
ಮಂಗಳೂರು: ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ನಿರ್ದಿಷ್ಟ ಪಾರ್ಕಿಂಗ್ ವಲಯ ಇಲ್ಲದ ಕಾರಣ ಜನರು ರಸ್ತೆ ಬದಿಯಲ್ಲೇ ವಾಹನ ನಿಲುಗಡೆ ಮಾಡಿ ತಮ್ಮ ಕೆಲಸಕ್ಕೆ ತೆರಳುವುದು ಮಾಮೂಲಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಬಿಗಡಾಯಿಸಿದ್ದು, ಕಾರುಗಳಲ್ಲಿ ಬರುವವರು ಒಳರಸ್ತೆಗಳನ್ನು ವಾಹನ ಪಾರ್ಕಿಂಗ್ ಸ್ಥಳಗಳನ್ನಾಗಿ ಮಾಡಿಕೊಂಡಿದ್ದಾರೆ. ಕೆಫೆಗಳು, ಹೋಟೆಲ್‌ಗಳಿಗೆ ತೆರಳುವವರು, ಮಾರುಕಟ್ಟೆಗೆ ಖರೀದಿಗೆ ಹೋಗುವವರು ಒಳರಸ್ತೆಗಳನ್ನು ಅನಧಿಕೃತ ಪಾರ್ಕಿಂಗ್ ತಾಣಗಳಾಗಿ ಮಾಡಿಕೊಂಡು, ಬೇಕಾಬಿಟ್ಟಿ ವಾಹನ ನಿಲ್ಲಿಸಿ ಹೋಗುವ ಪರಿಣಾಮ, ಸ್ಥಳೀಯ ನಿವಾಸಿಗಳು ತಮ್ಮ ವಾಹನಗಳನ್ನು ರಸ್ತೆಗಿಳಿಸಲು ಹೆಣಗಾಡುವುದು ಬಹುತೇಕ ಒಳರಸ್ತೆಗಳಲ್ಲಿ ನಿತ್ಯ ಕಾಣುವ ದೃಶ್ಯ.
ಬಲ್ಮಠ, ಆರ್ಯ ಸಮಾಜ ರಸ್ತೆ, ಬ್ರಿಡ್ಜ್ ರೋಡ್, ಬಿಜೈ ರಸ್ತೆ, ಕದ್ರಿ ಕಂಬಳ, ಕೋರ್ಟ್ ರಸ್ತೆ, ಜೈಲ್ ರೋಡ್, ಫಳ್ನೀರ್, ಪಾಂಡೇಶ್ವರ ಮೊದಲಾದ ಕಡೆಗಳಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿದೆ.
ರಸ್ತೆ ಬದಿ ಕಾರು ನಿಲ್ಲಿಸಿ ಹೋಗುವವರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸರು ಆಗಾಗ ಟೋಯಿಂಗ್ ಮಾಡುತ್ತಿದ್ದರೂ, ಅದು ದಂಡ ಪಾವತಿಗೆ ಸೀಮಿತವಾಗಿದೆ. ಕೆಲವೇ ಹೊತ್ತಿನಲ್ಲಿ ಮತ್ತೆ ಅದೇ ಜಾಗದಲ್ಲಿ ಅಡ್ಡಾದಿಡ್ಡಿ ವಾಹನಗಳು ನಿಂತಿರುತ್ತವೆ.
ಬೇಕಾಬಿಟ್ಟಿ ವಾಹನ ನಿಲುಗಡೆ ನಿಯಂತ್ರಣಕ್ಕೆ ತರಲು ಮಹಾನಗರ ಪಾಲಿಕೆ ‘ಪೇ ಪಾರ್ಕಿಂಗ್’ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಸಂಬಂಧ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದು, ಈಗಾಗಲೇ ಮೂರು ಕಡೆಗಳಲ್ಲಿ ಪೇ ಪಾರ್ಕಿಂಗ್ ಅನುಷ್ಠಾನದಲ್ಲಿದೆ.
ಮಂಗಳೂರಿಗರಿಗೆ ಪೇ ಪಾರ್ಕಿಂಗ್ ವ್ಯವಸ್ಥೆ ಹೊಸತೇನಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆ ಕೆಲವು ಸಮಯ ಈ ವ್ಯವಸ್ಥೆ ಜಾರಿಯಲ್ಲಿತ್ತು. ನವೀಕರಣವಾಗದ ಗುತ್ತಿಗೆ ಮತ್ತಿತರ ಕಾರಣಗಳಿಂದ ಬಂದ್ ಆಗಿತ್ತು. 2024ರ ಮೇ ತಿಂಗಳಲ್ಲಿ ಪೇ ಪಾರ್ಕಿಂಗ್ ಜಾಗಗಳನ್ನು ಗುರುತಿಸಿ, ಟೆಂಡರ್ ಕರೆಯಲಾಗಿತ್ತು. ಆಗ ಯಾರೂ ಬಿಡ್‌ದಾರರು ಮುಂದೆ ಬಂದಿರಲಿಲ್ಲ. ಈಗ ಪುನಃ 10 ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ. ಲಾಲ್‌ಬಾಗ್ ಪಬ್ಬಾಸ್ ಎದುರು, ಬಾವುಟಗುಡ್ಡೆ ಟ್ಯಾಗೋರ್ ಪಾರ್ಕ್ ಎದುರು, ಹಂಪನಕಟ್ಟೆ ಪಿರೇರಾ ಹೋಟೆಲ್ ಎದುರು ಈ ಮೂರು ಕಡೆಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಇದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಸ್ತಾವಿತ ಪೇ ಪಾರ್ಕಿಂಗ್ ಸ್ಥಳಗಳಿಗೆ ಪ್ರತ್ಯೇಕ ದರ ನಿಗದಿಪಡಿಲಾಗಿದೆ. ಇದರಿಂದ ವಾರ್ಷಿಕವಾಗಿ ಪಾಲಿಕೆಗೆ ₹1.25 ಕೋಟಿಯಷ್ಟು ಆದಾಯ ಬರುವ ನಿರೀಕ್ಷೆಯಿದೆ. ದ್ವಿಚಕ್ರ ವಾಹನಕ್ಕೆ ಒಂದು ತಾಸಿಗೆ ₹7, ನಾಲ್ಕು ಚಕ್ರದ ವಾಹನಕ್ಕೆ ತಾಸಿಗೆ ₹15 ಶುಲ್ಕ ವಿಧಿಸಲು ಚರ್ಚೆ ನಡೆದಿದ್ದು, ಅಂತಿಮ ನಿರ್ಣಯ ಆಗಬೇಕಾಗಿದೆ. ಒಂದು ತಾಸಿನ ನಂತರ ಪ್ರತಿ ಒಂದು ಗಂಟೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಆಮೆಗತಿಯಲ್ಲಿ ಕಾಮಗಾರಿ: ಸ್ಮಾರ್ಟ್‌ಸಿಟಿ ವತಿಯಿಂದ ನಗರದ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣವಾಗಿದ್ದ ಜಾಗದಲ್ಲಿ ₹79.05 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಾರು ಪಾರ್ಕಿಂಗ್ ಪ್ಲಾಝಾ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 400 ದ್ವಿಚಕ್ರ ವಾಹನ, 400 ಕಾರುಗಳ ನಿಲುಗಡೆ ಸಾಮರ್ಥ್ಯದ ಯೋಜನೆ ಇದಾಗಿದೆ. ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ನಿಗದಿಯಂತೆ 2024ರಲ್ಲಿ ನಿರ್ಮಾಣ ಪೂರ್ಣಗೊಂಡು, ಬಳಕೆಗೆ ಲಭ್ಯವಾಗಬೇಕಾಗಿತ್ತು. ಆದರೆ, ಇನ್ನೂ ಪಿಲ್ಲರ್‌ಗಳೇ ಪೂರ್ಣಗೊಂಡಿಲ್ಲದ ಸ್ಥಿತಿ ಇದೆ. ಒಂದೆರಡು ಜೆಸಿಬಿ ಯಂತ್ರಗಳು, ಆರೆಂಟು ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದ ದೃಶ್ಯ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಂಡುಬಂತು.
ಐದು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭವಾಗಿದ್ದರೂ, ಇನ್ನೂ ಕಟ್ಟಡ ತಳಪಾಯದ ಹಂತದಿಂದ ಮೇಲೆದ್ದಿಲ್ಲ ಎಂಬುದು ಸ್ಥಳೀಯರ ದೂರು.
‘ಹಿಂದೆ ಇಲ್ಲಿ ಪಾರ್ಕಿಂಗ್ ಇದ್ದಾಗ, ವ್ಯಾಪಾರ ಉತ್ತಮವಾಗಿತ್ತು. ಕಾಮಗಾರಿ ಬೇಗ ಮುಗಿಯುವಂತೆಯೂ ಕಾಣುತ್ತಿಲ್ಲ. ನಮಗೆ ವ್ಯಾಪಾರವೂ ನಷ್ಟ. ಒಂದೆರಡು ಹೋಟೆಲ್‌ನವರು ವ್ಯಾಪಾರವಿಲ್ಲದೆ ಬಾಗಿಲು ಮುಚ್ಚಿದರು’ ಎಂದು ಉದ್ದೇಶಿತ ಬಹುಮಹಡಿ ಕಾರು ಪಾರ್ಕಿಂಗ್ ಪ್ಲಾಝಾ ಪಕ್ಕದ ವಾಣಿಜ್ಯ ಸಂಕೀರ್ಣದ ಪಾನ್‌ಬೀಡಾ ವ್ಯಾಪಾರಿ ದಶವಂತ್ ಬೇಸರಿಸಿದರು.
‘ಪಿಪಿಪಿ ಯೋಜನೆ ಇದಾಗಿದ್ದು, ಕಾರ್‌ಸ್ಟ್ರಕ್ಚರ್ ಕಂಪನಿ ಗುತ್ತಿಗೆ ನಿರ್ವಹಿಸುತ್ತಿದೆ. ನಿಗದಿಯಂತೆ 2024ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಗುತ್ತಿಗೆ ಕಂಪನಿ ಮಾಲೀಕರು ನಿಧನರಾದ ಕಾರಣ ಕಾಮಗಾರಿ ವಿಳಂಬವಾಗಿದೆ. 2026ರ ಸೆಪ್ಟೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗುಡುವು ನೀಡಲಾಗಿದೆ. ಬಹುಮಹಡಿ ಕಾರು ಪಾರ್ಕಿಂಗ್ ಜೊತೆಗೆ ಸುತ್ತಲೂ ವಾಣಿಜ್ಯ ಮಳಿಗೆಗಳು ತಲೆಎತ್ತಲಿವೆ. ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಆದ ಮೇಲೆ ಗುತ್ತಿಗೆ ಕಂಪನಿ ವಾರ್ಷಿಕವಾಗಿ ₹3.33 ಕೋಟಿ ಶುಲ್ಕವನ್ನು ಪಾಲಿಕೆಗೆ ಪಾವತಿಸುವ ಸಂಬಂಧ ಈಗಾಗಲೇ ಒಪ್ಪಂದವಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬರು ತಿಳಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ನಗರದ ಒಟ್ಟು 15 ಕಡೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ರೂಪಿಸುವ ಸಂಬಂಧ ಈ ಹಿಂದೆ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪಾರ್ಕಿಂಗ್ ನೀತಿಯನ್ನೂ ತಯಾರಿಸಿ ಪಾಲಿಕೆಗೆ ನೀಡಲಾಗಿದೆ. ಇದರಿಂದ ಪಾಲಿಕೆ ಆದಾಯವೂ ವೃದ್ಧಿಸುತ್ತದೆ ಎಂದು ಅವರು ವಿವರಿಸಿದರು.
ಪಾರ್ಕಿಂಗ್ ತಾಣಗಳಾಗಿ ಮಾರ್ಪಟ್ಟಿರುವ ಒಳರಸ್ತೆಗಳು | ಸ್ಥಳೀಯ ನಿವಾಸಿಗಳಿಗೆ ನಿತ್ಯ ಕಿರಿಕಿರಿ | ಸ್ಮಾರ್ಟ್ ಪಾರ್ಕಿಂಗ್ ಪ್ರಸ್ತಾವ ಸಲ್ಲಿಸಿರುವ ಸ್ಮಾರ್ಟ್ ಸಿಟಿ
ಮಂಗಳೂರಿನ ಎಲ್ಲ ರಸ್ತೆಗಳಲ್ಲಿ ಪೇ ಪಾರ್ಕಿಂಗ್ ಮಾಡಲು ಸಾಧ್ಯವಿಲ್ಲ. ಸಣ್ಣ ರಸ್ತೆಗಳೇ ಹೆಚ್ಚಿವೆ. ಟ್ರಾಫಿಕ್ ಪೊಲೀಸ್ ಜೊತೆ ಚರ್ಚಿಸಿ ಯೋಜನೆಗೆ ಅಂತಿಮ ರೂಪ ನೀಡಲಾಗುವುದು.ರವಿಚಂದ್ರ ನಾಯಕ್ ಮಹಾನಗರ ಪಾಲಿಕೆ ಆಯುಕ್ತ
ಬಹುಮಹಡಿ ಕಾರು ಪಾರ್ಕಿಂಗ್ ಕಾಮಗಾರಿಗೆ ವೇಗ ನೀಡುವ ಸಂಬಂಧ ಮುಂದಿನ ವಾರ್ ಬೋರ್ಡ್ ಮೀಟಿಂಗ್ ನಡೆಸಿ ಚರ್ಚಿಸಲಾಗುವುದು. ಇದಕ್ಕೆ ಗುತ್ತಿಗೆದಾರರನ್ನೂ ಕರೆಯುತ್ತೇವೆ.ಜಿ. ಸಂತೋಷ್‌ಕುಮಾರ್ ಸ್ಮಾರ್ಟ್ ಸಿಟಿ ಎಂಡಿ
ಟೋಲ್ ಅಲ್ಲ; ಪೇ ಪಾರ್ಕಿಂಗ್
ಸ್ಮಾರ್ಟ್ ಸಿಟಿ ವತಿಯಿಂದ ಕದ್ರಿ ಪಾರ್ಕ್ ಹೊರ ಆವರಣದಲ್ಲಿ ರಸ್ತೆ ನಿರ್ಮಿಸುವಾಗ 100 ವಾಹನಗಳ ನಿಲುಗಡೆಗೆ ಸ್ಥಳ ನಿಗದಿಗೊಳಿಸಲಾಗಿತ್ತು. ಮೂಲ ಯೋಜನೆಯಲ್ಲಿ ಇದು ಒಳಗೊಂಡಿರುವ ಕಾರಣ ಇದಕ್ಕೆ ಟೆಂಡರ್ ಮಾಡಬೇಕಾಗಿದೆ. ಇದು ಟೋಲ್ ಸಂಗ್ರಹ ವ್ಯವಸ್ಥೆ ಅಲ್ಲ. ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ವಾಹನ ನಿಲುಗಡೆಯಾಗಿರುವ ಅವಧಿ ಪರಿಶೀಲಿಸಿ ಶುಲ್ಕ ವಿಧಿಸಲಾಗುತ್ತದೆ. ಶುಲ್ಕದ ದರವನ್ನು ಪಾಲಿಕೆ ನಿಗದಿಪಡಿಸಬೇಕಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.