ADVERTISEMENT

ಸರ್ಕಾರಿ ವ್ಯವಸ್ಥೆಯಲ್ಲಿ ಸಂವೇದನಾಶೀಲರ ಕೊರತೆ: ಶತಾವಧಾನಿ ಆರ್. ಗಣೇಶ

‘ಮಂಗಳೂರು ಲಿಟ್‌ ಫೆಸ್ಟ್’ಗೆ ಚಾಲನೆ ನೀಡಿದ ಶತಾವಧಾನಿ ಆರ್. ಗಣೇಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 11:34 IST
Last Updated 8 ಏಪ್ರಿಲ್ 2022, 11:34 IST
ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಂಗಳೂರು ಲಿಟ್‌ ಫೆಸ್ಟ್‌ನ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ ಜನರು –ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಂಗಳೂರು ಲಿಟ್‌ ಫೆಸ್ಟ್‌ನ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ ಜನರು –ಪ್ರಜಾವಾಣಿ ಚಿತ್ರ   

ಮಂಗಳೂರು: ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳಿಂದ ಕಲೆ, ಸಂಸ್ಕೃತಿಯ ಬಗ್ಗೆ ಒಳ್ಳೆಯ ಕೆಲಸಗಳಾಗುತ್ತವೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ಖಾಸಗಿ ಸಂಸ್ಥೆಗಳು ವಿಶೇಷ ಮುತುವರ್ಜಿ ವಹಿಸಿ, ಸ್ವಯಂ ಪ್ರೇರಣೆಯಿಂದ ಇಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ಶತಾವಧಾನಿ ಆರ್. ಗಣೇಶ ಸಲಹೆ ಮಾಡಿದರು.

ಇಲ್ಲಿನ ಓಷಿಯನ್‌ ಪರ್ಲ್ ಹೋಟೆಲ್‌ನಲ್ಲಿ ಶುಕ್ರವಾರದಿಂದ ಎರಡು ದಿನ ಆಯೋಜಿಸಿರುವ ನಾಲ್ಕನೇ ಆವೃತ್ತಿಯ ‘ಮಂಗಳೂರು ಲಿಟ್‌ ಫೆಸ್ಟ್’ಗೆ ಚಾಲನೆ ನೀಡಿ, ‘ಸಾಹಿತ್ಯ ಮತ್ತು ಕಲೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಭೂಮಿಯ ಅಂತರ್ಜಲ ಹೆಚ್ಚಿಸಿದರೆ, ಸುತ್ತಲಿನ ಕೆರೆ–ಬಾವಿಗಳ ನೀರಿನ ಮಟ್ಟ ಹೆಚ್ಚುತ್ತದೆ. ಹಾಗೆಯೇ ಉತ್ತಮ ವಿಚಾರಗಳನ್ನು ತಿಳಿದು ನಮ್ಮೊಳಗಿನ ಅಂತರ್ಜಲ ಹೆಚ್ಚಿಸಿಕೊಳ್ಳುವ ಜತೆಗೆ, ಸುತ್ತಮುತ್ತ ಅದನ್ನು ಪಸರಿಸಿ, ಒಳ್ಳೆಯ ವಾತಾವರಣ ಸೃಷ್ಟಿಸಬೇಕು. ಇಷ್ಟಾದರೂ, ಸರ್ಕಾರಿ ವಲಯದಿಂದ ಪ್ರೋತ್ಸಾಹ ದೊರೆಯಬಹುದೆಂಬ ನಿರೀಕ್ಷೆ ಇಟ್ಟುಕೊಂಡರೆ, ಕೆಲವೊಮ್ಮೆ ನಿರಾಸೆಯ ಫಲಿತಾಂಶ ಸಿಗಬಹುದು’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

‘ಸರ್ಕಾರಿ ಸಂಸ್ಥೆಗಳಲ್ಲಿ ಸಂವೇದನಾಶೀಲರ ಕೊರತೆ ಕಾಡುತ್ತಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಆದರೆ, ಸಾಹಿತ್ಯ ಸಮ್ಮೇಳನ, ಸಾಹಿತ್ಯ ಅಕಾಡೆಮಿ, ವಿಶ್ವವಿದ್ಯಾಲಯಗಳಲ್ಲಿ ಅಭಿಜಾತ ಕನ್ನಡದ ಗುರುತಿಸುವಿಕೆ ಆಗುತ್ತಿಲ್ಲ. 800 ವರ್ಷಗಳ ಇತಿಹಾಸ ಇರುವ ಅವಧಾನ ಕಲೆಗೆ ಎಲ್ಲಿಯೂ ಪ್ರಾಶಸ್ತ್ಯ ಸಿಗುತ್ತಿಲ್ಲ. ಅಭಿಜಾತ ಎಂದಾಕ್ಷಣ ಅದಕ್ಕೆ ಜಾತಿಯ ಬಣ್ಣ ಬಳಿಯುವ ಪ್ರವೃತ್ತಿ ಕಾಣುತ್ತದೆ. ಸಂಕುಚಿತ ಮನೋಭಾವದಿಂದ ಕಲೆಗಳು ಉಳಿಯಲು ಸಾಧ್ಯವಿಲ್ಲ. ಅತ್ಯುತ್ತಮವಾದ ಕಲೆ ಅಥವಾ ಇನ್ನಾವುದೇ ಸಂದರ್ಭದಲ್ಲಿ ಅಲ್ಲಿ ನ್ಯಾಯವೇ ಪ್ರಧಾನವಾಗಿ ಉಳಿದ ಸಂಗತಿಗಳು ಗೌಣವಾಗಬೇಕು’ ಎಂದು ಪ್ರತಿಪಾದಿಸಿದರು.

ಇಂದಿನ ಸಾಹಿತ್ಯದಲ್ಲಿ ರಸ ಇಲ್ಲದ ಕಾರಣ ಜನರು ಸಾಹಿತ್ಯದಿಂದ ದೂರವಾಗಿದ್ದಾರೆ. ವಾಣಿಜ್ಯ ದೃಷ್ಟಿಯ ಸಿನಿಮಾಗಳಲ್ಲಿ ರಸ ಇದೆ. ಹಾಗಾಗಿ ಅಂತಹ ಸಿನಿಮಾಗಳನ್ನು ಜನತೆ ಮುಗಿಬಿದ್ದು ನೋಡುತ್ತಾರೆ. ಜನಪ್ರಿಯ ಸಾಹಿತ್ಯಗಳೆಲ್ಲವೂ ಕಳಪೆ ಎಂಬ ಮೊಂಡುವಾದ ಮಾಡುವ ಬುದ್ಧಿಜೀವಿಗಳೂ ಇದ್ದಾರೆ. ಸನಾತನ ಧರ್ಮದ ನಿಂದನೆಗಾಗಿಯೇ ಸಾಹಿತ್ಯ ಹೊರತರುವವರು ಇದ್ದಾರೆ. ಪ್ರಾಚೀನ ಗ್ರಂಥಗಳಾದ ರಾಮಾಯಣ, ಮಹಾಭಾರತಗಳು ರಸಾಸ್ವಾದದ ಕಲಾಸಾಹಿತ್ಯ ಹೊಂದಿವೆ. ಇವು ಕೂಡ ಕಲೆ– ಸಾಹಿತ್ಯಕ್ಕೆ ಮೂಲ ತಳಹದಿಯಾಗಿವೆ. ರಸ ಇರುವ ಸಾಹಿತ್ಯವನ್ನು ಭಾರತೀಯ, ಪಾಶ್ಚಾತ್ಯ ಎಂದು ಬೇರ್ಪಡಿಸಲು ಸಾಧ್ಯವಿಲ್ಲ. ಸಮಾಜದ ಮೇಲೆ ಸಾಹಿತ್ಯ ಪ್ರಭಾವ ಬೀರಿದ್ದು, ಇನ್ನೊಂದು ಸಾಹಿತ್ಯದ ರಸವಿಮರ್ಶೆಗೆ ಮೂಲ ಸಾಹಿತ್ಯ ಒಳಗಾದರೆ, ಅದರ ಮೂಲಸತ್ವ ಹೋಗಿದೆ ಎಂದು ಅರ್ಥೈಸಬೇಕಾಗುತ್ತದೆ ಎಂದರು.

ಕುವೆಂಪು ಭಾಷಾ ಪ್ರಾಧಿಕಾರ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್ ಪ್ರಥಮ ಗೋಷ್ಠಿ ನಡೆಸಿಕೊಟ್ಟರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಶತಾವಧಾನಿ ಆರ್.ಗಣೇಶ್ ಅವರನ್ನು ಗೌರವಿಸಲಾಯಿತು. ಭಾರತ್ ಫೌಂಡೇಷನ್ ಟ್ರಸ್ಟ್ ಹಾಗೂ ಲಿಟ್ ಫೆಸ್ಟ್ ಸಂಯೋಜಕ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಮಿಥಿಕ್ ಸೊಸೈಟಿ ಸದಸ್ಯ ಪ್ರಸನ್ನ ಇದ್ದರು. ನಂತರ ವಿವಿಧ ಗೋಷ್ಠಿಗಳಲ್ಲಿ ತಜ್ಞರು ಅಭಿಪ್ರಾಯ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.