ಮಂಗಳೂರು: ತಾಲ್ಲೂಕಿನ ಪೇಜಾವರ ಗ್ರಾಮದ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯ ಛಾವಣಿಯು ಸೋಮವಾರ ತರಗತಿಯಲ್ಲಿ ಮಕ್ಕಳಿದ್ದಾಗಲೇ ದಿಢೀರ್ ಕುಸಿದಿದೆ. ಹೆಂಚು ಜಾರುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿಗಳು ತರಗತಿ ಕೊಠಡಿಯ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ಯುಕೆಜಿಯ ಶೋನಿತ್ ಗಾಯಗೊಂಡ ವಿದ್ಯಾರ್ಥಿ. ಆತನ ಮೂಗಿಗೆ ತರಚುಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿದ್ದವು. ಒಟ್ಟು 22 ವಿದ್ಯಾರ್ಥಿಗಳು ದಾಖಲಾಗಿದ್ದರು. ಸೋಮವಾರ ತರಗತಿ ನಡೆಯುತ್ತಿರುವಾಗ ಏಕಾಏಕಿ ಜೋರಾಗಿ ಗಾಳಿ ಬೀಸಿದ್ದರಿಂದ ಛಾವಣಿ ಕುಸಿದಿದೆ’ ಎಂದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಧ್ಯಾಹ್ನ ಶಾಲೆ ಬಿಡುವುದಕ್ಕೆ ಕೆಲವೇ ನಿಮಿಷಗಳಿದ್ದವು. ನಾವೆಲ್ಲ ತರಗತಿಯಲ್ಲೇ ಇದ್ದೆವು. ಮಧ್ಯಾಹ್ನ 12.30ರ ಸುಮಾರಿಗೆ ಏಕಾಏಕಿ ಗಾಳಿ ಬೀಸಲು ಶುರುವಾಯಿತು. ಇದಾಗಿ ಕೆಲವೇ ಕ್ಷಣಗಳಲ್ಲಿ ಕಟ್ಟಡದ ಹಳೆಯ ಭಾಗದ ಚಾವಣಿ ಪೂರ್ತಿ ಕುಸಿದು ಬಿತ್ತು. ಹೆಂಚುಗಳು ಚೆಲ್ಲಾಪಿಲ್ಲಿಯಾದವು’ ಎಂದು ಶಿಕ್ಷಕಿ ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಲೆಯ ಕಟ್ಟಡದಲ್ಲಿ ಹಳೆಯ ಕಟ್ಟಡದ ಭಾಗವು 50 ವರ್ಷಗಳಿಗೂ ಹಳೆಯದು, ಅದಕ್ಕೆ ಸ್ವಲ್ಪ ಭಾಗವನ್ನು 10 ವರ್ಷದಿಂದ ಈಚೆಗೆ ಸೇರಿಸಲಾಗಿದೆ. ಕಟ್ಟಡದ ಹಳೆಯ ಭಾಗದ ಚಾವಣಿ ಕುಸಿದಿದೆ. 2023ರ ಮೇ ತಿಂಗಳಲ್ಲಿ ಚಾವಣಿಯನ್ನು ದುರಸ್ತಿಗೊಳಿಸಲಾಗಿದೆ. ಕಟ್ಟಡ ಗಟ್ಟಿಮುಟ್ಟಾಗಿಯೇ ಇತ್ತು. ಅದರೂ ಚಾವಣಿ ಏಕೆ ಕುಸಿಯಿತು ಗೊತ್ತಾಗುತ್ತಿಲ್ಲ’ ಎಂದರು.
ಇಲ್ಲಿ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತ್ತು. ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಅವಕಾಶ ಇತ್ತು. 2011ರಲ್ಲಿ ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಶಾಲೆಯನ್ನು ಮುಚ್ಚಲಾಯಿತು. ಶಾಲೆಯ ಆಡಳಿತ ಮಂಡಳಿ ಸಂಚಾಲಕರಾಗಿದ್ದ ಸುಂದರ ಭಟ್ ಎಂಬುವರು ಆ ಬಳಿಕ ಪೂರ್ವ ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದ್ದರು. ಅವರು 2022ರಲ್ಲಿ ಕೊನೆಯುಸಿರೆಳೆದಿದ್ದರು. ಮುಖ್ಯಪ್ರಾಣ ದೇವರ ಹೆಸರಿನಲ್ಲಿರುವ ಶಾಲೆಯನ್ನು ಮುಚ್ಚುವುದು ಬೇಡ ಎಂಬ ಕಾರಣಕ್ಕೆ ಊರಿನವೇ ಸೇರಿಕೊಂಡು, ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸುತ್ತಿದ್ದರು. ಮೂವರು ಶಿಕ್ಷಕಿಯರನ್ನು ನೇಮಿಸಿ ಅವರಿಗೆ ವೇತನವನ್ನೂ ಅವರೇ ನೀಡುತ್ತಿದ್ದರು. ಒಂದನೇ ತರಗತಿಯನ್ನು ಈ ವರ್ಷದಿಂದ ಆರಂಭಿಸಲು ಸಿದ್ಧತೆಯೂ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.