ADVERTISEMENT

ಮಂಗಳೂರು: ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಘಟಕ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:50 IST
Last Updated 9 ಫೆಬ್ರುವರಿ 2026, 8:50 IST
   

ಮಂಗಳೂರು: ‘ಮಂಗಳೂರು ಸೇರಿದಂತೆ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಆಸ್ಪತ್ರೆಗಳೇ ಇಲ್ಲ. ಶಾಸಕರು ಜನರ ಬದುಕಿನ ಮುಖ್ಯ ಪ್ರಶ್ನೆಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ. ವಿರೋಧ ಪಕ್ಷದ ಶಾಸಕರೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯ ಚಕಾರ ಎತ್ತುತ್ತಿಲ್ಲ’ ಎಂದು ಡಿವೈಎಫ್ಐ ದಕ್ಷಿಣ ಕನ್ನದ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಜಯದೇವ, ಕಿದ್ವಾಯಿ, ನಿಮ್ಹಾನ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಬೇಕು, ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಆದರೂ ಈ ಬಗ್ಗೆ ಶಾಸಕರು ಧ್ವನಿ ಎತ್ತುತ್ತಿಲ್ಲ. ಅವರಿಗೆ ಕಂಬಳ ಬೇಕು ಆದರೆ, ಸರ್ಕಾರಿ ಆಸ್ಪತ್ರೆಗಳು ಬೇಡ. ಅವರು ಯಾರೂ ಖಾಸಗಿ ಆಸ್ಪತ್ರೆಗಳನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲ. ಹಾಗಾಗಿ ಅವರು ಯಾರ ಪರ ಇದ್ದಾರೆ ಎಂಬುದು ಅವರ ನಡವಳಿಕೆಯಲ್ಲೇ ಸ್ಪಷ್ಟವಾಗುತ್ತದೆ’ ಎಂದರು.

ADVERTISEMENT

ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ‘ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡಿಲ್ಲದವರಿಗೆ ಚಿಕಿತ್ಸೆ ಇಲ್ಲ. ಒಂದೇ ರೀತಿಯ ಚಿಕಿತ್ಸೆಗೂ ಬೇರೆ ಬೇರೆ ದರ ವಿಧಿಸಲಾಗುತ್ತಿದೆ. ಅನಾರೋಗ್ಯಕ್ಕೆ ಒಳಗಾಗುವ ಬಡವರು ಭಿಕ್ಷೆ ಎತ್ತುವ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಇಲ್ಲಿನ ಶಾಸಕರು ಕೋಳಿ ಅಂಕದಂತಹ ವಿಚಾರಗಳನ್ನು ಬದಿಗಿಟ್ಟು ಜನರ ಆರೋಗ್ಯ ಸಮಸ್ಯೆಗಳತ್ತ ಗಮನ ಹರಿಸಲಿ’ ಎಂದರು.

ಪ್ರೊ.ನರೇಂದ್ರ ನಾಯಕ್, ವಕೀಲ ಮನೋಜ್ ವಾಮಂಜೂರು, ಶ್ಯಾಮ್ ಸುಂದರ್, ಡಿವೈಎಫ್ಐ ಉಳ್ಳಾಲ ತಾಲ್ಲೂಕು ಅಧ್ಯಕ್ಷ ನಿತಿನ್ ಕುತ್ತಾರ್, ಮುಖಂಡ ಚರಣ್ ಶೆಟ್ಟಿ, ದಲಿತ ಸಂಘಟನೆಯ ಮುಖಂಡ ಕಮಲಾಕ್ಷ ಬಜಾಲ್, ಮಾತನಾಡಿದರು.

ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು,‌ ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್, ರಮೇಶ್ ಉಳ್ಳಾಲ, ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ಶಿಳ್ಳೆಕ್ಯಾತ ಅಲೆಮಾರಿ ಸಮುದಾಯ ಸಂಘಟನೆಯ ಮುಖಂಡರಾದ ವೆಂಕಟೇಶ್, ಡಿವೈಎಫ್ಐ ಮುಖಂಡರಾದ ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ರಜಾಕ್ ಮುಡಿಪು, ಅಶ್ರಫ್ ಹರೇಕಳ ಸುನೀಲ್ ತೇವುಲ, ಭರತ್ ಕುತ್ತಾರ್, ಅಭಿಷೇಕ್ ಬೆಳ್ತಂಗಡಿ, ಹನೀಫ್ ಬೆಂಗರೆ, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಮುಜಾಫರ್, ಪ್ರವೀಣ್ ಕೊಂಚಾಡಿ, ಅನಿಲ್ ನಾಯ್ಕ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಮಂಗಳೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿದರು. ಡಿವೈಎಫ್ಐ ನಗರ ಘಟಕದ ಅಧ್ಯಕ್ಷರಾದ ನವೀನ್ ಕೊಂಚಾಡಿ ಸ್ವಾಗತಿಸಿದರು, ಕಾರ್ಯದರ್ಶಿ ತಯ್ಯೂಬ್ ಬೆಂಗರೆ ನಿರೂಪಿಸಿದರು. ಮಾಧುರಿ ಬೋಳಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.