ADVERTISEMENT

ಮಂಗಳೂರು| ವಿವಿಯಲ್ಲಿ ಅವ್ಯವಹಾರ: ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ವಿವಿಯಲ್ಲಿ ಅವ್ಯವಹಾರ; ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 5:22 IST
Last Updated 10 ಮಾರ್ಚ್ 2023, 5:22 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿಭಾಗದ ತಾಂತ್ರಿಕ ಹುದ್ದೆಗಳ ನೇಮಕಾತಿ, ಕಳೆದ ಸಾಲಿನ ಲ್ಯಾಪ್‌ಟಾಪ್ ಖರೀದಿ ಸೇರಿದಂತೆ ಹಲವು ರೀತಿಯಲ್ಲಿ ಅವ್ಯವಹಾರಗಳು ನಡೆದಿರುವ ಅನುಮಾನಗಳಿದ್ದು, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವ ಸಲಹೆಗಾರ ಅರುಣ್‌ಕುಮಾರ್ ಅವರು, ‘ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಶಿಫ್ಟ್ ಮೆಕ್ಯಾನಿಕ್ ಹುದ್ದೆಗೆ ಸಾಮಾನ್ಯ ವರ್ಗದ ವ್ಯಕ್ತಿಯೊಬ್ಬರನ್ನು ಪರಿಗಣಿಸಿ, ಮುಂಬಡ್ತಿ ನೀಡಲಾಗಿದೆ. 2012ರಿಂದ 2022ರವರೆಗಿನ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಇವೆಲ್ಲ ಅಕ್ರಮಗಳ ಹಿಂದೆ ಹಾಲಿ ಕುಲಪತಿ ಹಾಗೂ ಆಡಳಿತ ಕುಲಸಚಿವರ ಪಾತ್ರ ಇದೆ’ ಎಂದು ಆರೋಪಿಸಿದರು.

ವಿವಿಯಲ್ಲಿ 547 ಬೋಧಕೇತರ ಹುದ್ದೆಗಳು ಮಂಜೂರು ಇವೆ. 321 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳಿಗೆ ಸರ್ಕಾರದ ಅನುಮೋದನೆ ಪಡೆಯದೆ ವಿಶ್ವವಿದ್ಯಾಲಯ ಹಂತದಲ್ಲಿಯೇ 388 ಬೋಧಕೇತರ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಲಾಗಿದೆ. ತಾತ್ಕಾಲಿಕ, ಒಳಗುತ್ತಿಗೆ ನೆಲೆಯಲ್ಲಿ 400 ಬೋಧಕೇತರ ಸಿಬ್ಬಂದಿ ಸೇವೆ ಬಳಸಿಕೊಂಡಿರುವ ಕ್ರಮಕ್ಕೆ ಘಟನೋತ್ತರ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುಮೋದನೆ ಪಡೆಯದೆ ವಿವಿ ಹಂತದಲ್ಲಿ ನೇಮಕ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಕುಲಸಚಿವರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಈ ಸಿಬ್ಬಂದಿ ನೇಮಕಾತಿಯಲ್ಲಿ ಸಮಾನತೆ ಕಾಯ್ದುಕೊಳ್ಳದೆ ಅವೈಜ್ಞಾನಿಕವಾಗಿ ವೇತನ ನಿಗದಿಯಾಗಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ ಎಂದು ಹೇಳಿದರು.

ADVERTISEMENT

2021–22ನೇ ಸಾಲಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿತರಿಸಲು ಖರೀದಿಸಿದ ಲ್ಯಾಪ್‌ಟಾಪ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಶಂಕೆ ಇದೆ. ಅಂದಾಜು ₹ 35ರಿಂದ ₹40ಸಾವಿರ ಮೌಲ್ಯದ ಲಾಪ್‌ಟಾಪ್‌ಗೆ ₹ 1ಲಕ್ಷದಷ್ಟು ದರ ತೋರಿಸಿ ಖರೀದಿಸಲಾಗಿದೆ. ಖಾಸಗಿ ಕಾಲೇಜಿನ ಅಧ್ಯಾಪಕರನ್ನು ತಜ್ಞರೆಂದು ಬಿಂಬಿಸಿ ಗುಣಮಟ್ಟದ ಸರ್ಟಿಫಿಕೇಟ್ ಪಡೆದಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಕೊಣಾಜೆ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ ಎಂದರು.

ಸಮಿತಿಯ ಇಂದಿರಾನಗರ ಶಾಖೆಯ ಸಂಚಾಲಕ ಸದಾಶಿವ, ಮುಖಂಡರಾದ ಗಂಗಾಧರ್, ಅಶೋಕ್ ನಾಯಕ್, ಭರತ್ ಕುಮಾರ್ ಇದ್ದರು.

‘ಪೊಲೀಸ್ ಠಾಣೆಗೆ ಸಲ್ಲಿಕೆ’

‘ವಿಶ್ವವಿದ್ಯಾಲಯವು ಎಲ್ಲ ನೇಮಕಾತಿಗಳನ್ನು ನಿಯಮಾನುಸಾರವೇ ಮಾಡಿದೆ. ಈ ಕುರಿತ ಎಲ್ಲ ದಾಖಲೆಗಳನ್ನು ನಮ್ಮ ಬಳಿ ಇದೆ. ಕೊಣಾಜೆ ಪೊಲೀಸ್ ಠಾಣೆ ಅಧಿಕಾರಿಗಳು ಕೂಡ ಮಾಹಿತಿ ಕೇಳಿದ್ದು, ಎಲ್ಲವನ್ನೂ ಸಲ್ಲಿಸಲಾಗಿದೆ. ಕಂಪ್ಯೂಟರ್ ಖರೀದಿಯಲ್ಲೂ ಯಾವುದೇ ಅವ್ಯವಹಾರ ಆಗಿಲ್ಲ. ಕಿಯೋನಿಕ್ಸ್‌ ಮೂಲಕವೇ ಲ್ಯಾಪ್‌ಟಾಪ್ ಖರೀದಿಸಲಾಗಿದೆ. ಈ ಬಗ್ಗೆ ರಾಜ್ಯಪಾಲರಿಗೂ ವರದಿ ಸಲ್ಲಿಸಿದ್ದೇನೆ’ ಎಂದು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಿಪಡಿತ್ತಾಯ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.