
ಮಂಗಳೂರು: ನಗರದಲ್ಲಿ ಸಾರಿಗೆ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿ ನಿತ್ಯ 2500ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿರುವುದು. ವಾಹನ ದಟ್ಟಣೆ ತಡೆಯಲು ನಗರದ ಹೊರವಲಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ಹೊಂದಬೇಕಿದೆ. ನಗರವು ‘ಸ್ಮಾರ್ಟ್ ಸಿಟಿ’ ಎಂದು ಕರೆಸಿಕೊಂಡ ಬಳಿಕವೂ ಸುಸಜ್ಜಿತ ಬಸ್‌ನಿಲ್ದಾಣ ಮರೀಚಿಕೆಯಾಗಿಯೇ ಉಳಿದಿದೆ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣವು ಹಾಕಿ ಮೈದಾನದ ಜಾಗ. ಅಲ್ಲಿ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಬಸ್ ನಿಲ್ದಾಣ ನಾಲ್ಕು ದಶಕಗಳಿಂದ ಅಲ್ಲೇ ಇದೆ. ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಪಂಪ್‌ವೆಲ್ ಬಳಿ ಬಸ್‌ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪಾಲಿಕೆಯು 7 ಎಕರೆ 23.5 ಸೆಂಟ್ಸ್ ಜಾಗವನ್ನು 2008ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.
ಇಲ್ಲಿ ನಗರ ಸಾರಿಗೆ, ಅಂತರ ನಗರ, ಅಂತರ್ ಜಿಲ್ಲಾ ಮತ್ತು ಅಂತರ ರಾಜ್ಯ ಸಾರಿಗೆ ಬಸ್‌ಗಳ ನಿಲುಗಡೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರೀಕೃತ ಮತ್ತು ಏಕೀಕೃತ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಪ್ರಯಾಣಿಕರಿಗೆ ಪೂರಕ ಸೌಕರ್ಯ, ಬಸ್‌ಗಳ ನಿಲುಗಡೆಗೆ ವಿಶಾಲ ಜಾಗ, ಆತಿಥ್ಯ ಘಟಕ, ಬಹುಮಹಡಿ ಕಾರು ನಿಲುಗಡೆ ತಾಣ, ವಾಣಿಜ್ಯ ಮಳಿಗೆಗಳನ್ನು ಒದಗಿಸುವ ಪ್ರಸ್ತಾವ ಇತ್ತು. ₹ 445 ಕೋಟಿಯ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ವಿನ್ಯಾಸ ರೂಪಿಸಿ, ಹಣಕಾಸು ಹೂಂದಿಸಿ, ನಿರ್ಮಿಸಿ, ಕೆಲವರ್ಷ ನಿರ್ವಹಿಸಿ ಸರ್ಕಾರಕ್ಕೆ ವರ್ಗಾಯಿಸುವ (ಡಿಬಿಎಫ್‌ಒಟಿ) ಮಾದರಿಯಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು.
ಮೂರು ಬಾರಿ ಟೆಂಡರ್ ಕರೆದರೂ ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ಖಾಸಗಿ ಸಂಸ್ಥೆ ಆಸಕ್ತಿ ತೋರಿಸಲಿಲ್ಲ. ಆದರೂ ಯೋಜನೆಯನ್ನು ಪೂರ್ತಿ ಕೈಬಿಟ್ಟಿಲ್ಲ. ಈಗ ರೂಪಿಸಿರುವ ವಿನ್ಯಾಸದಲ್ಲಿ ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಅಧಿಕಾರಿಗಳು.
‘ಸ್ಮಾರ್ಟ್ ಸಿಟಿ ಯೋಜನೆ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಹಾಗಾಗಿ ಪಂಪ್‌ವೆಲ್ ಬಸ್ ಟರ್ಮಿನಲ್ ಅನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿ ಸಾಧ್ಯ’ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಜಿ.
‘ಪಂಪ್‌ವೆಲ್ ಟರ್ಮಿನಲ್ ನಿರ್ಮಾಣವಾದರೂ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ಸಾಗುವ ಮಾರ್ಗದಿಂದ ಬರುವ ಬಸ್‌ಗಳು ಅದರೊಳಗೆ ಪ್ರವೇಶಿಸಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಳ ಸೇತುವೆ ನಿರ್ಮಿಸಬೇಕಾಗುತ್ತದೆ. ಅದಕ್ಕೆ ಸರ್ಕಾರ ಅನುದಾನ ನೀಡಿದರೆ, ಟರ್ಮಿನಲ್‌ಗೆ ಖಾಸಗಿಯವರು ಹೂಡಿಕೆ ಮಾಡುವ ಸಾಧ್ಯತೆ ಇದೆ’ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.
ನಗರದಲ್ಲಿ ದಟ್ಟಣೆ ಅವಧಿಯಲ್ಲಿ ನಗರದ ಹಂಪನಕಟ್ಟೆ, ಅಂಬೇಡ್ಕರ್ ವೃತ್ತ, ಬಲ್ಮಠ ಜಂಕ್ಷನ್, ಕಂಕನಾಡಿ ಜಂಕ್ಷನ್, ಪಂಪ್‌ವೆಲ್ ಜಂಕ್ಷನ್... ಮೊದಲಾದ ಕಡೆ ವಾಹನಗಳು ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ಇದೆ. ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುವ ಬಸ್ ಟರ್ಮಿನಲ್‌ಗೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸುತ್ತದೆಯೇ ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.