ADVERTISEMENT

ಮಂಗಳೂರು: ನವೋದ್ಯಮಿಗಳ ಕನಸಿಗೆ ಭರವಸೆಯ ಬೆಸೆದ ಟೆಕ್ನೋವಾಂಜ

ಹೊಸ ತಂತ್ರಜ್ಞಾನ ಆಧರಿತ ಹಲವಾರು ಉತ್ಪನ್ನಗಳ ಪರಿಚಯಿಸಿದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 7:44 IST
Last Updated 25 ಸೆಪ್ಟೆಂಬರ್ 2025, 7:44 IST
ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಮಂಗಳೂರು ಟೆಕ್ನೊವಾಂಜಾದ ಐದನೇ ಆವೃತ್ತಿಯಲ್ಲಿ ಭಾಗವಹಿಸಿದ ವಿವಿಧ ಕಂಪನಿಗಳ ಪ್ರತಿನಿಧಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸಿದರು:  ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ಮಂಗಳೂರು ಟೆಕ್ನೊವಾಂಜಾದ ಐದನೇ ಆವೃತ್ತಿಯಲ್ಲಿ ಭಾಗವಹಿಸಿದ ವಿವಿಧ ಕಂಪನಿಗಳ ಪ್ರತಿನಿಧಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸಿದರು:  ಪ್ರಜಾವಾಣಿ ಚಿತ್ರ   

ಮಂಗಳೂರು: 2034ರ ವೇಳೆಗೆ 4 ಸಾವಿರಕ್ಕೂ ಅಧಿಕ ನವೋದ್ಯಮಗಳ ಸ್ಥಾಪನೆ, 2 ಲಕ್ಷ ಉದ್ಯೋಗ ಸೃಷ್ಟಿ ಮತ್ತು ₹40 ಸಾವಿರ ಕೋಟಿ ತಂತ್ರಜ್ಞಾನ ಉತ್ಪನ್ನಗಳ ರಫ್ತು ಹಾಗೂ ₹800 ಕೋಟಿ ಹೂಡಿಕೆಯ ಕನಸಿನೊಂದಿಗೆ ‘ಮಂಗಳೂರು ಟೆಕ್ನೊವಾಂಜಾ’ದ ಐದನೇ ಆವೃತ್ತಿ ಸಂಪನ್ನ ಗೊಂಡಿತು. ಉದ್ಯಮಿಗಳಾಗುವ ಕನಸು ಸಾಕಾರಗೊಳ್ಳಲು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಬೆಂಬಲದ ಭರವಸೆಯನ್ನು ಟೆಕ್ನೋವಾಂಜ ಮೂಡಿಸಿತು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ (ಕೆಡಿಎಂಇ) ಆಶ್ರಯದಲ್ಲಿ ಇಲ್ಲಿನ ಟಿಎಂಎ ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಬುಧವಾರ  ಏರ್ಪಡಿಸಿದ್ದ ಈ ಕಾರ್ಯಕ್ರಮ 225ಕ್ಕೂ ಹೆಚ್ಚು ತಂತ್ರಜ್ಞಾನ ಕಂಪನಿಗಳು, 25ಕ್ಕೂ ಅಧಿಕ ಎಂಜಿನಿಯರಿಂಗ್ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪ್ರತಿನಿಧಿಗಳು, ಜಾಗತಿಕ ಉದ್ಯಮ ಕ್ಷೇತ್ರದ ದಿಗ್ಗಜರು, ನೀತಿ ನಿರೂಪಕರು, ನವೋದ್ಯಮಿಗಳು, ಹೂಡಿಕೆದಾರರನ್ನು ಒಂದೇ ಸೂರಿನಡಿ ತಂದಿತು.  

ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿದ ಉದ್ಯಮಿ ಮೋಹನದಾಸ ಪೈ, ‘ಮಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ (ಎಐ ಹಬ್‌) ಸ್ಥಾಪನೆಗೆ ಕ್ರಮವಹಿಸಬೇಕು. ಈ ಸಲುವಾಗಿ ಸರ್ಕಾರ ಈ ಹಿಂದೆ ನವೋದ್ಯಮಗಳಿಗೆ ಉತ್ತೇಜನ ನೀಡಲು ‘ಎಲೆವೇಟ್ 100’ ಕಾರ್ಯಕ್ರಮ ರೂಪಿಸಿದ ಮಾದರಿಯಲ್ಲೇ, ‘ಎಲೆವೇಟ್‌ ಎಐ 100’ ಕಾರ್ಯಕ್ರಮ ರೂಪಿಸಬೇಕು ಎಂದುಸಲಹೆ ನೀಡಿದರು. 

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ತಂತ್ರಜ್ಞಾನ ಮತ್ತಯ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ‘ಈ ಬಗ್ಗೆ ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಶೃಂಗ 2025ರಲ್ಲಿ ಚರ್ಚಿಸುತ್ತೇವೆ. ನಾವು ಎಲೆವೇಟ್‌ ಎಐ 100 ಕಾರ್ಯಕ್ರಮ ರೂಪಿಸಲು ಸರ್ಕಾರದಿಂದ ₹ 5 ಕೋಟಿ ಅನುದಾನ ಕೊಡಿಸಲು ಬದ್ಧ. ಈ ಶೃಂಗಸಭೆಗೆ ಅಗ್ರ 25 ಬಂಡವಾಳ ಹೂಡಿಕೆ ಸಂಸ್ಥೆಗಳನ್ನು ಕರೆತರುವ ಬಗ್ಗೆ ಮೋಹನದಾಸ ಪೈ ಖಾತರಿ ನೀಡಬೇಕು. ಅವರ ಕಡೆಯಿಂದಲೂ ₹ 5 ಕೋಟಿಗಳಷ್ಟು ಆರ್ಥಿಕ ನೆರವು ಸಿಗುವಂತಾಗಬೇಕು. ಶೃಂಗಸಭೆಯಲ್ಲಿ ಭವಿಷ್ಯ ರೂಪಿಸುವ ಕುರಿತ ಗೋಷ್ಠಿಯಲ್ಲಿ ಕೃತಕ ಬುದ್ಧಿಮತ್ತೆಗೆ ಸೀಮೀತವಾಗಿ ಚರ್ಚೆ ನಡೆಸಲಿದ್ದೇವೆ. ಅದರ ಫಲಿತಾಂಶವನ್ನೂ ಅಲ್ಲೇ ಪ್ರಕಟಿಸಲಿದ್ದೇವೆ’ ಎಂದರು.

ಕೆಡಿಎಂಇ ಅಧ್ಯಕ್ಷ ಬಿ.ವಿ.ನಾಯ್ಡು, ‘ಗುಜರಾತಿನಲ್ಲಿರುವಂತೆ ಕರ್ನಾಟಕ್ಕೂ ಗಿಫ್ಟ್ ಸಿಟಿಯಂತಹ ಹಬ್‌ ಆರಂಭಿಸಬೇಕು. ಮಂಗಳೂರಿನಲ್ಲಿ ಡೇಟಾಸೆಂಟರ್ ಹಬ್ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು. 

’ಈ ಕುರಿತು ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ದೇಶದಲ್ಲಿ ಒಂದೇ ಗಿಫ್ಟ್‌ ಸಿಟಿ ಇರಲು ಸಾಧ್ಯವ ಎಂದು ಹೇಳಿದೆ.   ಇನ್ನೊಮ್ಮೆ ಪ್ರಸ್ತಾವ ಸಲ್ಲಿಸಲು ಸಿದ್ಧ. ಅದು ಅಲ್ಲಿಗಿಂತ, ಇಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಸಂಸದು ಈ ಬಗ್ಗೆ ಹಣಕಸು ಸಚಿವರಿಗೆ ಹಾಗೂ ಪ್ರಧಾನಿ ಮೇಲೆ ಒತ್ತಡ ಹೇರಬೇಕು’ ಎಂದು ಸಚಿವರು ಪ್ರತಿಕ್ರಿಯಿಸಿದರು.

‘ಡೇಟಾ ಸೆಂಟರ್‌ ಸ್ಥಾಪಿಸಲು ಯೋಗ್ಯವಾದ ನಗರಗಳಲ್ಲಿ ಮಂಗಳೂರು ಒಂದು. ಇದಕ್ಕೆ ನಿರಂತರ ವಿದ್ಯುತ್‌ ಹಾಗೂ ನೀರು ಪೂರೈಕೆ  ವ್ಯವಸ್ಥೆ ಬೇಕು. ಅದಕ್ಕಾಗಿ ಇಂಧನ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಕೈಗಾರಿಕೆಗೆ ಪ್ರತ್ಯೇಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಎಂದು ಕೇಳಿದ್ದೇವೆ. ಡೇಟಾ ಸೆಂಟರ್ ಸ್ಥಾಪನೆ ಕುರಿತ ನೀಲ ನಕ್ಷೆ ಮುಂದಿನ ಬಜೆಟ್‌ ಅಧೀವೇಶನದ ಒಳಗೆ ಸಜ್ಜಾಗಲಿದೆ’ ಎಂದು ಸಚಿವರು ತಿಳಿಸಿದರು.   

ಹೈಪರ್‌ಫಿನ್ ಟೆಕ್ನಾಲಜೀಸ್, ಆಡ್‌ ಆಪ್ಟೆಕ್ ಅಡ್ವೈಸರಿ, ಎಕ್ಸಾಥಾಟ್ ಟೆಕ್ನಾಲಜಿ ಕನ್ಸಲ್ಟಿಂಗ್‌ ಜೊತೆ 3 ಒಪ್ಪಂದಗಳಿಗೆ (ಎಲ್‌ಒಐ) ಸಹಿ ಹಾಕಿದವು. ಅನ್ಮಯ ಟೆಕ್ನಾಲಜೀಸ್, ಬೆಳ್ಳಾರೆ ಜಿಐಎಸ್ ಕನ್ಸಲ್ಟೆನ್ಸಿ, ಕ್ಯಾಲಿರೆಕ್ಸ್ ಟೆಕ್ನಾಲಜೀಸ್, ಎಕೋಪಾಲಿ ಬಯೋಟೆಕ್‌ ಎಲ್‌ಎಲ್‌ಪಿ ಮತ್ತು ಜುಪಲೂಪ್ ಓಜಾಸ್ ಕ್ವೆಸ್ಟ್ ಪ್ರೈವೇಟ್ ಲಿಮಿಟೆಡ್, ಮನಸಿಜ ಟೆಕ್ನಾಲಜೀಸ್, ಎಂಟ್ರುಪಿ, ಸೋಫ್ರೋಸಿನ್ ಸೆಮಿಕಂಡಕ್ಟರ್, ಸೀತಾರಾ, ಅನ್ವೇಷನ್ ಲ್ಯಾಬ್ಸ್, ಟ್ರೂಲಿಫ್ಟ್ ಎಐ, ಎಕ್ಸ್‌ಫ್ಯಾಕ್ಟರ್ ಎಐ, ಟೆಲೋಕ್ವೆಂಟ್, ಇಂಡಿವಿಲೇಜ್ ಸೇರಿದಂತೆ 10 ಹೊಸ ಉದ್ಯಮಗಳಿಗೆ ಚಾಲನೆ ನೀಡಲಾಯಿತು.  ನವಮಾರ್ಗ್‌ ರಿಸರ್ಚ್‌ ಆಂಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಯಾಸ್ಕಾ ಆಗ್ರೋಟೆಕ್ ಎಲ್‌ಎಲ್‌ಪಿ, ಹೈಡ್ರೋಜನ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ (ಹೈಡ್ಜೆನ್) ಸಂಸ್ಥೆಗಳನ್ನು ಬ್ಲೂ ವಿಜೇತರನ್ನಾಗಿ ಗುರುತಿಸಲಾಯಿತು. ಜುಪಲೂಪ್ ಮತ್ತು ಜಂಪ್‌ವೇರ್ ಸಂಸ್ಥೆಗಳ ಪ್ರವರ್ತಕರನ್ನು ಸನ್ಮಾನಿಸಲಾಯಿತು. 

ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಈಗಾಗಲೇ 250 ಕಂಪನಿಗಳಿದ್ದು ರಫ್ತು ವಹಿವಾಟಿಗೆ ₹3500 ಕೋಟಿಗೂ ಹೆಚ್ಚು ಕೊಡುಗೆ ನೀಡುತ್ತಿವೆ. 3 ವರ್ಷಗಳಲ್ಲಿ ಇದು ₹10 ಸಾವಿರಕೋಟಿ ದಾಟುವ ನಿರೀಕ್ಷೆಯಿದೆ

-ಡಾ. ಸಂಜಯ್ ತ್ಯಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಎಸ್‌ಟಿಪಿಐ ಕರ್ನಾಟಕದ ನಿರ್ದೇಶಕ

ಮೆಟ್ರೋಗಳಿಗಿಂತ ಶೇ 40ರಷ್ಟು ಶುದ್ಧ ಗಾಳಿ ಮತ್ತು ಜಾಗತಿಕ ಸುರಕ್ಷಿತ ನಗರಗಳಲ್ಲಿ ಅಗ್ರ 50 ರ ಒಳಗಿನ ಶ್ರೇಯಾಂಕ ಇಲ್ಲಿನ ನವೋದ್ಯಮ ಸ್ನೇಹಿ ಪರಿಸರ ವ್ಯವಸ್ಥೆ ಅಭಿವೃದ್ಧಿ ಹೊಂದಲು ಮಂಗಳೂರಿನಲ್ಲಿ ಪೂರಕ ವಾತಾವರಣ ಕಲ್ಪಿಸಿವೆ

-ರೋಹಿತ್ ಭಟ್‌ ಮಂಗಳೂರು ಕ್ಲಸ್ಟರ್‌ನ ಪ್ರಮುಖ ಕೈಗಾರಿಕಾ ನಿರೂಪಕ

ಮಂಗಳೂರು ಸಾಧ್ಯತೆಗಳ ಸಾಗರ. ಇದರ ಅರಿವು ನಮಗೇ ಆಗಿಲ್ಲ. ಕಳೆದುದರ ಬಗ್ಗೆ ಚಿಂತಿಸದೇ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ಮಂಗಳೂರು-ಬೆಂಗಳೂರು ಹೈ-ಸ್ಪೀಡ್ ಕಾರಿಡಾರ್ ಜಾರಿಗೂ ರಾಜ್ಯ ಸರ್ಕಾರ ಸಹಕಾರ ನೀಡಬೇಕಿದೆ

-ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದ

‘ಅಕ್ವಾ ಮರೈನ್‌ ಬಯೋಟೆಕ್ ಸೆಂಟರ್ ಆಫ್ ಎಕ್ಸೆಲೆನ್ಸ್‌ ಲೋಕಾರ್ಪಣೆ’

ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ₹ 8 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ‘ಅಕ್ವಾ ಮರೈನ್‌ ಬಯೋಟೆಕ್ ಸೆಂಟರ್ ಆಫ್ ಎಕ್ಸೆಲೆನ್ಸ್‌’ ಅನ್ನು ಸಚಿವರು ಲೋಕಾರ್ಪಣೆ ಗೊಳಿಸಿದರು. ‘ಅಕ್ವಾ ಕಲ್ಚರ್ ಅಕ್ವಾ ಫಿಶರೀಸ್‌ ತಂತ್ರಜ್ಞಾನಗಳಿಗೆ ಇದು ಉತ್ತೇಜನ ನೀಡಲಿದೆ. ಇನ್ಕುಬೇಷನ್‌ ಸೆಂಟರ್‌ ಆಗಿಯೂ ಕಾರ್ಯ ನಿರ್ವಹಿಸುವ ಈ ಕೇಂದ್ರ ಎಂಟು ನವೋದ್ಯಮಗಳಿ ಉತ್ತೇಜನ ನೀಡಲಿದೆ. ಅಕ್ವಾ ಮೆರೈನ್‌ ಕ್ಷೇತ್ರದ ನವೋದ್ಯಮಗಳ ಸ್ಥಾಪನೆಗೂ ನೆರವಾಗಲಿದೆ’ ಎಂದರು. ‘ಸಮುದ್ರದಲ್ಲಿ 12 ನಾಟಿಕಲ್ ಪ್ರದೇಶ ರಾಜ್ಯದ ಸ್ವತ್ತು. ಅಲ್ಲಿನ ಸಂಪನ್ಮೂಲ ಬಳಕೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಮುದ್ರದ ಕಳೆಯಿಂದ ವಿದ್ಯುತ್‌ ಉತ್ಪಾದಿಸುವ ನವೋದ್ಯಮ ರಾಜ್ಯದಲ್ಲಿದೆ. ಅಅವರು ಸಮುದ್ರದ ಕಳೆಯನ್ನು ಇಂಡೋನೇಷ್ಯಾ ಮಲೇಶಿಯಾದಿಂದ ತರಿಸುವ ಬದಲು ಇಲ್ಲಿಂದಲೇ ಉತ್ಪಾದಿಸುವಂತಾಗಬೇಕು’ ಎಂದರು. ‘ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಜೊತೆ ಸೇರಿ ₹10 ಕೋಟಿ ಮೊತ್ತದಲ್ಲಿ ಬ್ಯುಸಿನೆಸ್ ಇನ್ಕುಬೇಟರ್ ಸೆಂಟರ್‌ ಸ್ಥಾಪಿಸಲಿದ್ದೇವೆ’ ಎಂದು ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.