ADVERTISEMENT

ದೈವಾರಾಧನೆ ಪಾತ್ರಕ್ಕೆ ಆಕ್ಷೇಪ ಸಲ್ಲ: ರಂಗಕರ್ಮಿ ಬಾಸುಮ ಕೊಡಗು ಅಭಿಮತ

ಮಂಗಳೂರು ಲಿಟ್‌ಫೆಸ್ಟ್‌ನ ‘ಪರದೆಯಲ್ಲಿ ಪರಂಪರೆ’ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:45 IST
Last Updated 12 ಜನವರಿ 2026, 6:45 IST
ಪರದೆ ಮೇಲೆ ಪರಂಪರೆ ವಿಷಯದಲ್ಲಿ ಬಾಸುಮ ಕೊಡಗು ಮಾತನಾಡಿದರು. ಶ್ರೀರಾಜ್ ಗುಡಿ ಪಾಲ್ಗೊಂಡಿದ್ದರು
ಪರದೆ ಮೇಲೆ ಪರಂಪರೆ ವಿಷಯದಲ್ಲಿ ಬಾಸುಮ ಕೊಡಗು ಮಾತನಾಡಿದರು. ಶ್ರೀರಾಜ್ ಗುಡಿ ಪಾಲ್ಗೊಂಡಿದ್ದರು   

ಮಂಗಳೂರು: ‘ದೈವಾರಾಧನೆಯನ್ನು ಪರದೆಯ ಮೇಲೆ ತೋರಿಸಬಾರದು ಎನ್ನುವುದು ಸರಿಯಲ್ಲ. ಪರದೆಯ ಮೇಲೆ ತರುವ ಮೊದಲು ಆದಾಧನೆಯ  ಅಧ್ಯಯನ ಮಾಡಬೇಕಾದ ಅಗತ್ಯವಿದೆ’ ಎಂದು ರಂಗಕರ್ಮಿ, ನಟ ಬಾಸುಮ ಕೊಡಗು ಹೇಳಿದರು.

ಭಾರತ್ ಫೌಂಡೇಷನ್‌ ನಗರದಲ್ಲಿ ಆಯೋಜಿಸಿದ್ದ ಮಂಗಳೂರು ಲಿಟ್‌ಫೆಸ್ಟ್‌ನಲ್ಲಿ ‘ಪರದೆ ಮೇಲೆ ಪರಂಪರೆ: ಸಂವಾದ’ ಗೋಷ್ಠಿಯಲ್ಲಿ ಮಾತನಾಡಿದ ‘ನಾನು ಅನೇಕ ನಾಟಕಗಳಲ್ಲಿ ಭೂತ ಕಟ್ಟುವ ಪಾತ್ರ ಮಾಡಿದ್ದೇನೆ. ಸಿನಿಮಾಗಳಲ್ಲಿಯೂ ಪಾತ್ರ ನಿರ್ವಹಿಸಿದ್ದೇನೆ. ಆಗ ತಕರಾರೂ ಇರಲಿಲ್ಲ. ಹಿಂದೆಲ್ಲ ವಿಮರ್ಶೆಗೆ ಮೊದಲು ಅಧ್ಯಯನ ಮಾಡಲಾಗುತ್ತಿತ್ತು. ಈಗ ಅದಿಲ್ಲ. ತಪ್ಪು ಹುಡುಕುವುದಕ್ಕೇ ಹಠತೊಟ್ಟಂತೆ ಮಾಡುತ್ತಾರೆ. ಒಪ್ಪಿಗೆ ಇಲ್ಲದ್ದಕ್ಕೆ ನಿಷೇಧ ಒಡ್ಡುವುದು ಸರಿಯಲ್ಲ’ ಎಂದರು.

‘ಯಕ್ಷಗಾನವನ್ನು ಜಾಹೀರಾತಿನಲ್ಲಿ ಬಳಸುವುದು ಸಲ್ಲ. ವಾಣಿಜ್ಯ ಉದ್ದೇಶದಿಂದ ಯಕ್ಷಗಾನವನ್ನು ಜಾಹೀರಾತು, ವೀಡಿಯೊಗಳಲ್ಲಿ ಬಳಸುವುದು ತಪ್ಪು. ಯಕ್ಷಗಾನದ ಪ್ರಯೋಗ ಪರಂಪರೆಯ ನೆಲೆಗಟ್ಟಿನಲ್ಲಿ ಆಗಬೇಕು’ ಎಂದು ಅವರು ಹೇಳಿದರು. ಶ್ರೀರಾಜ್ ಗುಡಿ ನಿರ್ವಹಿಸಿದರು.

ADVERTISEMENT

ಸಬ್ಸಿಡಿ ಅವಶ್ಯ: ಶೇಷಾದ್ರಿ

'ಸರ್ಕಾರದ ಸಬ್ಸಿಡಿ ಇಲ್ಲದಿದ್ದರೆ ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣ ಕಷ್ಟ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟರು. 

‘ಚಿತ್ರ ಮತ್ತು ಚೇತನ: ಕನ್ನಡದ ಸೃಜನಶೀಲ ಜವಾಬ್ದಾರಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸರ್ಕಾರದ ₹10 ಲಕ್ಷ ಸಬ್ಸಿಡಿ ಮುಖ್ಯ‌. ‘ಮುನ್ನುಡಿ’ ಮಾಡಿದಾಗ 20 ಚಿತ್ರಗಳಿಗೆ ತಲಾ ₹10 ಲಕ್ಷ ಸಿಗುತ್ತಿತ್ತು’ ಎಂದರು.

‘ಐತಿಹಾಸಿಕ ಚಿತ್ರಗಳನ್ನು ಜವಾಬ್ದಾರಿಯಿಂದ ಮಾಡಬೇಕು. ಕಿತ್ತೂರು ಚೆನ್ನಮ್ಮಳ ಕಥೆ ಬೆಳಗಾವಿಯ ಪ್ರಾಂತ್ಯದ್ದು. ಚಿತ್ರದಲ್ಲಿ ಸಿನಿಮಾಕನ್ನಡ ಬಳಸಲಾಗಿತ್ತು. ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಪ್ರೇಮಕಥೆಯ ವೈಭವೀಕರವಿತ್ತು. ಹೀಗೆ ವೈಭವೀಕರಣ ಮಾಡುವ ಮೂಲಕ ಇತಿಹಾಸವನ್ನು ತಿರುಚಬಾರದು’ ಎಂದರು.

ಮಾಳವಿಕಾ ಅವಿನಾಶ್‌ ಮಾತನಾಡಿ, ‘ತಪ್ಪು ತೋರಿಸುವುದಕ್ಕಿಂತ ತೋರಿಸದಿರುವುದೇ ಲೇಸು. ಈ ನಿಟ್ಟಿನಲ್ಲಿ ಸಂಶೋಧನೆ ಅಗತ್ಯ’ ಎಂದು ಹೇಳಿದರು.

‘ಸುದ್ದಿಗಿಂತ ಅಭಿಪ್ರಾಯವೇ ಹೆಚ್ಚು’ 

ಪತ್ರಕರ್ತರೆಲ್ಲರೂ ಪಕ್ಷಪಾತಿಗಳೇ. ಹಾಗಿಲ್ಲ ಎನ್ನುವವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಆದರೆ ನಿಜವಾದ ಪತ್ರಕರ್ತರು ಎಲ್ಲವನ್ನೂ ಬದಿಗಿಟ್ಟು ಸುದ್ದಿ ಬಗ್ಗೆ ಮಾತ್ರ ಗಮನ ನೀಡುತ್ತಾರೆʼ ಎಂದು ಎಎನ್‌ಐ ಪ್ರಧಾನ ಸಂಪಾದಕಿ ಸ್ಮಿತಾ ಪ್ರಕಾಶ್‌ ಹೇಳಿದರು.

‘ನ್ಯೂಸ್‌ ರೂಂ ಆ್ಯಂಡ್‌ ನ್ಯೂಸ್‌ ಫೀಡ್‌ʼ ಗೊಷ್ಠಿಯಲ್ಲಿ ಮಾತನಾಡಿದ ಅವರು ‘ಎಐಯನ್ನು ಶತ್ರುವಾಗಿ ನೋಡಬೇಕಾಗಿಲ್ಲ. ಈಗ ಕೆಲಸಗಳು ಸುಲಭ ಹಾಗೂ ವೇಗವಾಗಿ ಆಗುತ್ತವೆʼ ಎಂದರು. 

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಸಂಸ್ಕೃತ ಭಾರತಿ ತಂಡದಿಂದ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಿತು  ಪ್ರಜಾವಾಣಿ ಚಿತ್ರ 

ಹಿಂದೂ ಹತ್ಯೆ ವಿರುದ್ಧ ಕ್ರಮವಾಗಲಿ

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ತಡೆಯಲು ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗಬೇಕು’ ಎಂದು ಒಪಿ ಜಿಂದಾಲ್ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಸ್ವಸ್ತಿ ರಾವ್‌ ಹೇಳಿದರು. ನೆರೆರಾಷ್ಟ್ರಗಳ ಸವಾಲುಗಳು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು ‘1971ರಲ್ಲಿ ಬಾಂಗ್ಲಾದೇಶದಲ್ಲಿ ಸಮಸ್ಯೆ ಉದ್ಭವವಾದಾಗ ಭಾರತ ಮಧ್ಯೆ ಪ್ರವೇಶಿಸಿತ್ತು’ ಎಂದು ಹೇಳಿದರು.  ರುಚಿರಾ ಕಾಂಬೋಜ್‌ ಮತ್ತು ಬಿದ್ದಂಡ ಚೆಂಗಪ್ಪ ಪಾಲ್ಗೊಂಡಿದ್ದರು.

‘ಕೊಡವರ ಮೂಲ ಹುಡುಕುವುದು ಬೇಡ’

ಅದೆಷ್ಟೋ ಜನಸಮುದಾಯಗಳು ಇದ್ದರೂ ಕೊಡವರ ಮೇಲೆ ವಿಶೇಷ ಆಸಕ್ತಿ ಹೊಂದಿ ಮೂಲ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಇದು ಯಾಕೆ ಎಂದು ಗೊತ್ತಾಗುತ್ತಿಲ್ಲ. ಕೊಡವರು ಕೊಡಗಿನವರೇ ಅವರ ಮೂಲ ಹುಡುಕುವ ಅಗತ್ಯವಿಲ್ಲ ಎಂದು ಕೊಡವ ಭಾಷೆ ಭೂಮಿ ಮತ್ತು ಬದುಕು ಎಂಬ ವಿಷಯದ ಗೋಷ್ಠಿಯಲ್ಲಿ ರೇವತಿ ಹೇಳಿದರು. ಕೊಡವರ ಮೂಲದ ಬಗ್ಗೆ ಕಾವ್ಯದಲ್ಲೇ ಮಾಹಿತಿ ಇದೆ ಎಂದು ಹೇಳಿದ ನಾಗೇಶ್ ಕಾಲೂರು ‘ಕೊಡಗಿನ ಅನೇಕ ಭಾಗದಲ್ಲಿ ಈಗ ಮಲಯಾಳಂ ಭಾಷೆಯ ಫಲಕಗಳು ರಾರಾಜಿಸುತ್ತಿವೆ. ಇದು ಯಾವುದರ ಲಕ್ಣಣ ಎಂದು ಅರ್ಥವಾಗುತ್ತಿಲ್ಲ’ ಎಂದರು. ಕಿಶೋರ್ ಕುಮಾರ್ ಶೇಣಿ ಸಮನ್ವಯಕಾರರಾಗಿದ್ದರು.

ಆಪರೇಷನ್‌ ಸಿಂಧೂರ ಇನ್ನಷ್ಟು ಮುಂದುವರಿಸಬೇಕಿತ್ತು ಎಂದು ಹಲವರು ಹೇಳಿದ್ದರು. ಭಯೋತ್ಪಾದನೆಗೆ ಉತ್ತರ ಕೊಡುವುದು ಸಿಂಧೂರದ ಉದ್ದೇಶವಾಗಿತ್ತು. ಅದನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ.
–ಶ್ರೀರಾಮ್‌ ಸುಂದರ್ ಚೌಲಿಯಾ, ಅಂಕಣಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.