ADVERTISEMENT

ನಗರ ನೆರೆಗೆ ಬೇಕು ಶಾಶ್ವತ ಪರಿಹಾರ

ಪ್ರಮುಖ ನದಿ, ಉಪನದಿ, ರಾಜ ಕಾಲುವೆಗಳಲ್ಲಿ ಡ್ರೆಜ್ಜಿಂಗ್ ನಡೆಸಲು ಅನುದಾನದ ಬೇಡಿಕೆ

ಸಂಧ್ಯಾ ಹೆಗಡೆ
Published 18 ಜನವರಿ 2026, 6:48 IST
Last Updated 18 ಜನವರಿ 2026, 6:48 IST

ಮಂಗಳೂರು: ಮಳೆಗಾಲ ಬಂತೆಂದರೆ ಮಂಗಳೂರಿನ ಕೆಲವು ಬಡಾವಣೆಗಳ ಜನರು ಬೆಚ್ಚಿಬೀಳುವಂತಾಗಿದೆ. ಅರ್ಧತಾಸು ನಿರಂತರ ಮಳೆಯಾದರೆ, ಕೊಟ್ಟಾರಚೌಕಿ, ಕೊಡಿಯಾಲ್‌ಗುತ್ತು, ಅತ್ತಾವರದ ಕೆಲವು ಭಾಗ, ವೀರ ನಗರ, ಫೈಸಲ್‌ ನಗರ, ಹೊಯ್ಗೆಬಜಾರ್ ಮೊದಲಾದ ಪ್ರದೇಶಗಳು ದ್ವೀಪವಾಗಿ ಮಾರ್ಪಾಡಾಗುತ್ತವೆ. ಪ್ರತಿವರ್ಷ ಮಳೆಗಾಲದಲ್ಲಿ ಎದುರಾಗುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂಬುದು ಜನರ ಆಗ್ರಹವಾಗಿದೆ. 

‘ಬಂಗ್ರಕುಳೂರು ಉಪನದಿಯ ನೀರು ಗುರುಪುರ ನದಿಗೆ ಸೇರಿ, ಅಲ್ಲಿಂದ ಮುಂದೆ ಸಮುದ್ರಕ್ಕೆ ಹರಿಯುತ್ತದೆ. ನಾಲ್ಕನೇ ಮೈಲ್ ಸೇತುವೆಯಿಂದ ಪಡ್ಡೋಡಿ ಕಿಂಡಿ ಅಣೆಕಟ್ಟೆವರೆಗೆ ಉಪನದಿಯಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿಯದೆ ಹಿಮ್ಮುಖವಾಗಿ ಬರುತ್ತದೆ. ಇದರಿಂದ ಪ್ರತಿಬಾರಿ ಜೋರು ಮಳೆ ಬಂದಾಗ ಕೊಟ್ಟಾರಚೌಕಿಯಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಡ್ರೆಜ್ಜಿಂಗ್ ಮೂಲಕವೇ ನದಿಯಲ್ಲಿ ಹೂಳೆತ್ತಬೇಕಾಗಿದ್ದು, ಇದಕ್ಕೆ ದೊಡ್ಡ ಮೊತ್ತದ ಅನುದಾನ ಬೇಕು ಎನ್ನುತ್ತಾರೆ ಸ್ಥಳೀಯ ಮುಖಂಡರೊಬ್ಬರು. 

ಸಮುದ್ರ ಚಾಚಿಕೊಂಡಿರುವ ಸಿಆರ್‌ಝಡ್ –4 ಪ್ರದೇಶಗಳವರೆಗೆ ಡ್ರೆಜ್ಜಿಂಗ್ ಮಾಡುವ ಅಗತ್ಯವಿದೆ. ಡ್ರೆಜ್ಜಿಂಗ್ ಮಾಡದಿದ್ದರೆ ನಗರದ ಕೊಟ್ಟಾರಚೌಕಿ, ಮಾಲೆಮಾರ್, ಕುದ್ರೋಳಿ ಮೊದಲಾದ ಕಡೆಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಅಲ್ಲದೆ, ಎಲ್ಲ ರಾಜಕಾಲುವೆಗಳ ಮುಖಜ ಪ್ರದೇಶಗಳಲ್ಲಿ ಡ್ರೆಜ್ಜಿಂಗ್ ಆಗಬೇಕಾಗಿದೆ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸುರೇಶ್ ಉಡುಪ. 

ADVERTISEMENT

‘ಸಮುದ್ರ ನೀರು ಬರುವ ಪ್ರದೇಶಗಳಲ್ಲಿ ಇಳಿತ ಇರುವಾಗಿನ ನೀರಿನ ಮಟ್ಟ ಗುರುತಿಸಿ, ಅದಕ್ಕಿಂತ ಒಂದು ಅಡಿ ಆಳದವರೆಗೆ ಡ್ರೆಜ್ಜಿಂಗ್ ಮಾಡಿದರೆ, ಕೊಟ್ಟಾರಚೌಕಿ ಭಾಗದಲ್ಲಿ ಉಂಟಾಗುವ ಪ್ರವಾಹ ಸಮಸ್ಯೆಯನ್ನು ತಗ್ಗಿಸಬಹುದು. ಮನೆಗಳಿಗೆ ನೀರು ನುಗ್ಗಿ ಆಗುವ ಅಪಾರ ಹಾನಿಯನ್ನು ತಪ್ಪಿಸಬಹುದು’ ಎಂಬುದು ಅವರು ನೀಡುವ ಸಲಹೆ. 

‘ಮಳೆಗಾಲದಲ್ಲಿ ಉಂಟಾದ ಪ್ರವಾಹದಿಂದ ಕೆಲವು ಕಡೆಗಳಲ್ಲಿ ದೊಡ್ಡ ಕಾಲುವೆಗೆ ಹಾನಿಯಾಗಿದೆ. ಬಹಳಷ್ಟು ಕಡೆ ದೊಡ್ಡ ಚರಂಡಿಯ ತಡೆಗೋಡೆ ಕುಸಿದಿದೆ. ರಾಜಕಾಲುವೆ ವಿಸ್ತರಣೆ ಆಗಬೇಕಾಗಿದೆ. ಇದಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ದೊಡ್ಡ ಮೊತ್ತ ಬೇಕಾಗುತ್ತದೆ. ಪ್ರವಾಹದಿಂದ ಸೃಷ್ಟಿಯಾಗುವ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆಯಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಪಾದ್ ಶೆಣೈ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.