
ಮಂಗಳೂರು: ಚೆಂಡು ಹೂ, ಬಿಳಿ ಸೇವಂತಿಗೆ ಮತ್ತು ಸೇವಂತಿಗೆ ‘ಬಟನ್’ನಿಂದ ಆವೃತ ವಂದೇ ಭಾರತ್ ರೈಲು, ಸಹಜವಾಗಿ ಬೆಳೆದಿರುವ ಹಲಸಿನ ಮರದಲ್ಲಿ ನೇತಾಡುತ್ತರುವ ‘ಗುಜ್ಜೆ’ಗಳ ಗೊಂಚಲು; ಹಲವು ಬಣ್ಣದ, ಬಗೆಬಗೆ ಅಂದದ ಹೂಗಳ ಅಲಂಕಾರ, ತರಕಾರಿ ಬೆಳೆಯ ಪ್ರಾತ್ಯಕ್ಷಿಕೆ, ಹಣ್ಣುಗಳಲ್ಲಿ ಕೆತ್ತಿದ ವ್ಯಕ್ತಿರೂಪಗಳು...
ಕರಾವಳಿ ಉತ್ಸವ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ನಗರದ ಕದ್ರಿ ಉದ್ಯಾನದಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನದಲ್ಲಿ ಕಣ್ಣಿಗೆ ಆನಂದ ನೀಡುವ ಮನಸ್ಸನ್ನು ಪ್ರಫುಲ್ಲಗೊಳಿಸುವ ಹೂ–ಗಿಡಗಳ ಜೊತೆಯಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಸಿದ ಯಂತ್ರಗಳು, ಉಪಕರಣಗಳು, ಬೀಜ–ಗೊಬ್ಬರ, ಕೀಟನಾಶಕ ಮುಂತಾದವುಗಳಿಂದ ಸಮೃದ್ಧವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕೆ ಸಂಘಗಳು ಏರ್ಪಡಿಸಿರುವ ಪ್ರದರ್ಶದಲ್ಲಿ ‘ 3 ಬೋಗಿಗಳನ್ನು ಒಳಗೊಂಡ 24 ಅಡಿ ಉದ್ದದ ರೈಲು ಪ್ರಮುಖ ಆಕರ್ಷಣೆ. 30 ಅಡಿ ಉದ್ದದ ಹಳಿಯ ಮೇಲೆ ನಿಂತಿರುವ ರೈಲು ಗುಹೆಯಿಂದ ಹೊರಬರುತ್ತಿರುವಂತೆ ವಿನ್ಯಾಸಗೊಳಿಸಲಾಗಿದೆ.
ರೈಲಿಗಾಗಿ ತಲಾ 3 ಕ್ವಿಂಟಾಲ್ ಚೆಂಡು ಹೂ ಮತ್ತು ಸೇವಂತಿಗೆ, 400 ಬಂಚ್ ಹೈಬ್ರಿಡ್ ಸೇವಂತಿಗೆ ಬಟನ್ ಬಳಸಲಾಗಿದೆ ಎಂದು ‘ವಂದೇ ಭಾರತ್’ ಸಿದ್ಧಪಡಿಸಿದ ಕರಂಗಲ್ಪಾಡಿಯ ಐರಿಶ್ ಫ್ಲೋರಿಸ್ಟ್ ಮಾಲಕಿ ಗುಣಶ್ರೀ ತಿಳಿಸಿದರು. ರೈಲು ದಾಟಿ ಮುಂದೆ ಹೋದರೆ ತರಹೇವಾರಿ ಹೂಗಳ ಮಧ್ಯೆ ಹಲಸಿನ ಮರ. ಅದರಲ್ಲಿ ನೂರಾರು ಸಣ್ಣ ಹಲಸಿನಕಾಯಿಗಳು.
ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್ ಆಸ್ಟರ್, ಗೊಂಪ್ರೆಲಾ ಬಡ್ಡಿ ನೇರಳೆ, ಬೆಗೋನಿಯ, ವಿಂಕಾ ರೋಸಿಯಾ, ಕೋಳಿ ಜುಟ್ಟು, ಡೇಲಿಯಾ, ಪೆಟೂನಿಯಾ, ಟೊರಿನೊ ಸೇರಿದಂತೆ 30 ಜಾತಿಯ 15 ಸಾವಿರ ಹೂಕುಂಡಗಳು ಪುಷ್ಪಲೋಕವನ್ನು ತೆರೆದಿಟ್ಟಿವೆ. ಇನ್ನೊಂದು ಬದಿಯಲ್ಲಿ ತರಕಾರಿಗಳು. ಗಿಡದಲ್ಲಿ ಬೆಳೆದಿರುವ ಬೆಂಡೆ, ನವಿಲು ಕೋಸು, ಎಲೆಕೋಸು, ಆಲಂಕಾರಿಕ ಎಲೆಕೋಸು, ಕ್ಯಾರಟ್ ಮುಂತಾದವುಗಳನ್ನು ದಾಟಿ ಹೋದರೆ ಅರ್ಧವೃತ್ತಾಕಾರದಲ್ಲಿ ಅಳವಡಿಸಿರುವ ಚಪ್ಪರದಲ್ಲಿ ಎರಡೂ ಬದಿಯಲ್ಲೂ ತಲೆಮೇಲೂ ನೇತಾಡುವ ಹೀರೆಕಾಯಿ, ಪಡುವಲ, ಹಾಗಲ, ಬೀನ್ಸ್, ಅಲಸಂಡೆ...
ನಗರದಲ್ಲಿ ಮನೆಯ ಮುಂದೆ, ತಾರಸಿ ಮುಂತಾದ ಕಡೆಗಳಲ್ಲಿ ತರಕಾರಿ ಬೆಳೆಯುವ ಸಾಧ್ಯತೆಯನ್ನು ತಿಳಿಯಪಡಿಸುವ ತರಕಾರಿಗಳು ಗ್ರೋ ಬ್ಯಾಗ್‌ನಲ್ಲಿ ನಳನಳಿಸುತ್ತಿವೆ. ಪ್ರದರ್ಶನಾಂಗಣದ ಸುತ್ತ 100 ಮಳಿಗೆಗಳಲ್ಲಿ ನರ್ಸರಿ, ತೋಟಗಾರಿಕೆ ಇಲಾಖೆ, ಸ್ವಸಹಾಯ ಸಂಘಗಳು, ಪಿಲಿಕುಳ ನಿಸರ್ಗಧಾಮ ಮತ್ತು ಮಂಗಳೂರು, ದೂರದ ಊರುಗಳಿಂದ ಬಂದಿರುವ ವ್ಯಾಪಾರಿಗಳ ವೈವಿಧ್ಯಮಯ ಉತ್ಪನ್ನಗಳು. ತೋಟಗಾರಿಕೆ ಇಲಾಖೆಯಲ್ಲಿ ‘₹ 1ಕ್ಕೆ ಒಂದು ಗಿಡ’ವೂ ಸಿಗುತ್ತದೆ. ಬೊನ್ಸಾಯಿ, ಜೇನು, ಎಳನೀರು ಉತ್ಪನ್ನ, ಆಹಾರ ಪದಾರ್ಥಗಳು, ಸ್ವದೇಶಿ ಉತ್ಪನ್ನ, ಮೈ ಉಜ್ಜುವ, ಪಾತ್ರೆ ತೊಳೆಯುವ ನೈಸರ್ಗಿಕ ಬ್ರಷ್, ರಾಗಿ ಬೋಟಿ, ಮೆಕ್ಕೆ ಜೋಳದ ಚಿಪ್ಸ್, ಖಾದಿ ಬಟ್ಟೆಗಳೂ ಮಳಿಗೆಗಳಲ್ಲಿ ಇವೆ.
ಉದ್ಘಾಟನೆ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ ಕದ್ರಿ ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಕೆ.ಭಟ್ ಜಗನ್ನಾಥ ಗಾಂಭೀರ್ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್ ಸಿ.ಎಂ ಜೆ.ಪ್ರದೀಪ್ ಡಿಸೋಜ ಕೆ.ಪ್ರವೀಣ್ ಪಾಲ್ಗೊಂಡಿದ್ದರು. ಜ.26ರವರೆಗೆ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರದರ್ಶನ ತೆರೆದಿರುತ್ತದೆ. ಹಿರಿಯರಿಗೆ ₹ 30 ಹಾಗೂ ಮಕ್ಕಳಿಗೆ ₹ 20 ಪ್ರವೇಶ ಶುಲ್ಕವಿದೆ. ಶಿಕ್ಷಕರ ಜೊತೆ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.