ADVERTISEMENT

ಮಂಗಳೂರು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಕಿಶೋರ್ ಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 5:49 IST
Last Updated 5 ಅಕ್ಟೋಬರ್ 2025, 5:49 IST
<div class="paragraphs"><p>ಕಿಶೋರ್ ಕುಮಾರ್ ಸಿ.ಕೆ</p></div>

ಕಿಶೋರ್ ಕುಮಾರ್ ಸಿ.ಕೆ

   

ಮಂಗಳೂರು: ಕ್ರೀಡಾಪಟು, ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಅಧ್ಯಕ್ಷ ಮತ್ತು ನಿರ್ದೇಶಕ ಕಿಶೋರ್ ಕುಮಾರ್ ಸಿ.ಕೆ (56) ಭಾನುವಾರ ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ವಕೀಲೆ ಅರುಣಾ ಬಿ.ಪಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ಮಂಗಳೂರಿನ ಶಿವಭಾಗ್‌ನಲ್ಲಿರುವ ಅರ್ಬೇನಿಯ ಹೋಮ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಚೆಗೆ ಬ್ರೇನ್ ಹ್ಯಾಮರೇಜ್‌ಗೆ ಒಳಗಾಗಿದ್ದರು ಎಂದು ಆಪ್ತರು ತಿಳಿಸಿದ್ದಾರೆ.

ADVERTISEMENT

ಭಾನುವಾರ ಮಧ್ಯಾಹ್ನ 2 ಗಂಟೆಗೆ ಕದ್ರಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅದಕ್ಕೂ ಮೊದಲು 12.30ರ ವರೆಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ಕೊಡಗಿನ ಮಡಿಕೇರಿ ತಾಲ್ಲೂಕು ಮೂರ್ನಾಡು ಚಟ್ಟಿಮಾಡದಲ್ಲಿ ಜನಿಸಿದ ಅವರು ಪುತ್ತೂರಿನ ಸೇಂಟ್ ಫಿಲೊಮಿನಾ ಕಾಲೇಜಿನ ಹಳೆ ವಿದ್ಯಾರ್ಥಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಪಿಎಡ್‌ ಮತ್ತು ಎಂಪಿಎಡ್ ಮಾಡಿದ್ದರು. 2014ರಿಂದ 2022ರ ವರೆಗೆ ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕರಾಗಿದ್ದ ಅವರು ನಂತರ ಆಡಳಿತ ವಿಭಾಗದ ರಿಜಿಸ್ಟ್ರಾರ್ ಆಗಿದ್ದರು. ಪ್ರಭಾರ ಕುಲಪತಿಯಾಗಿಯೂ ಸ್ವಲ್ಪ ಕಾಲ ಕಾರ್ಯನಿರ್ವಹಿಸಿದ್ದಾರೆ. ಈಚೆಗೆ ಮತ್ತೆ ಕ್ರೀಡಾ ವಿಭಾಗಕ್ಕೆ ವರ್ಗ ಆಗಿದ್ದರು.

ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟಗಾರ ಆಗಿದ್ದ ಅವರು ಕ್ರಿಕೆಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಆಲ್‌ರೌಂಡರ್ ಆಗಿದ್ದು ಆರಂಭಿಕ ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲಿಂಗ್ ಮಾಡುತ್ತಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜೊತೆ ಸಂಪರ್ಕ ಹೊಂದಿದ್ದರು. ವಿಜಿ ಟ್ರೋಫಿ ಕ್ರಿಕೆಟ್‌ನ ಆಯ್ಕೆ ಸಮಿತಿಯಲ್ಲಿದ್ದರು. ಈಚೆಗೆ ಹಿರಿಯರ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.