
ಮಂಗಳೂರು: ವಸತಿ ಸಮುಚ್ಚಯಗಳು, ವ್ಯಾಪಾರಿ ಮಳಿಗೆಗಳು, ದಿನವಿಡೀ ವಾಹನ ದಟ್ಟಣೆ ಇರುವ ಕೋರ್ಟ್ ವಾರ್ಡ್‌ನಲ್ಲಿ ಜನರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆಗಳೆಂದರೆ ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ಬ್ಲ್ಯಾಕ್ ಸ್ಪಾಟ್‌ಗಳು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆವರೆಗೆ, ಬಂಟ್ಸ್ ಹಾಸ್ಟೆಲ್ ಸರ್ಕಲ್, ಕೋರ್ಟ್ ರಸ್ತೆ, ಆರ್ಯ ಸಮಾಜ ರಸ್ತೆಯ ಪಾರ್ಶ್ವ ಭಾಗ, ಲೋಬೊ ಲೇನ್, ಸ್ಟರಾಕ್ ರಸ್ತೆ ಇವೆಲ್ಲವೂ ಈ ವಾರ್ಡ್ ವ್ಯಾಪ್ತಿಯಲ್ಲಿವೆ. ನಗರದ ಕೇಂದ್ರ ಭಾಗದಲ್ಲಿರುವ ಈ ವಾರ್ಡ್‌ನ ಬಹುತೇಕ ರಸ್ತೆಗಳು ಕಾಂಕ್ರೀಟ್ ಅಥವಾ ಡಾಂಬರ್ ಹೊದ್ದುಕೊಂಡು ಸುಸಜ್ಜಿತವಾಗಿವೆ. ಚರಂಡಿಗಳು ವ್ಯವಸ್ಥಿತವಾಗಿವೆ. ಆದರೆ, ಕೆಲವು ಕಡೆಗಳಲ್ಲಿ ಚರಂಡಿ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ನ್ಯೂ ಬಲ್ಮಠ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿತ್ಯದ ಗೋಳಾಗಿದೆ.
ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಅಂಬೇಡ್ಕರ್ ವೃತ್ತಕ್ಕೆ ಸೇರುವ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗವಿಲ್ಲದೆ ಕಾಲ್ನಡಿಗೆಯಲ್ಲಿ ಸಾಗುವವರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ವೃತ್ತದಲ್ಲಿ ಪಾದಚಾರಿ ಮಾರ್ಗಕ್ಕೆ ಅಗತ್ಯವಿರುವ ಜಾಗವನ್ನು ತೆರವುಗೊಳಿಸಲಾಗಿದ್ದು, ಆದಷ್ಟು ಶೀಘ್ರ ಕಾಮಗಾರಿ ನಡೆಸಬೇಕು ಎಂಬುದು ಜನರ ಆಗ್ರಹವಾಗಿದೆ.
ಬ್ರಿಡ್ಜ್ ರಸ್ತೆಯ ಒಂದು ಬದಿಯಲ್ಲಿ ಪಾದಚಾರಿ ಮಾರ್ಗವಿದ್ದರೂ, ಅದು ಬಹುತೇಕ ಸಮಯ ನಡೆದುಕೊಂಡು ಹೋಗುವವರಿಗೆ ಲಭ್ಯವಿರುವುದಿಲ್ಲ. ಪಾದಚಾರಿ ಮಾರ್ಗದ ಮೇಲೆಯೇ ಕಾರುಗಳು ಸಾಲಾಗಿ ನಿಂತಿರುತ್ತವೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ವಿದ್ಯಾರ್ಥಿ ಅಶ್ವಿನ್.
ಆರ್ಯ ಸಮಾಜ ರಸ್ತೆಯಲ್ಲಿ ಅರ್ಧ ಭಾಗದಲ್ಲಿ ಚರಂಡಿ ಸಹಿತ ಪಾದಚಾರಿ ಮಾರ್ಗ ನಿರ್ಮಾಣವಾಗಿದ್ದು, ಇನ್ನು ಕೆಲವು ಕಡೆ ಪಾದಚಾರಿ ಮಾರ್ಗವೇ ಇಲ್ಲದೆ ಜನರು ಪರದಾಡುವಂತಾಗಿದೆ. ಒಳಚರಂಡಿಯ ಮ್ಯಾನ್‌ಹೋಲ್‌ನಲ್ಲಿ ಕೆಲವೊಮ್ಮೆ ಕೊಳಚೆ ನೀರು ಉಕ್ಕುತ್ತದೆ. ಆದರೆ, ತ್ವರಿತವಾಗಿ ಅದನ್ನು ಸರಿಪಡಿಸುವುದರಿಂದ ಅಷ್ಟೇನೂ ಸಮಸ್ಯೆ ಆಗಿದ್ದಿಲ್ಲ ಎನ್ನುತ್ತಾರೆ ಆರ್ಯ ಸಮಾಜ ರಸ್ತೆಯ ನಿವಾಸಿ ಸುಪ್ರಿಯಾ.
‘ಕದ್ರಿ ರಸ್ತೆ, ಲೋಬೊ ಲೇನ್ ಆರಂಭದ ಸ್ಥಳ, ಸುತ್ತಮುತ್ತಲಿನ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್ ಸ್ಪಾಟ್‌ಗಳು ಹೆಚ್ಚುತ್ತಿವೆ. ರಾತ್ರಿ ಬೆಳಗಾಗುವಷ್ಟರಲ್ಲಿ ರಸ್ತೆ ಬದಿಯಲ್ಲಿ, ಪಾದಚಾರಿ ಮಾರ್ಗಗಳ ಮಧ್ಯದಲ್ಲಿ ಮದ್ಯದ ಬಾಟಲಿಗಳು, ತಿಂದು ಬಿಸಾಡಿದ ಪ್ಲೇಟ್‌ಗಳ ರಾಶಿ, ಕಸ ತುಂಬಿದ ಕಪ್ಪು ಕವರ್‌ಗಳು ಬಿದ್ದಿರುತ್ತವೆ. ಹೊರಗಿನಿಂದ ಬಂದು ಅಕ್ರಮವಾಗಿ ಇವುಗಳನ್ನು ಎಸೆದು ಹೋಗುವವರನ್ನು ಪತ್ತೆ ಮಾಡಿ ದಂಡ ವಿಧಿಸಬೇಕು. ಅಂಗಡಿಯವರು ತಂದು ಎಸೆದಿದ್ದರೆ ಅವರ ವ್ಯಾಪಾರ ಪರವಾನಗಿ ರದ್ದತಿಯಂತಹ ಕಟ್ಟುನಿಟ್ಟಿನ ಕ್ರಮ ವಹಿಸಬೇಕು, ಪಿಜಿ ವಾಸಿಗಳು ತಂದು ಎಸೆದಿದ್ದರೆ ಅಂತಹವರನ್ನೂ ಪತ್ತೆ ಮಾಡಬೇಕು’ ಎಂದು ಲೋಬೊ ಲೇನ್ ನಿವಾಸಿಯೊಬ್ಬರು ಆಗ್ರಹಿಸಿದರು. ಆರ್ಯ ಸಮಾಜ ರಸ್ತೆಯ ಇಕ್ಕೆಲಗಳು ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದ್ದು ಸ್ಥಳೀಯ ನಿವಾಸಿಗಳಿಗೆ ವಾಹನ ನಿಲುಗಡೆ ಸಂಚಾರಕ್ಕೆ ತೊಡಕಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು.
ಆರ್ಯ ಸಮಾಜ ರಸ್ತೆಯ ಇಕ್ಕೆಲಗಳು ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದ್ದು ಸ್ಥಳೀಯ ನಿವಾಸಿಗಳಿಗೆ ವಾಹನ ನಿಲುಗಡೆ ಸಂಚಾರಕ್ಕೆ ತೊಡಕಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು.ಎಲಿಸ್ ಪಿಂಟೊ ಸ್ಥಳೀಯ ನಿವಾಸಿ
‘ಒಳಚರಂಡಿ ರಸ್ತೆ ವಿಸ್ತರಣೆಗೆ ಅನುದಾನ’
ನಾಯಕ್ ಕಾಂಪೌಂಡ್‌ನಿಂದ ಡಾನ್‌ಬಾಸ್ಕೊವರೆಗೆ ರೈಲ್ವೆ ಕಾಲೊನಿ ಲೋಬೊ ಲೇನ್ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ 40–50 ವರ್ಷ ಹಳೆಯದಾದ ಒಳಚರಂಡಿಯ ಪೈಪ್‌ಲೈನ್ ಬದಲಿಸಿದ್ದು ಕೆಲವು ಕಡೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ಅನೇಕ ಕಡೆಗಳಲ್ಲಿ ರಸ್ತೆ ವಿಸ್ತರಣೆ ಮಾಡಿ ಕಾಂಕ್ರಿಟೀಕರಣ ಮಾಡಲಾಗಿದೆ. ಹಂಪನಕಟ್ಟೆ ಸಾಗುವ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗ ವಿಸ್ತರಣೆ ಮಾಡಲಾಗಿದೆ. ಕೆ.ಎಸ್.ರಾವ್ ರಸ್ತೆಯಿಂದ ನ್ಯಾಯಾಲಯದ ಕಡೆಗೆ ಬರುವ ಸಂಪರ್ಕ ರಸ್ತೆ ವಿಸ್ತರಣೆಗೆ ಮಹಾತ್ಮಗಾಂಧಿ ಯೋಜನೆಯಲ್ಲಿ ₹5 ಕೋಟಿ ಟ್ಯಾಗೋರ್ ಪಾರ್ಕ್ ಪಕ್ಕದ ಮಾರ್ಗದ ಅಭಿವೃದ್ಧಿಗೆ ₹1 ಕೋಟಿ ಮೀಸಲಿಡಲಾಗಿದೆ. ಡಾನ್‌ಬಾಸ್ಕೊ ರಸ್ತೆ ವಿಸ್ತರಣೆ ಸ್ಟರಾಕ್ ರಸ್ತೆ ಅಭಿವೃದ್ಧಿಗೆ ಹಣ ಕಾಯ್ದಿಡಲಾಗಿದೆ. ಬಂಟ್ಸ್ ಹಾಸ್ಟೆಲ್ ವೃತ್ತದ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಜಾಗ ಸಿಗುವುದು ವಿಳಂಬವಾಯಿತು. ಈಗ ಕಾಮಗಾರಿ ನಡೆಯುತ್ತಿದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯ ಎ.ಸಿ. ವಿನಯರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಸದಸ್ಯತ್ವ ಅವಧಿ ಪೂರ್ಣಗೊಂಡಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಾಯಕರೊಬ್ಬರನ್ನು ನೇಮಿಸಿಕೊಂಡು ಅವರ ಮೂಲಕ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.