಲ ಪರಿಣಾಮ ಬೀರಬಹುದಾದ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

ನಗರ ಪ್ರವಾಹ ನಿರ್ವಹಣೆ ಗ್ರಿಡ್ ರಚನೆ, ಜಿಐಎಸ್ ಆಧಾರಿತ ಮಳೆ ನೀರು ಜಾಲ ವ್ಯವಸ್ಥೆ, ನಗರದಾದ್ಯಂತ ಮ್ಯಾಪಿಂಗ್, ಸ್ಮಾರ್ಟ್ ಒಳಚರಂಡಿ, ನೀರಿನ ಮಟ್ಟದ ಸಂವೇದಕಗಳ ಅಳವಡಿಕೆ, ಲೈವ್ ಡೇಟಾದೊಂದಿಗೆ ಕೇಂದ್ರ ನಿರ್ವಹಣಾ ಕೇಂದ್ರ, ನಾಗರಿಕರಿಗೆ ಮಾಹಿತಿ ನೀಡಲು ವಾಚ್‌ಆ್ಯಪ್ ರಚನೆ ಇಂತಹ ರಚನಾತ್ಮಕ ಕಾರ್ಯ ಅನುಷ್ಠಾನಗೊಳಿಸಬೇಕು. ತುರ್ತು ಪಂಪ್‌ಗಳು, ಹೂಳು ತೆಗೆಯುವಿಕೆ, ಸಂವೇದಕ ಸ್ಥಾಪನೆ ಬಗ್ಗೆ ಯೋಚಿಸಬೇಕು. ಇವುಗಳ ವಿಸ್ತ್ರೃತ ಯೋಜನಾ ವರದಿ ಸಿದ್ಧತೆ ಹೊಣೆಯನ್ನು ಎನ್‌ಐಟಿಕೆ ಮತ್ತು ಐಐಎಸ್‌ಸಿ ತಂತ್ರಜ್ಞರಿಗೆ ವಹಿಸಬೇಕು. ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.