ಮಂಗಳೂರು: 'ಬರುಡೆ ಏನಾದರೂ ಸಿಕ್ಕಿತಾ? ಎಷ್ಟು ಆಳಕ್ಕೆ ಅಗೆದರಂತೆ... ಇದು ಎಷ್ಟು ದಿನ ಮುಂದುವರಿಯಬಹುದು... ಜೆಸಿಬಿ ತರಿಸಿದ್ದು ಏಕಿರಬಹುದು? ಶ್ವಾನವನ್ನು ತರಿಸಿದ್ದು ನೋಡಿದರೆ ಏನೋ ಸಿಕ್ಕಿರಬಹುದೋ ಏನೋ...’
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಕುರುಕು ಪತ್ತೆಗೆ ನೇತ್ರಾವತಿ ನದಿಯ ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ನೆಲ ಅಗೆಯುವ ಕಾರ್ಯ ನಡೆಯುತ್ತಿದ್ದರೆ, ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರಿಗೆ ಈ ಬಗ್ಗೆ ತಿಳಿದುಕೊಳ್ಳುವ ಕೌತುಕ.
ಎಸ್‌ಐಟಿ ಅಧಿಕಾರಿಗಳ ಒಂದೊಂದು ಚಲವಲನವೂ ಈ ಶೋಧ ಕಾರ್ಯವನ್ನು ನೋಡುತ್ತಿದ್ದ ಸಾರ್ವಜನಿಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಸ್ನಾನ ಘಟ್ಟದ ಬಳಿಯ ದಂಡೆ ಮೇಲೆ ನಿಂತುಕೊಂಡಿದ್ದ ಸಾರ್ವಜನಿಕರು, ಸಾಕ್ಷಿದಾರ ತೋರಿಸಿದ ಸ್ಥಳದಲ್ಲಿ ಮೃತದೇಹಗಳನ್ನು ಹೂತಿದ್ದ ಕುರುಹುಗಳೇನಾದರೂ ಸಿಗಬಹುದಾ ಎಂದು ದಿನವಿಡೀ ಕಾತರದಿಂದ ಕಾದರು.
ಶೋಧ ಕಾರ್ಯ ಮುಂದುವರಿದಾಗ ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್.ಅನುಚೇತ್ ದಿಢೀರ್ ಆಗಿ ಸ್ಥಳಕ್ಕಾಗಮಿಸಿದ್ದು, ಪೊಲೀಸ್ ಶ್ವಾನವನ್ನು ಕರೆತಂದಿದ್ದು... ಈ ಬೆಳವಣಿಗೆಗಳೆಲ್ಲವೂ ಸಾರ್ವಜನಿಕರ ಕೌತುಕವನ್ನು ಮತ್ತಷ್ಟು ಹೆಚ್ಚಿಸಿತು. ಕೆಲವರು ತಮ್ಮ ಮೊಬೈಲ್‌ಗಳಲ್ಲೇ ಶೋಧ ಕಾರ್ಯದ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಇನ್ನು ಕೆಲವರು ತಮ್ಮ ಆಪ್ತರಿಗೆ ಶೋಧ ಕಾರ್ಯದ ಬೆಳವಣಿಗೆಗಳ ಮಾಹಿತಿ ಹಂಚಿಕೊಂಡರು.
ಮೊದಲ ದಿನ ಅಗೆದ ಜಾಗದಲ್ಲಿ ಯಾವ ಕುರುಹೂ ಸಿಗದ ಸುದ್ದಿ ಕೇಳಿ ಸಂಜೆವರೆಗೂ ಕಾದ ಕೆಲವರು, ‘2019ರಲ್ಲಿ ಬಂದಿದ್ದ ಪ್ರವಾಹದಲ್ಲಿ ಇಲ್ಲಿನ ಮೃತದೇಹಗಳು ಕೊಚ್ಚಿಹೋಗಿರ ಬಹುದು’ ಎಂದು ಅನುಮಾನಿಸಿದರೆ, ಇನ್ನು ಕೆಲವರು ಅಲ್ಲಿ ಮೃತದೇಹವನ್ನು ನಿಜಕ್ಕೂ ಹೂತಿದ್ದುದು ಹೌದೇ ಎಂದು ಸಂದೇಹ ವ್ಯಕ್ತಪಡಿಸಿದರು.
ಶೋಧ ಕಾರ್ಯ ವೀಕ್ಷಿಸಲು ಆಸುಪಾಸಿನ ಊರುಗಳ ಜನರೂ ತಮ್ಮ ವಾಹನಗಳಲ್ಲಿ ಬಂದಿದ್ದರು. ಸ್ನಾನ ಘಟ್ಟದ ಪಕ್ಕದ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ದ್ವಿಚಕ್ರವಾಹನ ಹಾಗೂ ಕಾರುಗಳನ್ನು ನಿಲ್ಲಿಸಲಾಗಿತ್ತು.
ಶವಗಳನ್ನು ಹೂತಿರುವುದಾಗಿ ಸಾಕ್ಷಿ ದೂರುದಾರ ತೋರಿಸಿದ ಜಾಗದಲ್ಲಿ ಭದ್ರತಾ ಕರ್ತವ್ಯ ನಿರತರಾಗಿದ್ದ ಸಿಬ್ಬಂದಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.