
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿದ್ದ 22 ಖಾಸಗಿ ಪದವಿ ಶಿಕ್ಷಣ ಕಾಲೇಜುಗಳು ಸಲ್ಲಿಸಿದ್ದ ಸ್ವಯಂ ಮುಚ್ಚುವ ಪ್ರಸ್ತಾವಗಳಿಗೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಸೋಮವಾರ ಅನುಮೋದನೆ ನೀಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ‘ಕಾಲೇಜುಗಳನ್ನು ಮುಚ್ಚಲು ಆಡಳಿತ ಮಂಡಳಿಗಳು ನಿರ್ಧರಿಸಿವೆ. ಈಗ ಪ್ರವೇಶ ಪಡೆದು ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆ ಮುಂದುವರಿಸಲಿವೆ. ಅಂಕಪಟ್ಟಿ ಪರಿಶೀಲನೆ ಸೇರಿ ವಿದ್ಯಾರ್ಥಿಗಳಿಗೆ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸಲು ಆಯಾ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ‘ ಎಂದರು.
ವಿದ್ಯಾರ್ಥಿಗಳ ಪ್ರವೇಶಾತಿ ಸ್ಥಗಿತ ಮತ್ತಿತರ ಕಾರಣಗಳಿಂದಾಗಿ ಈ ಕಾಲೇಜುಗಳು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. 22 ಕಾಲೇಜುಗಳು ಮುಚ್ಚಿದ ಬಳಿಕ ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿರುವ ಕಾಲೇಜುಗಳ ಸಂಖ್ಯೆ 167ಕ್ಕೆ ಇಳಿಯಲಿದೆ.
ಇವುಗಳಲ್ಲಿ 109 ಖಾಸಗಿ, 32 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ಹಾಗೂ 9 ಸ್ವಾಯತ್ತ ಕಾಲೇಜುಗಳು, 13 ಬಿ.ಇಡಿ ಕಾಲೇಜುಗಳು ಹಾಗೂ 4 ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.