
ಮಂಗಳೂರು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದು ಉದ್ಯೋಗ ನೀಡುವ ಭರವಸೆ ನೀಡಿ ವಿದ್ಯಾರ್ಥಿಗಳನ್ನು ಸೆಳೆದು ಅವರನ್ನು ಚೈನ್‌ಲಿಂಕ್ ವ್ಯವಹಾರದ ಸುಳಿಯಲ್ಲಿ ಸಿಲುಕಿಸುತ್ತಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ವಂಚನೆಗೆ ಒಳಗಾಗಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್ ಮುಳಿಯ, ‘ಈ ಸಂಸ್ಥೆಯವರು ಮೂರು ದಿನಗಳ ತರಬೇತಿ ಒದಗಿಸಿ, ನಂತರ ಉದ್ಯೋಗ ಕಲ್ಪಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ಸೆಳೆಯುತ್ತಾರೆ. ಅವರಿಂದ ₹ 51 ಸಾವಿರ ಕಟ್ಟಿಸಿಕೊಂಡು ಚೈನ್‌ಲಿಂಕ್ ಸುಳಿಗೆ ಸಿಲುಕಿಸುತ್ತಾರೆ. ತರಬೇತಿ ಬಳಿಕ ವಿದ್ಯಾರ್ಥಿಗಳು ಕನಿಷ್ಠ ಮೂವರು ವಿದ್ಯಾರ್ಥಿಗಳನ್ನು ಸಂಸ್ಥೆಗೆ ಪರಿಚಯಿಸಬೇಕು. ಆ ವಿದ್ಯಾರ್ಥಿಗಳಿಂದ ಪಡೆದ ಹಣದಲ್ಲಿ ತಲಾ ₹ 11 ಸಾವಿರವನ್ನು ಅವರನ್ನು ಪರಿಚಯಿಸಿದ ವಿದ್ಯಾರ್ಥಿಗೆ ಸಂಸ್ಥೆ ನೀಡುತ್ತದೆ. ಹಣ ಕಟ್ಟಿ ವಂಚನೆಗೆ ಒಳಗಾದ ಅನೇಕ ವಿದ್ಯಾರ್ಥಿಗಳು ಸಂಘಟನೆಯನ್ನು ಸಂಪರ್ಕಿಸಿದ್ದಾರೆ. ಈ ವಂಚನೆ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಿದ್ದೇವೆ. ಸಂಸ್ಥೆಯು ಇಲ್ಲಿ ಕಾರ್ಯಾಚರಣೆ ನಿಲ್ಲಿಸುವವವರೆಗೂ ಹೋರಾಟ ನಡೆಸಲಿದ್ದೇವೆ’ ಎಂದರು.
ಸಂತ್ರಸ್ತ ವಿದ್ಯಾರ್ಥಿನಿ ರಮ್ಯಾ, ‘ತಿಂಗಳಿಗೆ ₹ 30 ಸಾವಿರದ ಉದ್ಯೊಗ ನೀಡುವ ಆಮಿಷವನ್ನು ನಂಬಿ ನಾನು 2025ರ ಜೂನ್‌ನಲ್ಲಿ ಈ ಸಂಸ್ಥೆಯ ತರಬೇತಿಗೆ ಸೇರಿದ್ದೆ. ಮೊದಲು ₹11 ಸಾವಿರ ಹಣ ಕಟ್ಟಿಸಿಕೊಂಡರು. ಮೂರು ದಿನದ ತರಬೇತಿಗೆಂದು ಕರೆಸಿಕೊಂಡರು. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಭಾವನಾತ್ಮಕವಾಗಿ ಸೆಳೆದು, ಚೈನ್‌ಲಿಂಕ್ ಸ್ಕೀಂಗೆ ಸೇರುವಂತೆ ಮಾಡುತ್ತಾರೆ. ₹ 40 ಸಾವಿರ ಕಟ್ಟಿದರೆ ಸಂಸ್ಥೆಯ ಮೂಲಕ ಬಿಜಿನೆಸ್ ಮಾಡಲು ಅವಕಾಶ ಸಿಗಲಿದೆ. ಇದು ಸಂಸ್ಥೆಯಲ್ಲಿ ಉನ್ನತ ಸ್ಥಾನಕ್ಕೇರಲು ಸಹಕಾರಿಯಾಗುತ್ತದೆ ಎಂದು ನಂಬಿಸಿದ್ದರು. ಲ್ಯಾಪ್‌ಟಾಪ್‌ಗೆ ಹಣ ಬೇಕೆಂದು ಮನೆಯಲ್ಲಿ ಸುಳ್ಳು ಹೇಳಿ ₹ 40 ಸಾವಿರ ಪಡೆದು ಕಟ್ಟಿದ್ದೆ’ ಎಂದರು.
‘₹ 40 ಸಾವಿರ ಕಟ್ಟಿದ್ದಕ್ಕೆ ಸೀರೆ, ಕಾಸ್ಮೆಟಿಕ್, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ನೀಡಿದ್ದರು. ಆ ಉತ್ಪನ್ನಗಳ ಗುಣಮಟ್ಟ ಕಳಪೆ, ಬೆಲೆಯೂ ದುಬಾರಿ. ಆ ಉತ್ಪನ್ನಗಳನ್ನು ನೋಡಿ ನಾನು ಮೋಸಹೋಗಿದ್ದು ತಿಳಿಯಿತು. ಉತ್ಪನ್ನ ಮರಳಿಸುವೆ, ನನ್ನ ಹಣ ವಾಪಾಸ್ ನೀಡಿ ಎಂದರೆ ಸಂಸ್ಥೆ ಒಪ್ಪಲಿಲ್ಲ. ನಂತರ ನನ್ನ ಹಣ ಮರಳಿಸಿದರು’ ಎಂದು ಆಕೆ ವಿವರಿಸಿದರು.
ಎನ್‌ಎಸ್‌ಯುಐ ಮಂಗಳೂರು ನಗರ ಘಟಕದ ಅಧ್ಯಕ್ಷ ಕ್ರಿಸ್ಟೀನ್ ಮಿನೇಜಸ್,‘ಕಷ್ಟಪಟ್ಟಾದರೂ ಉದ್ಯೋಗ ಪಡೆಯಬೇಕೆಂಬ ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆಯನ್ನು ಈ ಸಂಸ್ಥೆ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ವಂಚಿಸುತ್ತಿದೆ. ಇಂತಹ ಚೈನ್‌ಲಿಂಕ್ ವಂಚನೆ ಜಾಲಕ್ಕೆ ಬೀಳದಂತೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕು’ ಎಂದರು.
ಸಂತ್ರಸ್ತ ವಿದ್ಯಾರ್ಥಿನಿ ಹಸ್ತಾ ಸಂಸ್ಥೆ ವಂಚಿಸುವ ರೀತಿಯನ್ನು ವಿವರಿಸಿದರು.
ಸ್ವಸ್ತಿಕಾ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸಿಂಚನಾ, ವಿದ್ಯಾರ್ಥಿ ಮುಖಂಡ ಪ್ರೀತೇಶ್ ಕೆ., ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಿಂಧೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.