ADVERTISEMENT

Mangaluru Kambala | ಬಂಗ್ರಕೂಳೂರು: ಮಂಗಳೂರು ಕಂಬಳ 27ರಂದು

ನವ ವರ್ಷ-ನವ ವಿಧ ಪರಿಕಲ್ಪನೆ– ಸಂಸದ ಕ್ಯಾ. ಬ್ರಿಜೇಶ್ ಚೌಟ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:55 IST
Last Updated 25 ಡಿಸೆಂಬರ್ 2025, 6:55 IST
ಸುದ್ದಿಗೋಷ್ಠಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ಸುಜಿತ್ ಪ್ರತಾಪ್‌, ವಿಜಯ್ ಕುಮಾರ್ ಕಂಗಿನಮನೆ, ಕಿರಣ್ ಕುಮಾರ್ ಕೋಡಿಕಲ್ ಮೊದಲಾದವರು ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿದರು. ಸುಜಿತ್ ಪ್ರತಾಪ್‌, ವಿಜಯ್ ಕುಮಾರ್ ಕಂಗಿನಮನೆ, ಕಿರಣ್ ಕುಮಾರ್ ಕೋಡಿಕಲ್ ಮೊದಲಾದವರು ಭಾಗವಹಿಸಿದ್ದರು   

ಮಂಗಳೂರು: ‘ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಒಂಬತ್ತನೇ ವರ್ಷದ 'ಮಂಗಳೂರು ಕಂಬಳ' ನವ-ವಿಧ ಕಾರ್ಯಕ್ರಮಗಳೊಂದಿಗೆ ಇದೇ 27ರಂದು ವಿಭಿನ್ನವಾಗಿ ನಡೆಯಲಿದೆ’ ಎಂದು ಕಂಬಳ ಸಮಿತಿ ಅಧ್ಯಕ್ಷರಾಗಿರುವ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು. 

‌ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಕಂಬಳವನ್ನು ಪರಿಸರ ಸ್ನೇಹಿಯಾಗಿ ಆಯೋಜಿಸಲಿದ್ದೇವೆ. ಇದೇ 27 ರಂದು ಬೆಳಿಗ್ಗೆ 8.30ಕ್ಕೆ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್‌ ಕಂಬಳವನ್ನು ಉದ್ಘಾಟಿಸುವರು. ಸಂಜೆ 6 ಗಂಟೆಗೆ ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು,  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.  

ನವ ವಿಧ ಪರಿಕಲ್ಪನೆ: ‘ನವ ವರ್ಷ -ನವವಿಧ ಪರಿಕಲ್ಪನೆಯಡಿ ನಡೆಯುವ ಈ ಕಂಬಳದಲ್ಲಿ  ಐದು ವಿಶಿಷ್ಟ ಚಟುವಟಿಕೆ ಹಾಗೂ ನಾಲ್ಕು ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ  ಆಕೆಯ ಸಾಹಸಗಾಥೆಯನ್ನು ಕಟ್ಟಿಕೊಡುವ  ಚಿತ್ರಕಲಾ ಪ್ರದರ್ಶನವನ್ನು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಸಹಯೋಗದೊಂದಿಗೆ ಏರ್ಪಡಿಸಲಿದ್ದೇವೆ. ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ 150 ವಿದ್ಯಾರ್ಥಿನಿಯರು ಈ ಗೀತೆಯನ್ನು ಹಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರಿಸರ ಸಂರಕ್ಷಣೆಯ ಪರಿಕಲ್ಪನೆಯಂತೆ ಕಂಬಳದ ಅಂಗವಾಗಿ ಸಸಿ ವಿತರಿಸಲಿದ್ದೇವೆ. ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ಊರಿನಲ್ಲಿ ಉದ್ಯಮ ಸ್ಥಾಪಿಸಿ ಯಶಸ್ವಿಯಾದ ಒಂಬತ್ತು ಉದ್ಯಮಿಗಳನ್ನು ಸನ್ಮಾನಿಸಲಿದ್ದೇವೆ. ವೃದ್ಧಾಶ್ರಮ ನಿವಾಸಿಗಳು ಕಂಬಳ ವೀಕ್ಷಿಸುವುದಕ್ಕೆ ವಿಶೇಷ ವ್ಯವಸ್ಥೆ ಮಾಡಲಿದ್ದೇವೆ’ ಎಂದರು.

ADVERTISEMENT

ಕಂಬಳ ಸಮಿತಿಯ ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ, ‘ಈ ಸಲದ ಕಂಬಳದಲ್ಲಿ 160ರಿಂದ 170 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಹಿರಿಯ ವಿಭಾಗದ ಹಾಗೂ ಕಿರಿಯ ವಿಭಾಗದಲ್ಲಿ ಗೆಲ್ಲುವ ಕೋಣಗಳಿಗೆ 2 ಪವನ್‌ ಚಿನ್ನವನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ’ ಎಂದರು. 

ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ಸಂಜಯ್ ಪ್ರಭು, ಜಾಯ್ಲೆಸ್ ಡಿಸೋಜ, ವಸಂತ್ ಜೆ. ಪೂಜಾರಿ, ನಂದನ್ ಮಲ್ಯ, ಅಜಿತ್ ಬೊಪಯ್ಯ, ಗುರುಚಂದ್ರ ಹೆಗಡೆ, ಅಭಿಷೇಕ್ ರೈ, ಈಶ್ವರ್ ಪ್ರಸಾದ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಸಂಚಲಕರಾದ ಸಂತ್ಯಾಗುತ್ತು ಸಚಿನ್ ಶೆಟ್ಟಿ, ಕಾರ್ಯದರ್ಶಿ ಅವಿನಾಶ್ ಸುವರ್ಣ, ಸುಜಿತ್ ಪ್ರತಾಪ್ ಮುಂತಾದವರು ಭಾಗವಹಿಸಿದ್ದರು. 

ಕಂಬಳಕ್ಕೆ ರಂಗು ತುಂಬಲಿವೆ ವಿವಿಧ ಸ್ಪರ್ಧೆ

ಕಂಬಳದ ಅಂಗವಾಗಿ ‘ರಂಗ್ ದ ಕೂಟ’ ಚಿತ್ರರಚನೆ ಸ್ಪರ್ಧೆ ನಡೆಲಿದೆ. 10 ವರ್ಷದವರೆಗಿನ ಮಕ್ಕಳು 'ರಂಗ್‌ದ ಎಲ್ಯ' 10ರಿಂದ 15 ವರ್ಷದೊಳಗಿನ ಮಕ್ಕಳು 'ರಂಗ್‌ದ ಮಲ್ಲ' ವಿಭಾಗದಲ್ಲಿ ಭಾಗವಹಿಸಬಹುದು. ‘ರಂಗ್‌ ಕೂಟ’ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ.  ಮಂಗಳೂರು ಕಂಬಳದ ಫೋಟೊಗ್ರಾಫಿ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ₹ 10 ಸಾವಿರ ನಗದು ಬಹುಮಾನವಿದೆ. ಕೃತಕ ಬುದ್ಧಿಮತ್ತೆಯನ್ನು (ಎ.ಐ) ಸೃಜನಾತ್ಮಕವಾಗಿ  ಬಳಸಿ ಮಂಗಳೂರು ಕಂಬಳದ ಗತ್ತನ್ನು ಪರಿಚಯಿಸಲು‘ಎಐ ಕ್ರಿಯೇಟಿವ್ ಯೋಧ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರೀಲ್ಸ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಈ ಕಂಬಳದಲ್ಲಿ ಸಿದ್ಧಪಡಿಸಿದ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ #mangalurukambala ಹ್ಯಾಶ್‌ಟ್ಯಾಗ್ ಬಳಸಿ ಕಂಬಳದ ಅಧಿಕೃತ ಖಾತೆಯೊಂದಿಗೆ ಹಂಚಿಕೊಳ್ಳಬಹುದು’ ಎಂದು ಚೌಟ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.