ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮರಿಷಷ್ಠಿ ರಥೋತ್ಸವ ಸಂಭ್ರಮದಿಂದ ನಡೆಯಿತು. ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯ ಉತ್ಸವದ ವಿಧಿಗಳನ್ನು ನೆರವೇರಿಸಿದರು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ದೇವರ ಹೂವಿನ ತೇರಿನ ಉತ್ಸವ ಸಂಪನ್ನಗೊಂಡಿತು.
ದೀಪಾರಾಧನೆ ಪ್ರಯುಕ್ತ ಪಲ್ಲಕ್ಕಿ ಉತ್ಸವ ಮತ್ತು ಬಂಡಿ ರಥೋತ್ಸವ ನಡೆಯಿತು. ಹೊರಾಂಗಣದಲ್ಲಿ ಸಂಗೀತ, ಮಂಗಳವಾದ್ಯ, ನಾದಸ್ವರ, ಬ್ಯಾಂಡ್ ಸುತ್ತುಗಳ ಬಳಿಕ ರಥಬೀದಿಗೆ ಬಂದು ದೇವರು ರಥಾರೂಢರಾದರು. ಮಾವಿನ ಎಲೆ ಮತ್ತು ನೆಲ್ಲಿಕಾಯಿಯ ಸಾಂಪ್ರದಾಯಿಕ ಅಲಂಕಾರದೊಂದಿಗೆ ಹೂವು ತುಂಬಿದ್ದ ರಥದಲ್ಲಿ ದೇವರ ಉತ್ಸವ ನಡೆಯಿತು. ಹೂವಿನ ತೇರಿನಲ್ಲಿ, ಬಿರುದಾವಳಿಗಳ ಸಮ್ಮಿಲನದಲ್ಲಿ ದೇವರು ಉತ್ಸವದಲ್ಲಿ ಕಾಶಿಕಟ್ಟೆಗೆ ತೆರಳಿದರು. ಅಲ್ಲಿ ಪೂಜೆ ಸ್ವೀಕರಿಸಿ ಮರಳಿ ದೇವಳಕ್ಕೆ ಬರುವಾಗ ಭಕ್ತರು ಹಣ್ಣುಕಾಯಿ ಆರತಿ ಮಾಡಿದರು. ವಾಸುಕಿ ಛತ್ರದ ಅವಲಕ್ಕಿ ಮಂಟಪದಲ್ಲಿ ದೇವರಿಗೆ ಕಟ್ಟೆಪೂಜೆ ನೆರವೇರಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಹಿರಿಯ ಸಿಬ್ಬಂದಿ ಕೆ.ಎಂ.ಗೋಪಿನಾಥ್ ನಂಬೀಶ, ನಾಗೇಶ್.ಎ.ವಿ, ದೇವಳದ ಭಾಸ್ಕರ ಅರ್ಗುಡಿ, ರೋಹಿತ್ ಕುಲ್ಕುಂದ, ನಂದೀಶ್ ಕಟ್ರಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.