ADVERTISEMENT

ಮಂಗಳೂರು| ಕರಾವಳಿ ಉತ್ಸವ– ಹತ್ತಾರು ಆಕರ್ಷಣೆ: ಕಡಲತಡಿಯ ನಗರದಲ್ಲಿ ಸಡಗರವೋ ಸಡಗರ

ಪ್ರವೀಣ್‌ ಕುಮಾರ್‌ ಪಿ.ವಿ
Published 22 ಡಿಸೆಂಬರ್ 2025, 5:01 IST
Last Updated 22 ಡಿಸೆಂಬರ್ 2025, 5:01 IST
ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಭಾನುವಾರ ಕೇಕ್ ಹಾಗೂ ವೈನ್‌ ಮೇಳದ ಸೊಬಗು
ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಭಾನುವಾರ ಕೇಕ್ ಹಾಗೂ ವೈನ್‌ ಮೇಳದ ಸೊಬಗು   

ಮಂಗಳೂರು: ಪಡುವಣದಲ್ಲಿ ಬಾನು ಮುಸ್ಸಂಜೆ ವೇಳೆ ರಂಗೇರುತ್ತಿದ್ದಂತೆಯೇ ಕಡಲ ತಡಿಯ ನಗರದಲ್ಲಿ ಸಡಗರದ ವಾತಾವರಣ ಮೈದಳೆಯುತ್ತಿದೆ. ಕಡಲ ಕಿನಾರೆಯಲ್ಲಿ ನಡೆಯುವ ಕಬಡ್ಡಿ, ಹಗ್ಗ– ಜಗ್ಗಾಟ, ಫುಟ್‌ಬಾಲ್‌ ಕ್ರೀಡೆಗಳ ಗಮ್ಮತ್ತು, ಸಂಗೀತ ರಸಸಂಜೆಗಳು, ಆಗಸದಲ್ಲಿ ಚಿತ್ತಾರಗಳನ್ನು ಬಿಡಿಸುವ ಗಾಳಿಪಟಗಳ ಗೌಜಿ,  ಪಿಲಿಕುಳದಲ್ಲಿ ವಿಜ್ಞಾನದ ಕುತೂಹಲಗಳ ರಸಗವಳ... ಕದ್ರಿಯ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಕಲಾಪರ್ಬ, ಸಂಗೀತ ಸಂಜೆ ...

ಮುಂತಾದ ಹತ್ತು ಹಲವು ಆಕರ್ಷಣೆಗಳ ಮೂಟೆ ಹೊತ್ತ ಕರಾವಳಿ ಉತ್ಸವ ಮತ್ತೆ ನಾಡಿನಾದ್ಯಂತ ಜನರನ್ನು ಸೆಳೆಯುತ್ತಿದೆ. ಈ ಉತ್ಸವ ಮತ್ತಷ್ಟು ಹೊಸತನ, ಹೊಸ ಹುಮ್ಮಸ್ಸುಗಳೊಂದಿಗೆ ಗರಿಗೆದರಿ ಸಜ್ಜಾಗಿದೆ.

ಗಿಜಿಗುಡಲಿವೆ ಬೀಚ್‌ಗಳು

ಈ ಸಲದ ಕರಾವಳಿ ಉತ್ಸವದಲ್ಲಿ ಜಿಲ್ಲೆಯ ವಿವಿಧ ಪ್ರಮುಖ ಕಡಲ ಕಿನಾರೆಗಳಲ್ಲೂ ಒಂದಿಲ್ಲೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 

ADVERTISEMENT

ತಣ್ಣೀರುಬಾವಿ ಬ್ಲೂ ಫ್ಲ್ಯಾಗ್  ಕಿನಾರೆ ‘ಕೇಕ್ ಆ್ಯಂಡ್ ವೈನ್ ಫೆಸ್ಟ್’ಗೆ ಭಾನುವಾರ ಸಾಕ್ಷಿಯಾಯಿತು. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಮುನ್ನುಡಿ ರೂಪದಲ್ಲಿದ್ದ ಈ ಮೇಳದಲ್ಲಿ ತರಹೇವಾರಿ ಕೇಕ್‌ ಹಾಗೂ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಬೇರೆ ಬೇರೆ ಸ್ವಾದದ, ವಿಭಿನ್ನ ಸುವಾಸನೆಯ ವಿವಿಧ ಗಾತ್ರಗಳ ಕೇಕ್‍ಗಳ ರುಚಿ ಸವಿದ ಜನರು ತಮ್ಮಿಷ್ಟದ ಕೇಕ್‌ಗಳನ್ನು ಖರೀದಿಸಿ ಮನೆಗೂ ಒಯ್ದರು. ಜಗತ್ತಿನ ಬ್ರ್ಯಾಂಡ್‌ಗಳ ವೈನ್‍ಗಳ ರುಚಿಯನ್ನು ಒಂದೇ ಕಡೆ ಸವಿಯುವುದಕ್ಕೂ ಅವಕಾಶ ಕಲ್ಪಿಸಿತು. 

ತಣ್ಣೀರುಬಾವಿ ಕಿನಾರೆಯಲ್ಲಿ ಜ.3ರಂದು ಹೆಸರಾಂತ ಗಾಯಕ ಕೈಲಾಶ್ ಖೇರ್‌ ನೈಟ್ಸ್‌ ಹಾಗೂ ಜ.4ರಂದು ಖ್ಯಾತ ಹಾಡುಗಾರ ವಿಜಯಪ್ರಕಾಶ್‌ ರಸಸಂಜೆ  ಪ್ರಮುಖ ಆಕರ್ಷಣೆ. ಜ. 9ರಿಂದ 11ರವರೆಗೆ ಸ್ಟಾರ್ಟ್‌ ಅಪ್‌ ಕಾನ್‌ಕ್ಲೇವ್‌, ಟ್ಯಾಲೆಂಟ್ ಶೋ, ಮನರಂಜನಾ ಕಾರ್ಯಕ್ರಮಗಳು, ಟ್ರಯಥ್ಲಾನ್‌ ಮತ್ತಿತರ ಚಟುವಟಿಕೆಗಳನ್ನು ತಪಸ್ಯಾ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಜ.23ರಂದು ನೃತ್ಯ ಮೇಳ ನಡೆಯಲಿದೆ. 

ಗಾಳಿಪಟ ಉತ್ಸವ

ತಣ್ಣೀರುಬಾವಿ ಕಿನಾರೆಯಲ್ಲಿ ಜ.17 ಮತ್ತು 18ರಂದು ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. 10ಕ್ಕೂ ಹೆಚ್ಚು ದೇಶಗಳ ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಲಿವೆ. ಮುಸ್ಸಂಜೆಯ ತಂಗಾಳಿಯಲ್ಲಿ ತೇಲಾಡುವ ಬಗೆಬಗೆಯ ಗಾಳಿಪಟಗಳನ್ನು ಕಣ್ತುಂಬಿಕೊಂಡು, ಸ್ವತಃ ಗಾಳಿಪಟ ಹಾರಿಸುವ ಖುಷಿಯನ್ನು ಆಸ್ವಾದಿಸಬಹುದು. ಇಲ್ಲಿ ಜ.25ರಂದು ಮುಂಜಾನೆ ಯೋಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಉಳ್ಳಾಲ ಕಿನಾರೆಯಲ್ಲಿ ಇದೇ 27ರಂದು ಝುಂಬಾ, ಇದೇ 27 ಮತ್ತು 28ರಂದು ಹಗ್ಗ ಜಗ್ಗಾಟ, ಬೀಚ್ ವಾಲಿಬಾಲ್‌ ಹಾಗೂ ಬೀಚ್ ಕಬಡ್ಡಿ ಸ್ಪರ್ಧೆಗಳನ್ನು  ಹಾಗೂ ಆಹಾರ ಮೇಳವನ್ನು ಆಯೋಜಿಸಲಾಗಿದೆ. 

ಸಸಿಹಿತ್ಲು ಕಿನಾರೆಯಲ್ಲಿ ಜ.10 ಮತ್ತು 11ರಂದು ಸ್ಟ್ಯಾಂಡ್ ಅಪ್ ಪ್ಯಾಡಲ್‌ ರೇಸ್‌, ಕಯಾಕ್ ರೇಸ್‌, ಕಂಟ್ರಿ ಬೋಟ್ ರೇಸ್‌ನಂತ ಮೈನವಿರೇಳಿಸುವ ಸಾಹಸ ಕ್ರೀಡೆಗಳು ನಡೆಯಲಿವೆ.  ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಡಲ ಖಾದ್ಯಗಳ ಮೇಳವೂ ಇರಲಿದೆ.

ಪಣಂಬೂರು ಕಿನಾರೆಯಲ್ಲಿ ಜ. 17ರಿಂದ 19ರವರೆಗೆ  ಸಂಗೀತ ಸಂಜೆ, ಜಾವೆದ್ ಅಲಿ ನೈಟ್ಸ್‌ ಹಾಗೂ  ಮರಳುಶಿಲ್ಪ ಕಲಾಕೃತಿ ರಚನೆ ನಡೆಯಲಿದೆ.  

ಸೋಮೇಶ್ವರ ಕಿನಾರೆ ಉದಯ ರಾಗ ಹಾಗೂ ಬೀಚ್ ಯೋಗ ಕಾರ್ಯಕ್ರಮಗಳಿಗೆ ಜ. 24ರಂದು ಸಾಕ್ಷಿಯಾಗಲಿದೆ. ಅಂದು ಸಂಜೆ ಸಂಗೀತ ರಸಸಂಜೆ ಹಾಗೂ ಬ್ಯಾಂಡ್ ವಾದನ ಇರಲಿವೆ.  

ಈ ವರ್ಷ ಜ.25ರಂದು ಶ್ವಾನ ಮೇಳವನ್ನು ಆಯೋಜಿಸಲಾಗುತ್ತಿದೆ. ಇಷ್ಟು ವರ್ಷ ಕದ್ರಿ ಉದ್ಯಾನದಲ್ಲಿ ನಡೆಯುತ್ತಿದ್ದ ಈ ಮೇಳವನ್ನು ಈ ಸಲ ಕರವಳಿ ಉತ್ಸವ ಮೈದಾನದಲ್ಲೇ ಆಯೋಜಿಸುವ ಚಿಂತನೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಕದ್ರಿ ಉದ್ಯಾನದಲ್ಲಿ ಇದೇ 26ರಿಂದ ಫಲಫುಷ್ಪ ಪ್ರದರ್ಶನ ನಡೆಯಲಿದೆ. ಜ. 30ಮತ್ತು 31ರಂದು ಕದ್ರಿ ಉದ್ಯಾನದ ಬಳಿ ಆಹಾರೋತ್ಸವ ಏರ್ಪಡಿಸಲಾಗಿದೆ.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಿರ್ಮಿಸಿರುವ ನೀರ ಝರಿಯ ಸೊಬಗು ಆಸ್ವಾದಿಸುತ್ತಿರುವ ಜನರು
ಕರಾವಳಿ ಉತ್ಸವ ಅಂಗವಾಗಿ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಭಾನುವಾರ ಮುಸ್ಸಂಜೆ ಪ್ರವೀಣ್ ಗೋಖ್ಖಿಂಡಿ– ಜಯತೀರ್ಥ ಮೇವುಂಡಿ ಜುಗಲ್‌ಬಂದಿ  

ಕದ್ರಿ ಉದ್ಯಾನದ ಬೀದಿಯಲ್ಲಿ ‘ಕಲಾ ಪರ್ಬ’

ದೇಶದ ವಿವಿಧ ಭಾಗಗಳ ಕಲಾವಿದರ ಕಲಾಕೃತಿಗಳನ್ನು ಒಂದೇ ಕಡೆ ವೀಕ್ಷಿಸುವುದಕ್ಕೆ ಅವಕಾಶ ಕಲಾಪರ್ಬ ಈ ಸಲ ಜ .9ರಿಂದ 11ರವರೆಗೆ ಕದ್ರಿ ಉದ್ಯಾನದ ರಸ್ತೆಯಲ್ಲಿ ನಡೆಯಲಿದೆ.

‘ವೈಮಾನಿಕ ನೋಟ ಸವಿಯಲು ಹೆಲಿರೈಡ್’

ನೇತ್ರಾವತಿ– ಫಲ್ಗುಣಿ ನದಿಗಳು ಕೂಡುವ ಸ್ಥಳದಲ್ಲಿರುವ ‘ಕುಡ್ಲ’ದ ಪ್ರಾಕೃತಿಕ ಸೊಬಗನ್ನ ಆಗಸದೆತ್ತರದಿಂದ ಆಸ್ವಾದಿಸುವುದಕ್ಕೆ ಅವಕಾಶ ಕಲ್ಪಿಸುವ ‘ಹೆಲಿ ರೈಡ್‌’ ಅನ್ನು  ವಾರಂತ್ಯದಲ್ಲಿ ಆಯೋಜಿಸಲಾಗಿದೆ.  ಬೇಡಿಕೆ ಹೆಚ್ಚು ಇದ್ದರೆ ಇತರ ದಿನಗಳಲ್ಲೂ ಆಯೋಜಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ತಿಳಿಸಿದ್ದಾರೆ. ಸುಲ್ತಾನ್ ಬತ್ತೇರಿ ಹಾಗೂ ಪಣಂಬೂರಿನಲ್ಲಿ ಹೆಲಿರೈಡ್‌ಗೆ ಅವಕಾಶ ಕಲ್ಪಿಸಲಾಗಿದೆ. 

ಕರಾವಳಿ ಉತ್ಸವ ಮೈದಾನ ನಿತ್ಯವೂ ರಂಜನೆ

ಕರಾವಳಿ ಉತ್ಸವ ಮೈದಾನದ ವೇದಿಕೆಯಲ್ಲಿ ಜ.4ರವರೆಗೆ ನಿತ್ಯವೂ ಒಂದಿಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಲಿದೆ. ಇಲ್ಲಿ ತಲೆಎತ್ತಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ನಿರ್ಮಿಸಿರುವ ಭಾರಿ ಗಾತ್ರದ ನೀರ ಝರಿ ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದು.  ಪ್ರವಾಸಿಗರು ಇದರ ಎದುರಲ್ಲಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟರು.  ಗೃಹೋಪಯೋಗಿ ವಸ್ತುಗಳು ಬಟ್ಟೆ ಬರೆ ತಿಂಡಿ ತಿನಿಸು ಮಳಿಗೆಗಳಿಗೂ  ಜನ ಮುಗಿ ಬೀಳುತ್ತಿದ್ದರು.   ಅರಣ್ಯ ಇಲಾಖೆ ಪ್ರಾತ್ಯಕ್ಷಿಕೆ: ಕರಾವಳಿ ಉತ್ಸವ ಮೈದಾನದಲ್ಲಿ ಅರಣ್ಯ ಇಲಾಖೆ ಕಾಡಿನ ಮಹತ್ವ ಸಾರುವ ಪ್ರಾತ್ಯಕ್ಷಿಕೆಯನ್ನು ರೂಪಿಸಿದೆ. ಇಲ್ಲಿ ಆಲದ ಬಿಳಲುಗಳ ನಡುವಿನ ಹಾದಿ ಕಿರು ಜಲಪಾತ ಹುಲಿ ಸಿಂಹ ಜಿರಾಫೆ ಆನೆ ಕಾಡೆಮ್ಮೆ ಜಿಂಕೆ ಮತ್ತಿತರ ಕಾಡು ಪ್ರಾಣಿಗಳ ಪ್ರತಿಕೃತಿಗಳು  ಕಾಡಿನ ಅನುಭವ ಕಟ್ಟಿಕೊಡುತ್ತಿವೆ. ಸುರಂಗಗೊಳಗಿನ ನಡಿಗೆ  ರೋಮಾಂಚನ ನೀಡುತ್ತಿದೆ. ಗ್ರಾಮ ಅರಣ್ಯ ಸಮಿತಿಗಳ ಕಾರ್ಯವೈಖರಿ ಕಾಡಿನಂಚಿನ ಬುಡಕಟ್ಟು ಜನರ ಬದುಕನ್ನು ಸಾರುವ ಪ್ರತಿಕೃತಿಗಳೂ ಇಲ್ಲಿವೆ.  ಮರ ಬೆಳೆಸುವುದರಲ್ಲೇ ಬದುಕನ್ನು ಸವೆಸಿದ ಸಾಲು ಮರದ ತಿಮ್ಮಕ್ಕನಿಗೆ ಗೌರವ ಸಲ್ಲಿಸಲು ಆಕೆಯ ಪ್ರತಿಕೃತಿಯೂ ಇದೆ.  ಕರಾವಳಿ ಉತ್ಸವ ಮೈದಾನಕ್ಕೆ ಹಿರಿಯರಿಗೆ ₹ 40 ಹಾಗೂ ಮಕ್ಕಳಿಗೆ ₹ 20 ಪ್ರವೇಶ ಶುಲ್ಕ ಇರಲಿದೆ. ಅಮ್ಯೂಸ್‌ ಮೆಂಟ್‌ ಪಾರ್ಕ್ ಒಳಗಿನ ಚಟುವಟಿಕೆಗೆ ಪ್ರತ್ಯೇಕ ಶುಲ್ಕ ಇರಲಿದೆ.   

ಬಿಗ್ ಸಿನಿಮಾಸ್‌ನಲ್ಲಿ ಚಲನಚಿತ್ರೋತ್ಸವ

ಕರಾವಳಿ ಉತ್ಸವ ಅಂಗವಾಗಿ ಭಾರತ್‌ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಜ.19ರಿಂದ 21ರವರೆಗೆ   ಚಲನಚಿತ್ರೋತ್ಸವವೂ ಆಯೋಜನೆಯಾಗಿದೆ. ತುಳು ಕನ್ನಡ ಕೊಂಕಣಿ ಭಾಷೆಯ ಸಿನಿಮಾಗಳ ಜೊತೆಗೆ ಇತರ ಭಾಷೆಗಳ ಅಪೂರ್ವ ಸಿನಿಮಾಗಳನ್ನು ನೋಡುವ ಅವಕಾಶವೂ ಲಭ್ಯ. 

ಪಿಲಿಕುಳ: ವಿಜ್ಞಾನದ ಅರಿವಿನ ರಸಗವಳ 

ಕರಾವಳಿ ಉತ್ಸವ ಅಂಗವಾಗಿ ಪಿಲಿಕುಳದಲ್ಲಿ ವಾರಪೂರ್ತಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇದೇ 24ರಿಂದ 28ರವರೆಗೆ ಪಿಲಿಕುಳ ಪರ್ಬ 24ರಿಂದ 30ರವರೆಗೆ ಗಾಂಧಿ ಶಿಲ್ಪ ಬಜಾರ್ ಇದೇ 25ರಂದು ವನ್ಯಜೀವಿ ಕುರಿತ ನಿಧಿ ಶೋಧ ಇದೇ 27ರಂದು  ಪಕ್ಷಿ ವೀಕ್ಷಣೆ  ಇದೇ 28ರಂದು ಹಾವುಗಳ ಅರಿವು  ಸಂಸ್ಕೃತಿ ಗ್ರಾಮದಲ್ಲಿ ಯಕ್ಷಗಾನ ಬೊಂಬೆಯಾಟ . ಇದೇ 29ರಂದು  ವಿಜ್ಞಾನದಲ್ಲಿ ಮನರಂಜನೆ ಇದೇ 30ರಂದು ವಿಜ್ಞಾನ ರಸಪ್ರಶ್ನೆ  ಇದೇ 31ರಂದು ಪಿಲಿಕುಳ ತಾರಾಲಯದಲ್ಲಿ ಖಗೋಳವಿಜ್ಞಾನ ಪ್ರಾತ್ಯಕ್ಷಿಕೆ ಜ.1ರಂದು ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ ಜ.2ರಂದು ಡ್ರೋನ್  ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಇದೇ 20ರಿಂದ ಜ.1ರ ವರೆಗೆ ಪಿಲಿಕುಳ ಸಸ್ಯೊದ್ಯಾನದಲ್ಲಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.  ‘ಕರಾವಳಿ ಉತ್ಸವದ ಸಲುವಾಗಿ ಪಿಲಿಕುಳದಲ್ಲಿ ಇದೇ 20ರಿಂದ ಜ.4ರ ವರೆಗೆ ಕಾಂಬೋ ಪ್ಯಾಕ್ ಪ್ರವೇಶ ಶುಲ್ಕದಲ್ಲಿ ಶೇ.50ರ ರಿಯಾಯಿತಿ ಇದೆ.  ಪಿಲಿಕುಳಕ್ಕೆ ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.