ADVERTISEMENT

ಮಂಗಳೂರು: ಹಾಲು ಒಕ್ಕೂಟ; ತ್ರಿಕೋನ ಸ್ಪರ್ಧೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ;26ರಂದು ಮತದಾನ

ಪಿ.ವಿ.ಪ್ರವೀಣ್‌ ಕುಮಾರ್‌
Published 24 ಏಪ್ರಿಲ್ 2025, 5:39 IST
Last Updated 24 ಏಪ್ರಿಲ್ 2025, 5:39 IST
   

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಕುಲಶೇಖರದಲ್ಲಿರುವ ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ಇದೇ 26ರಂದು ಬೆಳಿಗ್ಗೆ 9ರಿಂದ ಸಂಜೆ 4ರ ಮತದಾನ ನಡೆಯಲಿದೆ. ಆಡಳಿತ ಮಂಡಳಿಯ 16 ನಿರ್ದೇಶಕರ ಸ್ಥಾನಗಳಿಗೆ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

‘ಒಕ್ಕೂಟವು ಕುಂದಾ‍ಪುರ, ಮಂಗಳೂರು ಹಾಗೂ ಪುತ್ತೂರು ಉಪವಿಭಾಗಗಳನ್ನು ಹೊಂದಿದೆ. ಉಪವಿಭಾಗದ ವ್ಯಾಪ್ತಿಯ ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘಕ್ಕೂ ಒಂದು ಮತವನ್ನು ನಿಗದಿಪಡಿಸಲಾಗಿದೆ. ಆಯಾ ಸಂಘದ ಅಧ್ಯಕ್ಷರು ಮತ ಚಲಾಯಿಸುವ ಮೂಲಕ ನಿರ್ದೇಶಕರ ಆಯ್ಕೆ ಮಾಡಲಿದ್ದಾರೆ. ಮೂರು ಉಪವಿಭಾಗಗಳಲ್ಲಿ ಒಟ್ಟು 710 ಮಂದಿ ಮತದಾನ ಮಾಡುವ ಅವಕಾಶ ಪಡೆದಿದ್ದಾರೆ’ ಎಂದು ಚುನಾವಣಾಧಿಕಾರಿ ರಾಜು ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾನ ನಡೆದ ದಿನವೇ ಮತಗಳ ಎಣಿಕೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಿದ್ದೇವೆ. ಅಂದು ನಿರ್ದೇಶಕರ ಆಯ್ಕೆ ಮಾತ್ರ ನಡೆಯಲಿದೆ. ಈ ಪ್ರಕ್ರಿಯೆ ಅಂತಿಮಗೊಂಡ ಬಳಿಕ 15 ದಿನಗಳ ಒಳಗೆ 16 ಮಂದಿ ನಿರ್ದೇಶಕರು ಸಭೆ ಸೇರಿ ಒಕ್ಕೂಟದ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಚುನಾಯಿತ ನಿರ್ದೇಶಕರು ಐದು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ’ ಎಂದರು.

ADVERTISEMENT

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ತಲಾ ಒಬ್ಬರು ಮಹಿಳಾ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಮೂವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಉಮೇದುವಾರರಿದ್ದಾರೆ. 

ಪ್ರತಿಯೊಬ್ಬ ಮತದಾರನಿಗೆ ಸಾಮಾನ್ಯ ವಿಭಾಗದ ನಿರ್ದೇಶಕರ ಆಯ್ಕೆಗೆ ಹಾಗೂ ಮಹಿಳಾ ನಿರ್ದೇಶಕರ ಆಯ್ಕೆಗೆ ಪ್ರತ್ಯೇಕ ಮತಪತ್ರವನ್ನು ನೀಡಲಾಗುತ್ತದೆ. ಸಾಮಾನ್ಯ ವಿಭಾಗದ ಮತಪತ್ರದಲ್ಲಿ ಆಯಾ ಉಪವಿಭಾಗದಲ್ಲಿ ಎಷ್ಟು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದೆಯೋ ಅಷ್ಟು ಸಂಖ್ಯೆಯ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರೆಯನ್ನು ಒತ್ತಿ ಮತ ಚಲಾಯಿಸಬೇಕು. ಅದಕ್ಕಿಂತ ಹೆಚ್ಚು ಸಂಖ್ಯೆಯ ಅಭ್ಯರ್ಥಿಗಳ ಹೆಸರಿನ ಮುಂದೆ ಮುದ್ರ ಒತ್ತಿದರೆ, ಆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಮಹಿಳಾ ನಿರ್ದೇಶಕರ ಆಯ್ಕೆಗೆ ಒಬ್ಬ ಮತದಾರರ ಒಬ್ಬ ಅಭ್ಯರ್ಥಿ ಹೆಸರಿನ ಮುಂದೆ ಮಾತ್ರ ಮುದ್ರೆ ಒತ್ತಬಹುದು ಎಂದು ರಾಜು ಅವರು ವಿವರಿಸಿದರು. 

ಕಣದಲ್ಲಿರುವವರು:  ಕುಂದಾಪುರ ಉಪವಿಭಾಗ: ಅಶೋಕ್‌ ಕುಮಾರ್ ಶೆಟ್ಟಿ (ಶಿರೂರು ಸಂಘ), ಅಶೋಕ್ ರಾವ್ (ಕಟಪಾಡಿ), ಉದಯ ಎಸ್.ಕೋಟ್ಯಾನ್ (ಇರ್ವತ್ತೂರು), ಉಲ್ಲಾಸ್ ಶೆಟ್ಟಿ (ಕಾವಡಿ), ಕಮಲಾಕ್ಷ ಹೆಬ್ಬಾರ್‌ (ಚೇರ್ಕಾಡಿ), ಕಾಪು ದಿವಾಕರ ಶೆಟ್ಟಿ (ಉಳಿಯಾರಗೋಳಿ), ದಿನಕರ ಶೆಟ್ಟಿ (ಹೆರ್ಗ), ದೇವಿಪ್ರಸಾದ್ ಶೆಟ್ಟಿ (ಬೆಳಪು), ಎಂ.ಪ್ರಕಾಶ್‌ ಶೆಟ್ಟಿ (ಕೋಟ), ಎಸ್‌.ಪ್ರಕಾಶ್ಚಂದ್ರ ಶೆಟ್ಟಿ (ಮೇಕೋಡು), ಟಿ.ವಿ.ಪ್ರಾಣೇಶ್  ಯಡಿಯಾಳ (ಎಡೆಮೊಗೆ), ಭೋಜ ಪೂಜಾರಿ (ಹೆಬ್ರಿ), ಕೆ.ಮೋಹನದಾಸ ಅಡ್ಯಂತಾಯ (ಕಾಂತಾವರ), ಎನ್‌.ಮಂಜಯ್ಯ ಶೆಟ್ಟಿ (ಹುಣ್ಸೆಮಕ್ಕಿ), ರವಿರಾಜ್ ಎನ್‌.ಶೆಟ್ಟಿ (ಅಸೋಡು), ರವಿರಾಜ ಹೆಗ್ಡೆ (ಕೊಡವೂರು), ಕೆ.ಶಿವಮೂರ್ತಿ (ಕೋಟತಟ್ಟು), ಕೆ.ಸರ್ವೋತ್ತಮ ಶೆಟ್ಟಿ (ಯಡ್ತಾಡಿ), ಸುಧಾಕರ ಶೆಟ್ಟಿ (ಮುಡಾರು), ಸುಬ್ಬಣ್ಣ ಶೆಟ್ಟಿ (ಕಿರಿಮಂಜೇಶ್ವರ), ಸುರೇಶ ಶೆಟ್ಟಿ (ಕಾಡೂರು). 

ಪುತ್ತೂರು ಉಪವಿಭಾಗ: 
ಕೆ.ಚಂದ್ರಶೇಖರ ರಾವ್‌ (ಮಾಡ್ನೂರು), 
ಜಗನ್ನಾಥ ಶೆಟ್ಟಿ (ಕೋಡಿಂಬಾಡಿ), ಎಸ್‌.ಬಿ.ಜಯರಾಮ ರೈ (ಕೆಯ್ಯೂರು), ಎಚ್‌.ಪ್ರಭಾಕರ (ಆರಂಬೋಡಿ), ಭರತ್ ಎನ್‌. (ಯೇನೆಕಲ್ಲು), ಪಿ.ರಮೇಶ್ ಪೂಜಾರಿ (ಗುಂಡೂರಿ), ರಾಮಕೃಷ್ಣ ಡಿ (ಕೆಂಜಾಳ), 

ಮಂಗಳೂರು ಉಪವಿಭಾಗ:  ನಂದರಾಮ್‌ ರೈ (ಗುಡ್ಡೆಯಂಗಡಿ), ಸುಚರಿತ ಶೆಟ್ಟಿ (ಕಡಂದಲೆ), ಸುದರ್ಶನ ಜೈನ್‌ (ಆಚಾರಿಪಲ್ಕೆ), ಬಿ.ಸುಧಾಕರ ರೈ (ಬೋಳಂತೂರು), ಸುದೀಪ್ ಆರ್‌.ಅಮೀನ್ (ಎಕ್ಕಾರು), ಸುಭದ್ರಾ ಎನ್‌.ರಾವ್‌ (ಪೆರ್ಮಂಕಿ),

ಮಹಿಳಾ ನಿರ್ದೇಶಕರ ಸ್ಥಾನದ ಅಭ್ಯರ್ಥಿಗಳು: ದಕ್ಷಿಣ ಕನ್ನಡ ಜಿಲ್ಲೆ: ಅನುರಾ ವಾಯೋಲಾ ಡಿಸೋಜ (ನೀರುಮಾರ್ಗ), ಉಷಾ ಅಂಚನ್‌ (ಕೊಣಾಲು–ಆರ್ಲ), ಶರ್ಮಿಳಾ ಕೆ. (ಬಾಳುಗೋಡು), ಸವಿತಾ ಎನ್‌.ಶೆಟ್ಟಿ (ಬಡಗಬೆಳ್ಳೂರು). ಉಡುಪಿ ಜಿಲ್ಲೆ: ಮಮತಾ ಆರ್‌.ಶೆಟ್ಟಿ (ಕ್ರೋಢಬೈಲೂರು), ಶಾಂತಾ ಎಸ್‌.ಭಟ್‌ (ಪಾಂಡೇಶ್ವರ), ಸ್ಮಿತಾ ಆರ್‌.ಶೆಟ್ಟಿ (ಸೂಡಾ).

ಬಂಡಾಯದ ಬಿಸಿ

ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರೇ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡವರು ಸಹಕಾರ ಭಾರತಿ ಮೂಲಕ ಕಣಕ್ಕಿಳಿಯುತ್ತಿದ್ದರು. ಈ ಹಿಂದೆ ಸಹಕಾರ ಭಾರತಿ ಜೊತೆ ಗುರುತಿಸಿದ್ದ ಕೆಲ ಪ್ರಮುಖರಿಗೆ ಆ ಸಂಸ್ಥೆ ಅವಕಾಶ ನಿರಾಕರಿಸಿದೆ. ಅಂತಹ ಸಹಕಾರಿ ಧುರೀಣರು ಬಂಡಾಯವಾಗಿ ಕಣಕ್ಕಿಳಿದಿರುವುದರಿಂದ  ಈ ಸಲ ತ್ರಿಕೋನ  ಸ್ಪರ್ಧೆ ನಡೆಯುವ ಸಾಧ್ಯತೆ ಇದೆ ಎಂದು ಸಹಕಾರ ರಂಗದ ಮುಖಂಡರೊಬ್ಬರು ತಿಳಿಸಿದರು.

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ.ಸುಚರಿತ ಶೆಟ್ಟಿ ಕಳೆದ ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿದ್ದರು. ಸಹಕಾರ ಭಾರತಿ ಈ ಸಲ ಸುಚರಿತ ಶೆಟ್ಟಿ ಬದಲು ಬೇರೆಯವರನ್ನು ಕಣಕ್ಕಿಳಿಸಿದೆ. ಈ ನಿರ್ಧಾರಕ್ಕೆ ಸಡ್ಡು ಹೊಡೆದಿರುವ ಸುಚರಿತ ಶೆಟ್ಟಿ ಅವರು ತಾವು ಸ್ವತಃ ಸ್ಪರ್ಧಿಸಿರುವುದಲ್ಲದೇ ಬೆಂಬಲಿಗರನ್ನು ಕಣಕ್ಕಿಳಿಸಿದ್ದಾರೆ. ಒಕ್ಕೂಟದ ಮಾಜಿ ಅಧ್ಯಕ್ಷ ಉಡುಪಿ ಜಿಲ್ಲೆಯ ರವಿರಾಜ ಹೆಗ್ಡೆ ಬದಲು ಬೇರೆ ಅಭ್ಯರ್ಥಿಯನ್ನು ಸಹಕಾರ ಭಾರತಿ ಕಣಕ್ಕಿಳಿಸಿದೆ. ರವಿರಾಜ ಹೆಗ್ಡೆಯವರೂ ಸ್ವತಃ ಕಣಕ್ಕಿಳಿದು, ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದ್ದಾರೆ. 

ಬಿಜೆಪಿಯ ಕೆಲ ಶಾಸಕರು ಸಹಕಾರ ಭಾರತಿ ಜೊತೆ ಗುರುತಿಸಿಕೊಂಡ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುತ್ತಿದ್ದಾರೆ.  ಬಂಡಾಯವಾಗಿ ಸ್ಪರ್ಧಿಸಿರುವ ಕೆಲವರನ್ನು ಎಸ್‌.ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಬೆಂಬಲಿಸಿದ್ದಾರೆ. ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ಸಹಕಾರಿ ಮುಖಂಡರು ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಹಾಗಾಗಿ ಈ ಸಲ ಚುನಾವಣೆ ರಂಗೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.