ಮಂಗಳೂರು: ನಿರಂತರ ಒಂದು ತಾಸು ಮಳೆ ಸುರಿದರೆ ಈ ಭಾಗದ ಮನೆಯವರಿಗೆ ನಡುಕ ಶುರುವಾಗುತ್ತದೆ. ನೋಡುನೋಡುತ್ತಲೇ ಮಳೆ ನೀರು ಅಂಗಳವನ್ನು ಸುತ್ತುವರಿದು, ಮೆಟ್ಟಿಲನ್ನು ಮುಳುಗಿಸಿ, ಮನೆಯ ಜಗುಲಿಯನ್ನು ಆವರಿಸುತ್ತದೆ..
ಕಂಬಳ ವಾರ್ಡ್ ವ್ಯಾಪ್ತಿಗೆ ಬರುವ ಎಂಪೈರ್ ಮಾಲ್ ಹಿಂಭಾಗ, ಜನತಾ ಡಿಲಕ್ಸ್ ಹೋಟೆಲ್ ರಸ್ತೆಯ ನಿವಾಸಿಗಳಿಗೆ ಮಳೆಗಾಲದಲ್ಲಿ ನೆರೆ ಬರುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಾರಿ ಜುಲೈ ವೇಳೆಗೆ ಎಡೆಬಿಡದೆ ಮಳೆ ಸುರಿದಾಗ ಇಲ್ಲಿ ಜನರ ಸ್ಥಳಾಂತರಕ್ಕೆ ದೋಣಿ ಬಳಸಲಾಗಿತ್ತು. ಇಡೀ ಪ್ರದೇಶ ಹೊಳೆಯಂತಾಗಿತ್ತು. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ನಿವಾಸಿಗಳಿಗೆ ಮಳೆಗಾಲದವೆಂದರೆ ಬೆಚ್ಚಿ ಬೀಳುವಂತಾಗಿದೆ.
‘ಜೋರು ಮಳೆ ಸುರಿದರೆ ಪ್ರತಿಬಾರಿ ಮನೆಯ ಒಳಗೆ ನೀರು ನಗ್ಗುತ್ತದೆ. ನೀರಿನ ಜೊತೆ ಕಸ, ಹುಳ–ಹುಪ್ಪಡಿಗಳು ಮನೆಯೊಳಗೆ ಸೇರುತ್ತವೆ. ಹಲವಾರು ವರ್ಷಗಳಿಂದ ಇಲ್ಲಿಯೇ ವಾಸಿಸುವ ನಮಗೆ ಕೆಲವು ವರ್ಷಗಳಿಂದ ಈ ಸಮಸ್ಯೆ ತಲೆದೋರುತ್ತಿದೆ. ಹೊಸದಾಗಿ ಮನೆ ಕಟ್ಟುವವರು ಜಾಗ ಎತ್ತರಿಸಿದ್ದಾರೆ, ಹಳೆಯ ಮನೆಯವರಿಗೆ ಹೆಚ್ಚು ತೊಂದರೆಯಾಗುತ್ತಿದೆ’ ಎಂದು ಮಹಿಳೆಯೊಬ್ಬರು ಹೇಳಿದರು.
‘ನಾವು ಚಿಕ್ಕವರಿರುವಾಗ ಚಿಕ್ಕ ತೋಡುಗಳು ಇದ್ದವು. ಈಗ ತೋಡಿನ ಗಾತ್ರ ಮೂರು ಪಟ್ಟು ದೊಡ್ಡದಾಗಿದೆ. ತೋಡಿನ ಕಾರಣಕ್ಕೆ ಈ ಸಮಸ್ಯೆ ಸೃಷ್ಟಿಯಾಗಿದ್ದಲ್ಲ. ನಗರ ವಿಸ್ತರಣೆಯಾದಂತೆ ಗದ್ದೆಗಳು ಲೇಔಟ್‌ಗಳಾಗಿ ಮನೆಗಳು ನಿರ್ಮಾಣವಾಗಿವೆ. ಜಲಾನಯನ ಪ್ರದೇಶವೇ ಇಲ್ಲದಂತಾಗಿದೆ. ಮೊದಲು ಗದ್ದೆಗಳಲ್ಲಿ ನೀರು ನಿಂತು ಅಲ್ಲಿಯೇ ಇಂಗುತ್ತಿತ್ತು. ಈಗ ಯೆಯ್ಯಾಡಿ, ಲೇಡಿಹಿಲ್ ಗುಡ್ಡ, ಕದ್ರಿ, ಸುತ್ತಮುತ್ತಲಿನ ಎತ್ತರದ ಪ್ರದೇಶಗಳಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹವಾಗಿ, ನೆರೆ ಸೃಷ್ಟಿಯಾಗುತ್ತದೆ’ ಎಂದು ಸಮಸ್ಯೆಯನ್ನು ವಿಶ್ಲೇಷಿಸಿದರು ಮಹಾನಗರ ಪಾಲಿಕೆ ಮಾಜಿ ಸದಸ್ಯರಾಗಿರುವ ಸ್ಥಳೀಯ ನಿವಾಸಿ ನವೀನ್‌ಚಂದ್ರ ಕೆ.
ಪಿವಿಎಸ್ ವೃತ್ತ, ಎಂ.ಜಿ.ರಸ್ತೆ, ಡಾ.ಟಿ.ಎಂ.ಎ. ಪೈ ಸಭಾಭವನ, ಎಂಪೈರ್ ಮಾಲ್ ಹಿಂಭಾಗದ ಪ್ರದೇಶ, ಜೈಲ್ ರಸ್ತೆ ಇವೆಲ್ಲ ಕಂಬಳ ವಾರ್ಡ್‌ಗೆ ಸೇರಿವೆ. ನಗರದ ಹೃದಯ ಭಾಗದಂತಿರುವ ಇಲ್ಲಿ ನೆರೆಯ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಪಾರ್ಕಿಂಗ್ ಸಮಸ್ಯೆ. ವಾಹನ ನಿಲುಗಡೆಗೆ ಜಾಗವೇ ಇಲ್ಲದಂತಾಗಿದೆ.
‘ಈ ವರ್ಷದ ಮಳೆಗೆ ವಾರ್ಡ್‌ನ ಬಹುತೇಕ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ. ಎಲ್ಲೆಂದರಲ್ಲಿ ಗುಂಡಿಗಳು ಇಣುಕಿವೆ. ಕೆಲವು ಕಡೆಗಳಲ್ಲಿ ಕಂದಕಗಳೇ ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಚಾಲಕರಿಗೆ ಗುಂಡಿ ತಪ್ಪಿಸುವುದೇ ಸವಾಲಾಗಿದೆ. ಪಾಲಿಕೆ ಪಕ್ಕದ ರಸ್ತೆಯ ಕಾಂಕ್ರೀಟಿಕರಣ ಮಾಡಿದ್ದರೂ, ರಸ್ತೆಯ ಮುಂದಿನ ಭಾಗದಲ್ಲಿ ಹಿಂದಿ ಪ್ರಚಾರ ಸಭಾದ ಎದುರು ರಸ್ತೆಯಲ್ಲಿ ದೊಡ್ಡ ಗುಂಡಿಗಳಾಗಿವೆ’ ಎಂದು ಗೂಡಂಗಡಿ ಮಾಲೀಕರೊಬ್ಬರು ಅಲವತ್ತುಕೊಂಡರು.
ನೆರೆ ಸಮಸ್ಯೆ ಪರಿಹಾರಕ್ಕೆ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳ ಹಿಂದೆಯೇ ಯೋಜನೆ ಸಿದ್ಧಪಡಿಸಲಾಗಿತ್ತು. ಅದರ ಅನುಷ್ಠಾನಕ್ಕೆ ಕ್ರಮವಾಗಬೇಕು.– ನವೀನ್‌ಚಂದ್ರ ಕೆ ಸ್ಥಳೀಯ ನಿವಾಸಿ
‘ತೋಡಿನ ಎತ್ತರಕ್ಕೆ ರಸ್ತೆ ನಿರ್ಮಿಸಿ’
ನೆರೆಯ ಸಂದರ್ಭದಲ್ಲಿ ನೀರು ಬರುವ ಎತ್ತರ ಲೆಕ್ಕ ಹಾಕಿ ಎಂಪೈರ್ ಮಾಲ್ ಪಕ್ಕದ ರಸ್ತೆಯ ತೋಡನ್ನು ಎತ್ತರಿಸಿ ನಿರ್ಮಿಸಲಾಗಿದೆ. ಮುಂದೆ ರಸ್ತೆ ಮಾಡುವಾಗಲೂ ಇದೇ ಎತ್ತರಕ್ಕೆ ನಿರ್ಮಿಸಬೇಕು. ಆಗ ರಸ್ತೆಯಲ್ಲಿ ಸಂಚಾರ ಸಾಧ್ಯವಾಗುತ್ತದೆ ಎಂಬುದು ನವೀನ್‌ಚಂದ್ರ ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.