ADVERTISEMENT

ತಲಪಾಡಿ- ಸುರತ್ಕಲ್ ವರೆಗೆ ವರ್ತುಲ ರಸ್ತೆ: ಕನ್ನಡ ರಾಜ್ಯೋತ್ಸವದಲ್ಲಿ ಸಚಿವರ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:49 IST
Last Updated 1 ನವೆಂಬರ್ 2025, 5:49 IST
   

ಮಂಗಳೂರು: 'ನಗರದಲ್ಲಿ ಹಾಗೂ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ತಲಪಾಡಿಯಿಂದ ಸುರತ್ಕಲ್ ವರೆಗೆ ವರ್ತುಲ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೊಇಹನ ನೆರವೇರಿಸಿ ಅವರು ಮಾತನಾಡಿದರು.

'ಜಾತಿ-ಮತಗಳ ಭೇದವನ್ನು ತೊರೆದು ಜಿಲ್ಲೆಯ ಸೌಹಾರ್ದ ಕಾಪಾಡಲು ಎಲ್ಲರೂ ಸಹಕರಿಸಬೇಕು' ಎಂದರು.

ADVERTISEMENT

'ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ, ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವಜನಾಂಗದಲ್ಲಿ ಮತ್ತು ಮಕ್ಕಳಲ್ಲಿ ಇನ್ನಷ್ಟು ಪ್ರೀತಿ ಮತ್ತು ಕಾಳಜಿ ಮೂಡಿಸಬೇಕು‌' ಎಂದರು.

'ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5.51 ಲಕ್ಷ ಫಲಾನುಭವಿಗಳು ಇದುವರೆಗೆ ₹ 789 ಕೋಟಿಯನ್ನು ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ 11.01 ಕೋಟಿ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದು, ಒಟ್ಟು ಪ್ರಯಾಣ ವೆಚ್ಚವು ₹ 373.81 ಕೋಟಿ ಆಗಿದೆ . ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3.79 ಲಕ್ಷ ಮಹಿಳೆಯರಿಗೆ ಇದುವರೆಗೆ ಒಟ್ಟು ₹ 1377 ಕೋಟಿ ಸಹಾಯಧನ ಮಂಜೂರಾಗಿದೆ. ಅನ್ನಭಾಗ್ಯ ಯೋಜನೆ ಅಡಿ 11.76 ಲಕ್ಷ ಫಲಾನುಭವಿಗಳಿಗೆ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ಹೆಚ್ಚುವರಿ ನೀಡಲಾಗುತ್ತಿದೆ. ಯುವನಿಧಿ ಯೋಜನೆಯಡಿ 5,283 ಯುವಜನರಿಗೆ ₹ 9.54 ಕೋಟಿ ಆರ್ಥಿಕ ನೆರವು ನೀಡಲಾಗಿದೆ' ಎಂದರು.

'ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ-4 ರಡಿ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ₹ 110 ಕೋಟಿ ಮಂಜೂರಾಗಿದ್ದು, 144 ಕಾಮಗಾರಿಗಳು ಪೂರ್ಣಗೊಂಡಿವೆ. ಜಿಲ್ಲೆಗೆ 19 ಕ್ಯಾಂಟೀನ್‌ಗಳು ಇದ್ದು, ಇನ್ನೂ 7 ಕ್ಯಾಂಟೀನ್ ಪ್ರಾರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ' ಎಂದರು.

'ಪಟ್ಟಣ ಪ್ರದೇಶಗಳಲ್ಲಿ ವಸತಿ ಒದಗಿಸಲು 3,541 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 2,969 ಮನೆಗಳು ಪೂರ್ಣಗೊಂಡಿವೆ. ಪಾಲಿಕೆ ವ್ಯಾಪ್ತಿಯ ಇಡ್ಯಾದಲ್ಲಿ ನಾಲ್ಜು ಮಹಡಿಯ ಗುಂಪುಮನೆ ಯೋಜನೆಯಲ್ಲಿ 792 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ' ಎಂದರು.

'ಸೋಮೇಶ್ವರ, ಬಜಪೆ, ಕಿನ್ನಿಗೋಳಿ, ಮೂಲ್ಕಿ ಮತ್ತು ಮೂಡುಬಿದಿರೆ ಪಟ್ಟಣಗಳಿಗೆ ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿ ಹಾಗೂ ಬಂಟ್ವಾಳ ಮತ್ತು ಉಳ್ಳಾಲ ಪಟ್ಟಣದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನೇತ್ರಾವತಿ ಎಡದಂಡ ಸಂರಕ್ಷಿಸಲು ಉಳ್ಳಾಲ ತಾಲ್ಲೂಕಿನ ಪಾವೂರು - ಬೋಳಿಯಾರಿನವರೆಗೆ ₹40 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ' ಎಂದು ತಿಳಿಸಿದರು.

'ಜಲಜೀವನ್ ಮಿಷನ್ ಅಡಿ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಒಣ ಕಸ ನಿರ್ವಹಣೆಗೆ ಎಂ.ಆರ್.ಎಫ್. ಘಟಕ ಸೌಲಭ್ಯ ಕಲ್ಪಿಸಿರುವ ರಾಜ್ಯದ ಮೊದಲ ಜಿಲ್ಲೆ ನಮ್ಮದು ಎಂದರು.

'ಬಡವರಿಗೆ ಉನ್ನತ ಹೃದ್ರೋಗ ಚಿಕಿತ್ಸೆ ಒದಗಿಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನ ಕ್ಯಾಥ್ ಲ್ಯಾಬ್ ಆರಂಭಿಸಲಾಗಿದೆ. ₹90 ಕೋಟಿ ವೆಚ್ಚದಲ್ಲಿ ಹೊಸ ಹೊರರೋಗಿ ವಿಭಾಗದ (ಒಪಿಡಿ) ಕಟ್ಟಡ ನಿರ್ಮಿಸಲಿದ್ದೇವೆ' ಎಂದು ತಿಳಿಸಿದರು.

'ಜಿಲ್ಲೆಯ 18 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆ.ಪಿ.ಎಸ್) ಗಳನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ಸಿಕ್ಕಿದೆ. ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗೆ ಆದೇಶ ನೀಡಲಾಗಿದೆ. ರಂಗಮಂದಿರ ನಿರ್ಮಾಣಕ್ಕೆ ಟೆಂಡ‌ರ್ ಕರೆಯಲಾಗಿದೆ. ಕೊಂಕಣಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಬ್ಯಾರಿ ಭವನವನ್ನು ಉಳ್ಳಾಲ ತಾಲ್ಲೂಕಿನ ಅಸೈಗೋಳಿಯಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ' ಎಂದರು.

'ದೇರೆಬೈಲ್ ನಲ್ಲಿ 3.285 ಎಕರೆಯಲ್ಲಿ 'ಟೆಕ್ ಪಾರ್ಕ್' ಅನ್ನು ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಬಾಲಕರ ತಂಡ ಪ್ರಥಮ ಆರ್ ಎಸ್ಪಿ ಬಾಲಕಿಯರ ತಂಡದ ದ್ವಿತೀಯ ಸ್ಥಾನ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.