ADVERTISEMENT

ಮಂಗಳೂರು ದಸರಾ: ನವದುರ್ಗೆಯರಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಭಾನುವಾರ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಭಾನುವಾರ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.   

ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಅಲಂಕೃತ ನವ ದುರ್ಗೆಯ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು.

ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನವು ಚಿನ್ನದ ಬಣ್ಣ, ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದು, ಭಕ್ತರು ಸರದಿಯಲ್ಲಿ ನಿಂತು ಶೃಂಗಾರಗೊಂಡ ನವ ದುರ್ಗೆಯರ ದರ್ಶನ ಪಡೆದರು. ಒಂಬತ್ತು ದಿನ ನಡೆಯಲಿರುವ ದಸರಾಕ್ಕೆ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್‌. ಹರ್ಷ ಚಾಲನೆ ನೀಡಿದರು.

ವೀಣೆ ನುಡಿಸುತ್ತಿರುವ ಶಾರದಾ ಮಾತೆಯ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ನವ ದುರ್ಗೆಯರಾದ ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದ ಮಾತಾ ಹಾಗೂ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

ADVERTISEMENT

ಕುದ್ರೋಳಿ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ಭಕ್ತಾದಿಗಳಿಗೆ ನವ ದುರ್ಗೆಯರ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ನವರಾತ್ರಿ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದು, ವೃದ್ಧರಿಗೆ, ಅಂಗವಿಕಲರಿಗೆ ಮತ್ತು ಪುಟ್ಟಮಕ್ಕಳ ತಾಯಂದಿರಿಗೆ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಲಾಗಿದೆ. ಶಾರದಾ ಮಾತೆಯ ದರ್ಶನ, ಕುದ್ರೋಳಿ ಗೋಕರ್ಣನಾಥನ ದರ್ಶನ ಮತ್ತು ಅನ್ನಸಂತರ್ಪಣೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ನಗರದ ಮಂಗಳಾ ದೇವಿ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಗಳಲ್ಲಿಯೂ ಸಂಭ್ರಮದ ದಸರಾ ಆಚರಿಸಲಾಗುತ್ತಿದೆ. ಭಾನುವಾರ ರಜೆ ದಿನವಾಗಿದ್ದರಿಂದ, ಸಾವಿರಾರು ಭಕ್ತರು, ದೇವಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.