ಮಂಗಳೂರು: ಈ ಬಾರಿ ಮುಂಗಾರು ಪೂರ್ವ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಪ್ರಕೃತಿ ವಿಕೋಪದಿಂದ ಹಾನಿಯಾದ ಆಸ್ತಿಪಾಸ್ತಿಗಳಿಗೆ ನೀಡುವ ಪರಿಹಾರದ ಮಾನದಂಡದ ಆದೇಶದಲ್ಲಿ ಬದಲಾವಣೆ ಮಾಡಲು ಸೂಚಿಸಲಾಗಿದೆ.
ಜೂನ್ 1ರಿಂದ ಅನ್ವಯವಾಗಲಿದ್ದ ಈ ಆದೇಶವನ್ನು ಈಗಾಗಲೇ ಸಂಭವಿಸಿರುವ ಪಾಕೃತಿಕ ಅವಘಡಗಳಿಗೂ ಅನ್ವಯಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಅನಿರೀಕ್ಷಿತವಾಗಿ ಮೇ ತಿಂಗಳ ಕೊನೆಯಲ್ಲೇ ಧಾರಾಕಾರ ಮಳೆಯಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಉಳ್ಳಾಲದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ ಏಳು ವರ್ಷದ ಬಾಲಕಿ, ಬೆಳ್ತಂಗಡಿಯಲ್ಲಿ ಒಬ್ಬರು ಲೈನ್‌ಮನ್ ಮೃತಪಟ್ಟಿದ್ದಾರೆ. ನಗರದಲ್ಲೂ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸೂಕ್ತ ಪರಿಹಾರ ಸೂಚಿಸಲಾಗಿದೆ’ ಎಂದರು.
‘ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಹಾನಿಗೆ ಪರಿಹಾರ ನೀಡುವ ಸಂಬಂಧ ಇಲಾಖೆ ಹೊರಡಿಸಿದ ಆದೇಶದಲ್ಲಿ ಜೂನ್ 1ರಿಂದ ಇದನ್ನು ಅನ್ವಯಗೊಳಿಸುವಂತೆ ತಿಳಿಸಲಾಗಿತ್ತು. ಆದರೆ, ಈ ಬಾರಿ ಬೇಗ ಮಳೆ ಶುರುವಾಗಿದ್ದರಿಂದ ಈ ಆದೇಶದಲ್ಲಿ ಮಾರ್ಪಾಡು ಮಾಡಬೇಕಾಗಿದೆ. ಆಯುಕ್ತರಿಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ, ಆದೇಶದಲ್ಲಿ ಅಗತ್ಯ ಮಾರ್ಪಾಡು ಮಾಡುವಂತೆ ತಿಳಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲೂ ಒಂದು ಅಗ್ನಿಶಾಮಕ ವಾಹನ ಇದ್ದು, ಹೆಚ್ಚುವರಿಯಾಗಿ ಇನ್ನೊಂದು ವಾಹನ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸಹಾಯವಾಣಿ ದಿನದ 24 ಗಂಟೆ ಕಾರ್ಯ ನಿರ್ವಹಿಸಬೇಕು. ಯಾವುದೇ ಅವಘಡ ಸಂಭವಿಸಿದಲ್ಲಿ, ಎನ್‌ಡಿಆರ್‌ಎಫ್ ತಂಡ, ಅಧಿಕಾರಿಗಳು ವಿಳಂಬ ಇಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ನಡೆಸಬೇಕು. ಮನೆ ದುರಸ್ತಿ, ಅಭಿವೃದ್ಧಿ ಕೈಗೊಳ್ಳುವಾಗ, ಗುಡ್ಡ–ಬೆಟ್ಟದ ಸಮೀಪ ಇರುವವರು ಎಚ್ಚರಿಕೆ ವಹಿಸಬೇಕು. ಪ್ರಕೃತಿಯನ್ನು ನಿರ್ಲಕ್ಷಿಸಿ ನಾವು ಅಭಿವೃದ್ಧಿ ಮಾಡಲು ಸಾಧ್ಯವಾಗದು ಎಂದು ಹೇಳಿದರು.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುಡ್ಡ ಕುಸಿದಿದೆ ಎಂದು ಆರೋಪಿಸಿ, ಉಳ್ಳಾಲದ ಸಂತ್ರಸ್ತ ಕುಟುಂಬದವರು ರಸ್ತೆ ನಿರ್ಮಿಸಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಸ್ಥಳೀಯ ಪಿಡಿಒ ವಿರುದ್ಧ ದೂರು ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಪರಿಶೀಲಿಸಲಾಗುವುದು. ತಜ್ಞರ ಸಮಿತಿ ರಚಿಸಿ, ವರದಿ ಪಡೆದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.