ADVERTISEMENT

ಮಂಗಳೂರು | ದ್ವೇಷ ಭಾಷಣಗಾರರಿಗೆ ಸಂಘಟನೆ, ರಾಜಕೀಯದ ರಕ್ಷಣೆ‌: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 31 ಮೇ 2025, 7:11 IST
Last Updated 31 ಮೇ 2025, 7:11 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಮಂಗಳೂರು: ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ, ಪ್ರಚೋದನೆ ನೀಡುವ, ದ್ವೇಷ ಭಾಷಣ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ಅಗತ್ಯವಿದೆ. ಪ್ರತ್ಯೇಕ ಕಾನೂನು ರಚನೆ ಸಂಬಂಧ ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದ್ವೇಷ ಭಾಷಣ ಮಾಡುವವರ ಮೇಲೆ ಪ್ರಕರಣ ದಾಖಲಿಸಿದರೂ, ಅವರಿಗೆ ಸುಲಭವಾಗಿ ನ್ಯಾಯಾಲಯದಲ್ಲಿ ಬೇಲ್ ಸಿಗುತ್ತದೆ. ಅವರಿಗೆ ಸಂಘಟನೆಯ ಬೆಂಬಲ ಇದೆ. ಅವರಿಗೆ ವಕೀಲರನ್ನು ನೇಮಿಸಿಕೊಡಲಾಗುತ್ತದೆ, ನ್ಯಾಯಾಧೀಶರ ಬಳಿ ಮಾತನಾಡಿಸುತ್ತಾರೆ. ಹೀಗೆ ಏನೇನು ಬೇಕೋ ಎಲ್ಲ ಸೌಲಭ್ಯ ಒದಗಿಸುವ ವ್ಯವಸ್ಥೆ ಇದೆ. ಈ ರೀತಿ ಮಾತನಾಡುವವರಿಗೆ ರಾಜಕೀಯ ರಕ್ಷಣೆ ಸಿಗುತ್ತಿದೆ. ದ್ವೇಷ ಭಾಷಣ ಮಾಡುವವರಲ್ಲಿ ದೊಡ್ಡ ನಾಯಕರೇ ಇದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂತಹುದೇ ಮಾತನ್ನಾಡಿದ್ದಾರೆ. ಕಾನೂನು ಬದಲಾವಣೆಯಿಂದ ಮಾತ್ರ ಇವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ’ ಎಂದರು.

ADVERTISEMENT

ಕೋಮು ಗಲಭೆ, ಕೋಮು ವೈಷಮ್ಯ ಸೃಷ್ಟಿಸುವವರಲ್ಲಿ ಹೆಚ್ಚಿನವರು ಅಕ್ರಮ ಚಟುವಟಿಕೆಗಳ ಭಾಗಿದಾರರು ಮರಳು ಮಾಫಿಯಾ, ಜೂಜು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು. ಕಾನೂನುಬಾಹಿರ ಚಟುವಟಿಕೆಗಳೇ ಅವರಿಗೆ ಆದಾಯದ ಮೂಲವಾಗಿವೆ. ಇವುಗಳನ್ನೆಲ್ಲ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ನಗರ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಸ್ಲಿಂ ಸಮುದಾಯದವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅದು ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ಯಾರು ರಾಜೀನಾಮೆ ಕೊಡುತ್ತಾರೆ, ಯಾರು ರಾಜೀನಾಮೆ ಕೊಡುವುದಿಲ್ಲ, ಇದು ನೇರವಾಗಿ ನನ್ನ ಅಡಿಯಲ್ಲಿ ಬರುವ ವಿಚಾರವಲ್ಲ’ ಎಂದರು.

ಅಬ್ದುಲ್ ರಹಿಮಾನ್ ಕೊಲೆ ನಡೆದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಕೆಲವರು ಕಾಂಗ್ರೆಸ್ ಮುಖಂಡರು ಆಗ್ರಹ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜೀನಾಮೆ ಕೇಳಿದ್ದು ಅವರು ಅಭಿಪ್ರಾಯ, ಯಾವಾಗ ಎಲ್ಲಿ ಬರಬೇಕು ಎಂಬುದನ್ನು ಪರಿಸ್ಥಿತಿ ನೋಡಿ ನಾವು ತೀರ್ಮಾನಿಸುತ್ತೇವೆ. ಅಶ್ರಫ್ ಮೃತಪಟ್ಟಾಗ ಕೆಲವರಿಗೆ ಆಕ್ರೋಶ ಆಗುತ್ತದೆ, ಸುಹಾಸ್ ಶೆಟ್ಟಿ ಮೃತಪಟ್ಟಾಗ ಇನ್ನು ಕೆಲವರಿಗೆ ಆಕ್ರೋಶ ಆಗುತ್ತದೆ, ಈ ಆಕ್ರೋಶ ಅವರವರ ಸಮುದಾಯದವರು ಮೃತಪಟ್ಟಾಗ ಮಾತ್ರ ಆಗುತ್ತದೆ. ನಮಗೆ ಯಾರೇ ಮೃತಪಟ್ಟರೂ ಆಕ್ರೋಶವಾಗುತ್ತದೆ. ನಮಗೆ ಎಲ್ಲ ಪಕ್ಷ, ಸಂಘಟನೆ ಎಲ್ಲರೂ ಒಂದೇ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಸ್ಥಾಪನೆ ಆಗಬೇಕು, ಗಲಭೆ, ಹತ್ಯೆಗಳು ನಿಲ್ಲಬೇಕು. ಈ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಯೇ ಮುಖ್ಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ನಾವು ಬದ್ಧ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.