ಮಂಗಳೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ಡೊಂಗರಕೇರಿಯ ವೆಂಕಟರಮಣ ದೇವಾಲಯ ಹಾಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ವೆಂಕಟರಮಣ ದೇವಾಲಯದ ಆವರಣವು ಹಸಿರಿನಿಂದ ಕಂಗೊಳಿಸುತ್ತಿದೆ. ವರ್ಟಿಕಲ್ ಗಾರ್ಡನ್ ಮಾದರಿಯಲ್ಲಿ ಜೋಡಿಸಿರುವ 10 ಸಾವಿರಕ್ಕೂ ಹೆಚ್ಚು ಸಸಿಗಳು ಕಣ್ಣಿಗೆ ತಂಪು ನೀಡುತ್ತವೆ. ಹಸಿರ ಧ್ಯಾನದಲ್ಲಿ ಭಕ್ತರು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
'ಎರಡು ತಿಂಗಳುಗಳಿಂದ ಆರೆಂಟು ಮಹಿಳೆಯರು, ದೇವಾಲಯದ ಪ್ರಮುಖರು ಸೇರಿ ವಿಭಿನ್ನವಾಗಿ ವೈಕುಂಠ ಏಕಾದಶಿ ಆಚರಿಸುವ ಉದ್ದೇಶದಿಂದ ತುಳಸಿ, ಹರಿವೆ, ಪಾಲಕ್ ಸಸಿಗಳನ್ನು ಬೆಳಸಿದ್ದೇವೆ. ದೇವರ ದರ್ಶನ ಮಾಡಿ ಬರುವ ಪ್ರಸಾದವಾಗಿ ಒಂದು ಗಿಡಗಳನ್ನು ನೀಡುತ್ತಿದ್ದೇವೆ' ಎಂದು ಶಿಲ್ಪಾ ಗಾವಸ್ಕರ್, ಸೌಮ್ಯಾ ಹೇಳಿದರು.
ಜನರಲ್ಲಿ ವಿಷಮುಕ್ತ ಸಾವಯವ ಕೃಷಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಹಸಿರು ಏಕಾದಶಿ ಆಚರಿಸಲಾಗಿದೆ. ಇದರ ಹಿಂದೆ ಹಲವರ ಶ್ರಮ ಇದೆ ಎಂದು ಪೂರ್ವ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಸೂರಜ್ ತಿಳಿಸಿದರು.
'ದೇವರ ಪ್ರೇರಣೆಯಂತೆ ಆರು ವರ್ಷಗಳಿಂದ ವಿಶೇಷ ಅಲಂಕಾರದೊಂದಿಗೆ ವೈಕುಂಠ ಏಕಾದಶಿ ಆಚರಿಸುತ್ತಿದ್ದೇವೆ. ದೇವಾಲಯದಲ್ಲಿ ಬೆಳಿಗ್ಗೆ ವೈಕುಂಠ ದ್ವಾರ ತೆರೆಯಲಾಗಿದೆ. ಅಷ್ಟಾವಧಾನ ಸೇವೆ ನಡೆಸಲಾಗಿದೆ. ಸಂಜೆ ಪುಷ್ಪಯಾಗ, ಅಷ್ಟಾವಧಾನ ನಡೆಯಲಿದೆ. ಹೊರಕಾಣಿಕೆಯಲ್ಲಿ ಒಂಬತ್ತು ಬಗೆಯ 200 ಬುಟ್ಟಿ ಹೂ ತಂದು ದೇವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ' ಎಂದು ದೇವಸ್ಥಾನದ ಆಡಳಿತ ಟ್ರಸ್ಟಿ ಪ್ರವೀಣ್ ಶೇಟ್ ತಿಳಿಸಿದರು.
ಇಸ್ಕಾನ್ ನಲ್ಲಿ ವೈಕುಂಠ ಏಕಾದಶಿ:
ವೈಕುಂಠ ಏಕಾದಶಿ ಅಂಗವಾಗಿ ಕಲಾಕುಂಜದಲ್ಲಿರುವ ಇಸ್ಕಾನ್ ನಲ್ಲಿ ಶ್ರೀಕೃಷ್ಣ ನಿಗೆ ವಿಷ್ಣುವಿನ ಅಲಂಕಾರ ಮಾಡಲಾಗಿದೆ. ವೈಕುಂಠ ದ್ವಾರ ಪೂಜೆ, ಶೃಂಗಾರ ಆರತಿ, ಪುಷ್ಪ ಅರ್ಚನೆ ಸೇವೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಅಧ್ಯಕ್ಷ ಸನಂದನದಾಸ್ ನೇತೃತ್ವದಲ್ಲಿ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.