ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡದ ಎರಡು ಹತ್ಯೆಗಳನ್ನು ಆಧರಿಸಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು ಮಾಹಿತಿ, ತಪ್ಪು ಮಾಹಿತಿ ಮತ್ತು ಬೆದರಿಕೆ ಸಂದೇಶಗಳನ್ನು ಹಂಚಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಕಮಿಷನರೇಟ್‌ನ ಪೊಲೀಸರು, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುವ ಯಾವುದೇ ಪೋಸ್ಟ್ ಮಾಡುವ ಮೊದಲು ಯೋಚಿಸಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
‘ಕೆಲವರು ಸಾಮಾಜಿಕ ಮಾಧ್ಯಮಗಳ ವೇದಿಕೆಗಳನ್ನು ದುರುಪಯೋಗಪಡಿಸಿ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡಲು, ಸುಳ್ಳು ಸುದ್ದಿ ಹರಡಲು, ಮತ್ತು ಇತರರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಗಂಭೀರ ಕಾನೂನು ಉಲ್ಲಂಘನೆ. ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ’ ಎಂದು ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್ ತಿಳಿಸಿದ್ದಾರೆ.
‘ಕೋಮು ದ್ವೇಷ ಹರಡುವ ಮತ್ತು ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಕುರಿತು ವಾರದಿಂದ ಈಚೆಗೆ 30ಕ್ಕೂ ಹೆಚ್ಚು ಪ್ರಕರಣಗಳು ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿವೆ. ಈ ಪ್ರಕರಣಗಳನ್ನು ಸೆನ್ ಕ್ರೈಂ ಠಾಣೆಯ ಎಸಿಪಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
‘ಕೆಲವರು ನಕಲಿ ಪ್ರೊಫೈಲ್‌ಗಳು ಅಥವಾ ವಿದೇಶದಲ್ಲಿ ನೋಂದಾವಣೆಯಾಗಿರುವ ಖಾತೆಗಳನ್ನು ಇಂತಹ ಉದ್ದೇಶಕ್ಕೆ ಬಳಸಿದರೆ ಸಿಕ್ಕಿಬೀಳುವುದಿಲ್ಲ ಎಂದು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ಇಂತಹ ಖಾತೆ ಎಲ್ಲೇ ಕಾರ್ಯ ನಿರ್ವಹಿಸುತ್ತಿದ್ದರೂ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಕಂಪನಿಗಳು, ರಾಷ್ಟ್ರೀಯ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಚಾನಲ್‌ಗಳ ಸಹಕಾರ ಪಡೆದು ಅಪರಾಧಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭವಿಷ್ಯ ಜೋಪಾನ: ಅನೇಕ ಯುವಕರು ಅಜ್ಞಾತವಾಗಿದ್ದುಕೊಂಡು ಸೈಬರ್ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಅವರ ಭವಿಷ್ಯ, ಉದ್ಯೋಗ ಅವಕಾಶಗಳು ಮತ್ತು ಪ್ರವಾಸದ ಅವಕಾಶಗಳು ಹಾಳಾಗುತ್ತಿವೆ. ಇದಕ್ಕೆ ಬಲಿಯಾಗಬಾರದು. ಸಾರ್ವಜನಿಕರು ಶಾಂತಿಯ ರಕ್ಷಕರಾಗಿರಬೇಕೇ ಹೊರತು ಅಶಾಂತಿ ಸೃಷ್ಟಿಸುವ ಏಜೆಂಟ್‌ಗಳಾಗಬಾರದು. ಆನ್‌ಲೈನ್‌ನಲ್ಲಿ ನಿಮ್ಮ ಕ್ರಿಯೆಗಳು ಶಾಶ್ವತವಾಗಿರುತ್ತವೆ. ಅವುಗಳನ್ನು ಜಾಣ್ಮೆ ಹಾಗೂ ಜವಾಬ್ದಾರಿಯಿಂದ ಬಳಸಿ ಎಂದು ಸಲಹೆ ನೀಡಿದ್ದಾರೆ.
ಯಾವುದೇ ಅನುಮಾನಾಸ್ಪದ ವಿಷಯವನ್ನು ತಕ್ಷಣ ಗಮನಕ್ಕೆ ತನ್ನಿ. ಮಾಹಿತಿ ನೀಡುವವರ ಗುರುತು ಗೌಪ್ಯವಾಗಿಡಲಾಗುತ್ತದೆ. ಮಂಗಳೂರನ್ನು ಶಾಂತ, ಕಾನೂನುಬದ್ಧ ಮತ್ತು ಐಕ್ಯತೆಯ ನಗರವನ್ನಾಗಿ ಉಳಿಸೋಣ ಎಂದು ಅವರು ತಿಳಿಸಿದ್ದಾರೆ.
ದ್ವೇಷ ಹರಡುವಿಕೆ ಅಪರಾಧಕ್ಕೆ ಯಾವ ಶಿಕ್ಷೆ?
* ಎರಡು ಗುಂಪುಗಳ ನಡುವೆ ದ್ವೇಷವನ್ನು ಉಂಡುಮಾಡುವುದು (ಬಿಎನ್‌ಎಸ್ ಸೆಕ್ಷನ್ 196) ಉದಾ: ನಿರ್ದಿಷ್ಟ ಧರ್ಮ ಅಥವಾ ಸಮುದಯದ ವಿರುದ್ಧ ಸಿಟ್ಟು ಅಥವಾ ದ್ವೇಷ ಉಂಟುಮಾಡುವ ಉದ್ದೇಶದಿಂದ ಧರ್ಮ ಅಥವಾ ಸಮುದಾಯದ ಮೇಲೆ ದೋಷಾರೋಪಣೆ ಮಾಡುವ ಸಂದೇಶ ಅಥವಾ ವಿಡಿಯೊ ಪೋಸ್ಟ್ ಮಾಡುವುದು ಶಿಕ್ಷೆ: 5 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
* ಗಲಭೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವುದು (ಬಿಎನ್‌ಎಸ್ ಸೆಕ್ಷನ್ 192) ಉದಾ: ‘ಯಾವುದೋ ಸಮುದಾಯದವರು ದಾಳಿ ಮಾಡಲು ಯೋಜಿಸುತ್ತಿದ್ದಾರೆ’ ಎಂಬ ಸುಳ್ಳು ವದಂತಿಯನ್ನು ಹಂಚುವುದು. ಇದು ಜನರನ್ನು ಒಟ್ಟುಗೂಡಿಸಿ ಉದ್ವಿಗ್ನತೆ ಉಂಟುಮಾಡಬಹುದು. ಶಿಕ್ಷೆ: 6 ತಿಂಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
* ವ್ಯಕ್ತಿಗಳನ್ನು ಬೆದರಿಸುವುದು ( ಬಿಎನ್‌ಎಸ್ ಸೆಕ್ಷನ್ 351(1)) ಉದಾ: ‘ನಿಮಗೆ ಪಾಠ ಕಲಿಸುತ್ತೇವೆ’ ಎಂಬ ಸಂದೇಶ ಕಳುಹಿಸುವುದು ಇದು ಯಾರಿಗಾದರೂ ಭಯ ಉಂಟುಮಾಡುವ ಉದ್ದೇಶ ಹೊಂದಿರುತ್ತದೆ. ಶಿಕ್ಷೆ: 7 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
* ಮಾತಿನ ಅಥವಾ ಆನ್‌ಲೈನ್ ವಿಷಯದ ಮೂಲಕ ದ್ವೇಷ ಭಾಷಣ (ಬಿಎನ್‌ಎಸ್ ಸೆಕ್ಷನ್ 351(1)(ಎ)) ಉದಾ: ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿ ಕೋಮು ಅಥವಾ ಜಾತಿ ಆಧರಿಸಿ ಅವಹೇಳನಾತ್ಮಕ ಮೀಮ್ಸ್ ರೀಲ್ಸ್ ಅಥವಾ ಸ್ಟೋರಿಗಳನ್ನು ಮಾಡುವುದು. ಶಿಕ್ಷೆ: 2 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
* ಸುಳ್ಳು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದು (ಬಿಎನ್‌ಎಸ್ ಸೆಕ್ಷನ್ 353(1)& 353(2)) ಉದಾ: ಕೋಮು ಹಿಂಸೆ ಅಥವಾ ಸಂಭವಿಸದೇ ಇರುವ ಘಟನೆಗಳ ಬಗ್ಗೆ ತಿರುಚಿದ ವಿಡಿಯೊ ಅಥವಾ ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದು. ಶಿಕ್ಷೆ: 3 ವರ್ಷಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.
‘ಆರೋಪಿಗಳಿಂದ ಮುಚ್ಚಳಿಕೆ ಪಡೆಯುತ್ತೇವೆ’
ಸಾರ್ವಜನಿಕ ಶಾಂತಿ ಕಾಪಾಡಲು ಮತ್ತು ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 126 ಮತ್ತು 129 ಅಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಉತ್ತಮ ನಡವಳಿಕೆ ಖಾತರಿಪಡಿಸುವಂತೆ ಆರೋಪಿಗಳಿಂದ ನಿರ್ದಿಷ್ಟ ಅವಧಿಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ. ದಿ ಈ ಅವಧಿಯಲ್ಲಿ ಅವರು ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿದರೆ ದಂಡ ಪಾವತಿಸಬೇಕಾಗುತ್ತದೆ ಅಥವಾ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.