ADVERTISEMENT

ಕರಾವಳಿ ಉತ್ಸವ ಡಿ.23ರಿಂದ

ಬೀಚ್ ಉತ್ಸವ, ರಿವರ್ ಫೆಸ್ಟಿವಲ್ ಆಯೋಜನೆ: ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:08 IST
Last Updated 4 ಅಕ್ಟೋಬರ್ 2022, 6:08 IST
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು.
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿದರು.   

ಮಂಗಳೂರು: ‘ಡಿ.23ರಿಂದ ಜನವರಿ 1ರವರೆಗೆ ನಗರದ ತಣ್ಣೀರುಬಾವಿ ಕಡಲ ತಡಿಯಲ್ಲಿ ಕರಾವಳಿ ಉತ್ಸವ ಹಮ್ಮಿಕೊಳ್ಳ ಲಾಗುವುದು. ಅದಕ್ಕೆ ಅಗತ್ಯವಿರುವ ಉಪ ಸಮಿತಿಗಳ ರಚನೆ ಹಾಗೂ ಕಾರ್ಯಕ್ರಮದ ರೂಪರೇಷೆಯನ್ನು ಸಿದ್ಧಪಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿ ಉತ್ಸವಕ್ಕೆ ಸರ್ಕಾರದ ಅನುದಾನ, ಖಾಸಗಿ ಪ್ರಾಯೋಜಕತ್ವ, ಮೆರವಣಿಗೆ, ಸಾಂಸ್ಕೃತಿ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಬೀಚ್ ಉತ್ಸವ, ರಿವರ್ ಫೆಸ್ಟಿವಲ್ ಆಯೋಜನೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ ಸಚಿವರು, ಕರಾವಳಿ ಉತ್ಸವವನ್ನು ಸಾಂಸ್ಕೃತಿಕವಾಗಿ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಆಯೋಜನೆ ಮಾಡಲಾಗುವುದು ಎಂದರು. ಈ ಉತ್ಸವ ಯಶಸ್ವಿಯಾಗಲು ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಅನುಭವ ಹಾಗೂ ಸಲಹೆ ಪಡೆಯಲಾಗುವುದು ಎಂದರು.

ತಣ್ಣೀರು ಬಾವಿ ಕಡಲ ತೀರವನ್ನು ಪ್ರಧಾನ ವೇದಿಕೆಯನ್ನಾಗಿ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲಿಯೇ ಆಹಾರ ಮೇಳವನ್ನು ಆಯೋಜಿಸಲಾಗುವುದು. ಕದ್ರಿ ಪಾರ್ಕ್ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಉಪ ವೇದಿಕೆಗಳಿಗೆ ಅವಕಾಶ ನೀಡಲಾಗುವುದು ಎಂದರು.

ADVERTISEMENT

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಕೋವಿಡ್ ಸೋಂಕಿನಿಂದಾಗಿ ಎರಡು ವರ್ಷಗಳಿಂದ ಕರಾವಳಿ ಉತ್ಸವವನ್ನು ಹಮ್ಮಿಕೊಂಡಿಲ್ಲ. ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೊನಾವಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ. ಅಂಶುಕುಮಾರ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.