
ಮಂಗಳೂರು: ನೀರುಮಾರ್ಗದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಷ್ಟಬಂಧ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಭಾನುವಾರ ಸಂಭ್ರಮದಿಂದ ನೆರವೇರಿತು.
ಬಳಿಕ ಪರಿಕಲಶಾಭಿಷೇಕ, ರುದ್ರಯಾಗ, ದುರ್ಗಾ ಹೋಮ, ಮಹಾಪೂಜೆ ಸಂಪನ್ನಗೊಂಡಿತು. ನೂತನ ಧ್ವಜಸ್ಥಂಭದಲ್ಲಿ ಧ್ವಜಾರೋಹಣವಾಗಿ ಪಲ್ಲಪೂಜೆಯ ಬಳಿಕ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ದೇವರಿಗೆ ರಾತ್ರಿ ಹೂವಿನ ಪೂಜೆ, ಸಣ್ಣ ರಂಗಪೂಜೆ, ಬಲಿ ಉತ್ಸವ, ಅಶ್ವ ವಾಹನ ಸೇವೆ ಹಾಗೂ ಪಲ್ಲಕ್ಕಿ ಸೇವೆಗಳು ನೆರವೇರಿದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕ್ಷೇತ್ರದ ವ್ಯವಸ್ಥಾಪನ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಎಸ್.ಗಣೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲಾದವರು ನೇತೃತ್ವ ವಹಿಸಿದ್ದರು.
ಇಂದು ರಥೋತ್ಸವ: ಕ್ಷೇತ್ರದಲ್ಲಿ ಇದೇ 9ರಂದು ಬೆಳಿಗ್ಗೆ 9ರಿಂದ ನವಕ ಕಲಶ ಗಣಹೋಮ, ಪಂಚಾಮೃತ ಅಭಿಷೇಕ, ಬಲಿ ಉತ್ಸವ ಮಯೂರ ವಾಹನ ಸೇವೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ 'ಮಾಣೂರು ರಥೋತ್ಸವ' ನಡೆಯಲಿದೆ. ಬಳಿಕ ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ದೇವರಿಗೆ ಹೂವಿನ ಪೂಜೆ, ದೊಡ್ಡ ರಂಗಪೂಜೆ ಬಲಿ ಉತ್ಸವಾದಿಗಳು, ಗಜ ವಾಹನ ಸೇವೆ, ಪ್ರಥಮ ತೆಪ್ಪೋತ್ಸವ, ಕೆರೆ ದೀಪೋತ್ಸವ, ಶಯನೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.