
ಮಂಗಳೂರು: ಮುಡಿಪು ಸಮೀಪದ ಬಾಳೆಪುಣಿಯಲ್ಲಿ ನಿರ್ಮಿಸಿರುವ ಜಿಲ್ಲಾ ಕಾರಾಗೃಹ ಕಟ್ಟಡದ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಮುಂಬರುವ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಈ ಕಾರಾಗೃಹ ಕಟ್ಟಡ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇದರ ಕಾಮಗಾರಿ ಪೂರ್ಣಗೊಳಿಸುವ ಕುರಿತು ಮುಖ್ಯಮಂತ್ರಿಯವರ ಜೊತೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿದ್ದು, ಅನುದಾನ ಬಿಡುಗಡೆ ಕ್ರಮವಹಿಸುವಂತೆ ಕೋರಿದ್ದೇನೆ’ ಎಂದರು.
‘ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಗಳ ಘಟಕ ಆರಂಭಿಸುವ ಅಗತ್ಯ ಇದೆ. ಇದಕ್ಕೂ ಮುಂಬರುವ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದರು.
ಮಹಾಕಾಳಿ ಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಾಗೂ ಕಾಮಗಾರಿಯ ಲೋಪಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಗರದ ಸಂಪರ್ಕದ ದೃಷ್ಟಿಯಿಂದ ಈ ಕೆಳಸೇತುವೆ ಅತ್ಯಂತ ಮಹತ್ವದ್ದು. ಶೀಘ್ರವೇ ಸ್ಥಳ ಪರಿಶೀಲಿಸಿ, ಲೋಪಗಳನ್ನು ಸರಿಪಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.
ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ‘ಹರಿಕಥೆ’ ಎಂಬ ಪದ ಬಳಸಿದ್ದಕ್ಕೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ‘ಕರಾವಳಿಯ ಬಹುತೇಕ ಶಾಸಕರು ಸಜ್ಜನಿಕೆಗೆ ಹೆಸರಾಗಿದ್ದರು. ಈಗಿನ ಶಾಸಕರು ಕರಾವಳಿಗೆ ಇರುವ ಗೌರವ ಉಳಿಸುವಂತೆ ಸದನದಲ್ಲಿ ವರ್ತಿಸಬೇಕು’ ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ‘ಕರಾವಳಿಗೆ ಬೆಂಕಿ ಇಟ್ಟವರು’ ಎಂದು ಸದನದಲ್ಲಿ ಕರಾವಳಿಯ ಶಾಸಕರನ್ನು ಉದ್ದೇಶಿಸಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಖಾದರ್, ‘ಸದನ ಒಂದು ಕುಟುಂಬದಂತೆ. ಅಲ್ಲಿನ ವಿಚಾರಗಳನ್ನು ಅಲ್ಲೇ ಇತ್ಯರ್ಥಪಡಿಸಿಕೊಳ್ಳುತ್ತೇವೆ’ ಎಂದರು.
ಕೇಪು ಉಲ್ಲಾಳ್ತಿ ದೈವಸ್ಥಾನದ ಕೋಳಿ ಅಂಕ ವಿವಾದದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.