ADVERTISEMENT

Kotekar Bank Robbery:: ₹4 ಕೋಟಿ ಮೌಲ್ಯದ ಆಭರಣ ದರೋಡೆ

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
ದರೋಡೆಕೋರರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಿರಿ ವೆಂಕಟೇಶ ಅವರ ಮನೆಗೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಶುಕ್ರವಾರ ಭೇಟಿ ಕೊಟ್ಟು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು
ದರೋಡೆಕೋರರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಿರಿ ವೆಂಕಟೇಶ ಅವರ ಮನೆಗೆ ಸಚಿವ ಈಶ್ವರ ಬಿ. ಖಂಡ್ರೆ ಅವರು ಶುಕ್ರವಾರ ಭೇಟಿ ಕೊಟ್ಟು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು   

ಉಳ್ಳಾಲ (ದಕ್ಷಿಣ ಕನ್ನಡ): ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ. ರೋಡ್‌ ಶಾಖೆಗೆ ಮಧ್ಯಾಹ್ನ 1.15ರ ವೇಳೆಗೆ ನುಗ್ಗಿದ ಮಾಸ್ಕ್‌ಧಾರಿಗಳು, ಚಿನ್ನಾಭರಣ–ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

‘ಕೆ.ಸಿ. ರೋಡ್ ಜಂಕ್ಷನ್‌ನ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಸಂಘದ ಶಾಖೆಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು, ಪಿಸ್ತೂಲ್, ತಲವಾರು, ಚಾಕು ಹಿಡಿದುಕೊಂಡಿದ್ದರು. ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಲಾಕರ್ (ಕಪಾಟು)ನಲ್ಲಿದ್ದ ನಗದು, ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪ್ರಾಥಮಿಕ ಮಾಹಿತಿಯಂತೆ ಅಂದಾಜು ₹4 ಕೋಟಿಯಷ್ಟು ದರೋಡೆ ಮಾಡಲಾಗಿದೆ. ಸಂಘದ ಅನೇಕ ಸಾಮಗ್ರಿ, ಸಿಬ್ಬಂದಿ ಮೊಬೈಲ್‌ ಫೋನ್‌ಗಳಿಗೆ ಹಾನಿ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ. ಈ ಮಾರ್ಗದಲ್ಲಿ ದೊರೆತಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ, ಇನ್ನಿತರ ಮಾಹಿತಿ ಕಲೆ ಹಾಕಿ ಶೀಘ್ರ ಪತ್ತೆ ಮಾಡಲಾಗುವುದು’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ADVERTISEMENT

ಸಿಬ್ಬಂದಿ ವಾಣಿ, ಇಂದುಜಾ, ದೀಪಾ ಹಾಗೂ ಚಿನ್ನ ಪರಿಶೀಲನೆ ಮಾಡುವ ರಾಮಚಂದ್ರ ಆಚಾರ್ಯ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾ ದುರಸ್ತಿಗೆ ಬಂದಿದ್ದ ಸಂದೀಪ್ ಎಂಬುವರು ಸಂಘದಲ್ಲಿ ಇದ್ದ ವೇಳೆ ಐದು ಮಂದಿಯ ತಂಡ ಒಳಗೆ ನುಗ್ಗಿದೆ.

‘ತಲವಾರು, ಪಿಸ್ತೂಲ್ ಹಿಡಿದಿದ್ದ ಅವರು, ಸಿಬ್ಬಂದಿಗೆ ಬೆದರಿಕೆ ಹಾಕಿದರು. ಇಬ್ಬರು ಕೌಂಟರ್ ಒಳಗೆ ನುಗ್ಗಿದ್ದು, ಒಬ್ಬ ಲಾಕರ್‌ ಬಳಿ ತೆರಳಿ, ಚಿನ್ನ, ನಗದನ್ನು ಮೂರು ಗೋಣಿಚೀಲದೊಳಗೆ ತುಂಬಿಸಿಕೊಂಡ. ಈ ವೇಳೆ ಸಿ.ಸಿ.ಟಿ.ವಿ ಕ್ಯಾಮೆರಾ ದುರಸ್ತಿಗೆ ಬಂದಿದ್ದ ಸಂದೀಪ್, ರಕ್ಷಣೆಗಾಗಿ ಕೈ ಮುಗಿದಿದ್ದು, ಅವರ ಕೈಯಲ್ಲಿದ್ದ ಉಂಗುರವನ್ನೂ ಕಿತ್ತುಕೊಂಡರು. ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು, ಕೃತ್ಯಕ್ಕೆ ಅಡ್ಡಿಮಾಡಿದರೆ, ಶೂಟ್ ಮಾಡಿ ಕೊಲ್ಲುವುದಾಗಿ ಹೆದರಿಸಿದರು’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಆತಂಕದ ಕ್ಷಣವನ್ನು ವಿವರಿಸಿದರು.

‘ಈ ವೇಳೆ ಸಿ.ಸಿ.ಟಿ.ವಿ ಕ್ಯಾಮೆರಾ ದುರಸ್ತಿಗೆ ಬಂದಿದ್ದ ಸಂದೀಪ್, ರಕ್ಷಣೆಗಾಗಿ ಕೈ ಮುಗಿದಿದ್ದು, ಅವರ ಕೈಯಲ್ಲಿದ್ದ ಉಂಗುರವನ್ನೂ ಕಿತ್ತುಕೊಂಡರು. ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು, ಕೃತ್ಯಕ್ಕೆ ಅಡ್ಡಿಮಾಡಿದರೆ, ಶೂಟ್ ಮಾಡಿ ಕೊಲ್ಲುವುದಾಗಿ ಹೆದರಿಸಿದರು’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಆತಂಕದ ಕ್ಷಣವನ್ನು ವಿವರಿಸಿದರು.

ಈ ಜಂಕ್ಷನ್‌ನಲ್ಲಿ ಇರುವವರಲ್ಲಿ ಮುಸ್ಲಿಂ ವ್ಯಾಪಾರಸ್ಥರೇ ಹೆಚ್ಚಿನವರು. ಶುಕ್ರವಾರ ಆದ ಕಾರಣ ಎಲ್ಲರೂ ಪ್ರಾರ್ಥನೆಗೆ ತೆರಳಿದ್ದರು. ಅಂಗಡಿಗಳು ಬಂದಾಗಿದ್ದವು. ಮಂಗಳೂರಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಗಳು ಇದ್ದ ಕಾರಣ ಬಹುಪಾಲು ಪೊಲೀಸರನ್ನು ಅಲ್ಲಿಗೆ ಭದ್ರತೆಗೆ ನಿಯೋಜಿಸಲಾಗಿತ್ತು.

ಬ್ಯಾಂಕ್ ಸಿಬ್ಬಂದಿ ಕೂಗಿಕೊಂಡಿದ್ದನ್ನು ಕೇಳಿ, ಬ್ಯಾಂಕ್ ಕೆಳಗಿನ ಮಹಡಿಯಲ್ಲಿದ್ದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ಮೇಲಕ್ಕೆ ಓಡಿದ್ದಾರೆ. ಅವರಿಗೆ ಕನ್ನಡದಲ್ಲಿ ಬೈದಿರುವ ಆಗಂತುಕರು, ವಾಪಸ್ ಹೋಗುವಂತೆ ಹೆದರಿಸಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದರು.

ದುರಸ್ತಿ ದಿನವೇ ಕೃತ್ಯ:

ತಮ್ಮ ಶಾಖೆಯಲ್ಲಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದೃಶ್ಯಗಳು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ,  ಸಂದೀಪ್ ಅವರಿಗೆ ರಿಪೇರಿಗೆ ಬರಲು ತಿಳಿಸಿದ್ದರು. ಅದರಂತೆ ಸಂದೀಪ್ ಮಧ್ಯಾಹ್ನ 12.30ರ ವೇಳೆಗೆ ಬ್ಯಾಂಕ್‌ಗೆ ಬಂದಿದ್ದಾರೆ. ‘ದುರಸ್ತಿ ಕಾರ್ಯ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ದರೋಡೆಕೋರರು ಬ್ಯಾಂಕ್ ಒಳಗೆ ನುಗ್ಗಿದರು’ ಎಂದು ಸಂದೀಪ್ ತಿಳಿಸಿದರು.

‘ಒಂದು ಕೈಯಲ್ಲಿ ತಲವಾರು, ಇನ್ನೊಂದು ಕೈಯಲ್ಲಿ ಪಿಸ್ತೂಲು ತೋರಿಸುತ್ತ ಆಗಂತುಕರು ಒಳನುಗ್ಗಿದರು. ತಲವಾರನ್ನು ನೆಲಕ್ಕೆ ಬಡಿದು ಎಲ್ಲರೂ ಕುಳಿತುಕೊಳ್ಳುವಂತೆ ಒಬ್ಬ ಸೂಚಿಸಿದ. ಭೀತಿಯಿಂದ ಎಲ್ಲರೂ ಮೂಲೆಯಲ್ಲಿ ಕುಳಿತೆವು. ಅವರಲ್ಲಿ ಒಬ್ಬ ನೇರವಾಗಿ ಸ್ಟ್ರಾಂಗ್‌ರೂಮ್‌ಗೆ ಹೋದ. ಎಲ್ಲರೂ ತೂತು ಇರುವ (ಟೋರ್ನ್) ಜೀನ್ಸ್ ಪ್ಯಾಂಟ್ ಮತ್ತು ಮಾಸ್ಕ್‌ ಧರಿಸಿದ್ದರು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ.ಖಾದರ್ ಬಳಿ ರಾಮಚಂದ್ರ ಆಚಾರ್ಯ ಹೇಳಿಕೊಂಡರು.

ನಕಲಿ ನಂಬರ್ ಪ್ಲೇಟ್?:

ಫಿಯೆಟ್ ಲಿನಿಯಾ ಕಾರಿನಲ್ಲಿ ಬಂದಿದ್ದ ಆರು ಮಂದಿ ಕಿನ್ಯಾ ರಸ್ತೆ ಮಾರ್ಗವಾಗಿ ಸಂಘದ ಎದುರು ಬಂದಿದ್ದಾರೆ. ಗೋಣಿಚೀಲದ ಜೊತೆಗೆ ಸಂಘಕ್ಕೆ ತೆರಳಿದ್ದಾರೆ. ಒಬ್ಬ ಮಾತ್ರ ಕಾರಿನ ಒಳಗೆ ಇದ್ದು, ಚೀಲ ತುಂಬಿಸಿಕೊಂಡು ವಾಪಸ್ ಬಂದ ಮೇಲೆ ಕಾರು ಹೊರಟಿದೆ. ಈ ದೃಶ್ಯವು ಪಕ್ಕದ ಗೋದಾಮಿನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರಿನ ನೋಂದಣಿ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿ, ಮಾಲೀಕನಿಗೆ ಕರೆ ಮಾಡಿದಾಗ ಅದು ನಕಲಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಟೋಲ್ ಪಾವತಿ:

ಕೃತ್ಯ ನಂತರ ಆರೋಪಿಗಳು ಕೇರಳದತ್ತ ಸಾಗಿದ್ದು, ತಲಪಾಡಿ ಟೋಲ್‌ಗೇಟ್‌ನಲ್ಲಿ ₹150 ಹಣ ಕೊಟ್ಟು ರಶೀದಿ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ನಕಲಿಯಾಗಿದ್ದ ಕಾರಣ ಕಾರಿನಲ್ಲಿ ಫಾಸ್ಟ್ಯಾಗ್ ಇರಲಿಲ್ಲ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

ಚಿನ್ನ ಬಿಟ್ಟು ಹೋದರು:

ಅಂದಾಜು ₹6 ಕೋಟಿಯಷ್ಟು ಚಿನ್ನವನ್ನು ದರೋಡೆಕೋರರು ಗಡಿಬಿಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಸುಮಾರು 12 ಕೆ.ಜಿ.ಯಷ್ಟು ಚಿನ್ನ ಸಂಘದಲ್ಲೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ತುರ್ತು ಸಭೆ ನಡೆಸಿದ ಸಿ.ಎಂ:

ಮಂಗಳೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ದರೋಡೆ ಪ್ರಕರಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪಶ್ಚಿಮವಲಯ ಐಜಿಪಿ ಅಮಿತ್ ಸಿಂಗ್‌, ಮಂಗಳೂರು ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಅವರ ಜೊತೆ ತುರ್ತು ಸಭೆ ನಡೆಸಿದರು.

‘ನೀವೆಲ್ಲಾ ಇದ್ದು ಯಾಕೆ ಹೀಗಾಯ್ತು? ಆರೋಪಿಗಳು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟು ಟೋಲ್‌ಗೇಟ್‌ಗಳನ್ನು ದಾಟಿ ಹೋಗಿದ್ದಾರೆ. ನೀವು ಟೋಲ್‌ಗೇಟ್‌ಗಳಲ್ಲಿ ಏಕೆ ತಪಾಸಣೆ ನಡೆಸಲಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಎಲ್ಲ ಟೋಲ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಸುತ್ತಲಿನ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂದಿ ಹಾಕಿ ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಬೇಕು’ ಎಂದು ನಿರ್ದೇಶನ ನೀಡಿದರು.

ಗುಂಡೇಟಿನಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್
ಸಿ.ಸಿ.ಟಿ.ವಿ. ಕ್ಯಾಮೆರಾ ದುರಸ್ತಿ ಇದ್ದ ಕಾರಣ ಸ್ಟ್ರಾಂಗ್ ರೂಮ್ ಬಾಗಿಲು ತೆರೆದಿತ್ತು. ಪ್ರತಿಬಾರಿ ಗ್ರಾಹಕರಿಲ್ಲದ ವೇಳೆ ಗಮನಿಸಿ ಬಾಗಿಲು ಮುಚ್ಚುತ್ತಿದ್ದೆವು. ಇಂದು ಬಾಗಿಲು ಮುಚ್ಚದಿರುವುದನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ.
ವಾಣಿ ಲೋಕಯ್ಯ ಶಾಖಾ ವ್ಯವಸ್ಥಾಪಕಿ
ದರೋಡೆ ಕೃತ್ಯ ನಡೆದ ಬೆನ್ನಲ್ಲೇ ಪೊಲೀಸರು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು
ಗ್ರಾಹಕರು ಗಾಬರಿ ಆಗಬೇಕಿಲ್ಲ. ₹19 ಕೋಟಿಯಷ್ಟು ವಿಮೆ ಇದೆ. ವಿಮಾ ಕಂಪನಿ ಜೊತೆ ಮಾತುಕತೆ ನಡೆಸಲಾಗಿದೆ.
ಕೃಷ್ಣ ಶೆಟ್ಟಿ ಬ್ಯಾಂಕ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.