ADVERTISEMENT

Mangaluru Floods | ಭಾರಿ ಮಳೆ: ಮಂಗಳೂರು ನಗರದಲ್ಲಿ 'ಪ್ರವಾಹ', ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 4:07 IST
Last Updated 30 ಮೇ 2025, 4:07 IST
<div class="paragraphs"><p>ಮಂಗಳೂರು ನಗರದ ಬಿಜೈ-ಕಾಪಿಕಾಡ್ ಮುಖ್ಯರಸ್ತೆಗೆ ಬಿದ್ದ ಮರ</p></div>

ಮಂಗಳೂರು ನಗರದ ಬಿಜೈ-ಕಾಪಿಕಾಡ್ ಮುಖ್ಯರಸ್ತೆಗೆ ಬಿದ್ದ ಮರ

   

ಮಂಗಳೂರು: ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆ ಗುರುವಾರ ರಾತ್ರಿ ತೀವ್ರ ಸ್ವರೂಪ ಪಡೆದಿದ್ದು ಮಂಗಳೂರು ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನಗರ ಮಧ್ಯದ ಕೆಲವು ಅಂಗಡಿಗಳಿಗೂ ನೀರು ನುಗ್ಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ, ಬಿಜೈ–ಕಾಪಿಕಾಡ್ ರಸ್ತೆಯಲ್ಲಿ ಬೃಹತ್ ಮರವೊಂದು ಬುಡಸಮೇತ ಕಿತ್ತು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ADVERTISEMENT

ಮಿಷನ್ ಸ್ಟ್ರೀಟ್ ರಸ್ತೆ, ರಾವ್‌ ಆ್ಯಂಡ್ ರಾವ್ ವೃತ್ತ ಮತ್ತು ಕೊಪ್ಪರ ಹಿತ್ಲು ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ್ದವರನ್ನು ಸಾರ್ವಜನಿಕರೇ ಸುರಕ್ಷಿತ ಪ್ರದೇಶಗಳಿಗೆ ಕರೆದುಕೊಂಡು ಹೋದರು.

ಕೆಲವು ಭಾಗಗಳಲ್ಲಿ ರಸ್ತೆಗಳಲ್ಲಿ ಮೊಣಕಾಲು ಎತ್ತರಕ್ಕೆ ನೀರು ಹರಿದಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಅಪಾಯದಲ್ಲಿವೆ. ಮ್ಯಾನ್‌ಹೋಲ್‌ಗಳು ಕಟ್ಟಿ ನಿಂತು ಕೆಲವು ದಿನಗಳಿಂದ ಕೊಳಕು ನೀರು ರಸ್ತೆಯ ಮೇಲೆ ಹರಿಯುತ್ತಿದ್ದರೂ ಮಹಾನಗರ ಪಾಲಿಕೆ ಕಾಳಜಿ ವಹಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಮಳೆಗಾಲಕ್ಕೆ ಮುನ್ನ ಸಮರ್ಪಕವಾದ ಸಿದ್ಧತೆಗಳನ್ನು ಮಾಡದೇ ಇದ್ದುದರಿಂದ ಮತ್ತು ಮಾಡಿದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿರುವುದರಿಂದ ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ ಆಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಇಮ್ತಿಯಾಜ್ ಆರೋಪಿಸಿದರು.

ಕೆಲವು ಪ್ರದೇಶಗಳಲ್ಲಿ ಬೆಳಿಗ್ಗೆಯೂ ನೀರು ನಿಂತಿದ್ದು ಬಲ್ಮಠದ ಅಂಬೇಡ್ಕರ್ ವೃತ್ತದ ಬಳಿ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಇದ್ದ ಕಾರಣ ಅಂತರರಾಜ್ಯ ಬಸ್‌ಗಳ ಓಡಾಟಕ್ಕೂ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಯಿತು.

ಜಿಲ್ಲೆಯ ಶಾಲೆಗಳಿಗೆ ರಜೆ:

ಬೇಸಿಗೆ ರಜೆ ಮುಗಿದು ಶುಕ್ರವಾರ ಶಾಲೆಗಳು ಆರಂಭವಾಗಬೇಕಿದ್ದವು. ಆದರೆ ಭಾರಿ ಮಳೆ ಮುಂದುವರಿದಿರುವ ಕಾರಣ ಮತ್ತು ರೆಡ್ ಅಲರ್ಟ್ ಘೋಷಣೆ ಮಾಡಿರುವ ಕಾರಣ ಶಾಲೆಗಳಿಗೂ ಸರ್ಕಾರಿ ಅನುದಾನಿ ಖಾಸಗಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಿಗೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ರೈಲು ಹಳಿಗೆ ಬಿದ್ದ ಮರ...

ನಗರದ ಜೆಪ್ಪು ಬಳಿ ಮಂಗಳೂರು ಸೆಂಟ್ರಲ್‌-ಜಂಕ್ಷನ್ ನಡುವೆ ರೈಲು ಹಳಿ‌ ಮೇಲೆ‌‌ ಮರ ಬಿದ್ದಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಮಾರ್ಗವಾಗಿ ಏಕಮುಖ ಸಂಚಾರ ಮಾತ್ರ ಇದೆ. ಇಲೆಕ್ಟ್ರಿಕ್ ವಯರ್ ಗಳು ತುಂಡಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.