ADVERTISEMENT

ಮಂಗಳೂರು: ಹೂ, ತರಕಾರಿಗೆ ಜಲಕ್ಷಾಮದ ಬಿಸಿ

ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ವಿವಿಧ ಜಾತಿಯ ಮಾವಿನ ಹಣ್ಣು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:02 IST
Last Updated 25 ಏಪ್ರಿಲ್ 2024, 14:02 IST
ಮಂಗಳೂರಿನ ಹೂ ಮಾರುಕಟ್ಟೆ
ಮಂಗಳೂರಿನ ಹೂ ಮಾರುಕಟ್ಟೆ   

ಮಂಗಳೂರು: ಬಿಸಿಲಿನ ತಾಪ, ಜಲಕ್ಷಾಮದ ಬಿಸಿ ಬೆಳೆಗಳಿಗೂ ತಟ್ಟಿದ್ದು, ತರಕಾರಿ, ಹೂಗಳ ಬೆಲೆ ಗಗನಮುಖಿಯಾಗಿದೆ.

ಮಾರುಕಟ್ಟೆಯಲ್ಲಿ ಸದಾ ಏರಿಳಿತ ಕಾಣುವ ಬೀನ್ಸ್ ದರ ಮತ್ತೆ ಏರುಗತಿಯತ್ತ ಸಾಗಿದೆ. ಕೆ.ಜಿ.ಯೊಂದಕ್ಕೆ ₹200 ತಲುಪಿದೆ. ರಿಲಯನ್ಸ್‌ನಲ್ಲಿ ಬೀನ್ಸ್ ದರ ಕೆ.ಜಿ.ಗೆ ₹135 ಇದೆ. ತರಕಾರಿ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಅಂಗಡಿಗಳಲ್ಲಿ ಮಾತ್ರ ಬೀನ್ಸ್ ಕಾಣಬಹುದಾಗಿದೆ.

ಹಳೆಯ ಸಂಗ್ರಹ ಇರುವ ಅಂಗಡಿಗಳು ಕೆ.ಜಿ.ಗೆ ₹120ರಂತೆ ಬೀನ್ಸ್ ಮಾರಾಟ ಮಾಡುತ್ತಿವೆ. ತಾಜಾ ಬೀನ್ಸ್‌ ಬೆಲೆ ಸಗಟು ಮಾರುಕಟ್ಟೆಯಲ್ಲಿ ₹140ಕ್ಕೆ ತಲುಪಿದ್ದು, ಖರೀದಿಸಿ ತಂದರೆ ವ್ಯಾಪಾರ ಆಗುವುದು ಕಷ್ಟ. ಹೀಗಾಗಿ, ಬೀನ್ಸ್ ತಂದಿಲ್ಲ ಎಂದು ಸೆಂಟ್ರಲ್ ಮಾರುಕಟ್ಟೆಯ ತರಕಾರಿ ವ್ಯಾಪಾರಿ ಅಭಿಷೇಕ್ ಹೇಳಿದರು.

ADVERTISEMENT

ರಸ್ತೆ ಬದಿ ವ್ಯಾಪಾರಿಗಳ ಬಳಿ ಬೀನ್ಸ್‌ ಸಿಗುತ್ತಿಲ್ಲ. ದೊಡ್ಡ ಅಂಗಡಿಯವರು ಮಾತ್ರ ಖರೀದಿಸಿ ತರುತ್ತಿದ್ದಾರೆ. ಬಿಸಿಲಿನ ಝಳಕ್ಕೆ ತರಕಾರಿ ಬೆಳೆ ಕಡಿಮೆಯಾಗಿದೆ. ಇಲ್ಲಿನ ವ್ಯಾಪಾರಿಗಳು ರಾಣೆಬೆನ್ನೂರು, ಹಾಸನ, ಚಿಕ್ಕಮಗಳೂರು ಭಾಗದ ಕಾಯಿಪಲ್ಲೆಗಳನ್ನೇ ಅವಲಂಬಿಸಿದ್ದಾರೆ. ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆ ಇದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುಮಿತ್ರಾ.

ಮೂರ್ನಾಲ್ಕು ತಿಂಗಳುಗಳಿಂದ ಏರುಗತಿಯಲ್ಲಿರುವ ಬೆಳ್ಳುಳ್ಳಿ ದರ ಸ್ಥಿರವಾಗಿದೆ. ಕೆ.ಜಿ.ಯೊಂದಕ್ಕೆ ₹290 ದರವಿದ್ದು, ವ್ಯಾಪಾರಸ್ಥರು 100 ಗ್ರಾಂ ಬೆಳ್ಳುಳ್ಳಿಗೆ ₹29 ಎನ್ನುವ ಮೂಲಕ ಗ್ರಾಹಕರ ಮನದಲ್ಲಿ ದುಬಾರಿ ಎನ್ನುವ ಭಾವನೆ ಮೂಡದಂತೆ ಎಚ್ಚರ ವಹಿಸುತ್ತಾರೆ. 

ಉಳಿದಂತೆ ಹೀರೆಕಾಯಿ, ಟೊಮೆಟೊ, ಆಲೂಗಡ್ಡೆ, ಸೌತೆಕಾಯಿ, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸಿನ ಕಾಯಿ, ಬದನೆಕಾಯಿ ದರದಲ್ಲಿ ಅಲ್ಪ ಏರಿಕೆಯಾಗಿದೆ.

ಕಿಸೆ ಸುಡುವ ಮಾವು: ಹಣ್ಣಿನ ರಾಜನಾಗಿರುವ ಮಾವು ಮಾರುಕಟ್ಟೆಗೆ ಲಗ್ಗೆ ಇಡುವಾಗಲೇ ಗ್ರಾಹಕರ ಕಿಸೆ ಸುಡುತ್ತಿದೆ. ಅಷ್ಟೇನೂ ಸ್ವಾದಭರಿತವಲ್ಲದ ಬಂಗನಪಲ್ಲಿ ಜಾತಿಯ ಮಾವಿಗೆ ಕಡಿಮೆ ದರ ಇದೆ. ರುಚಿಯ ಗ್ರಂಥಿಯನ್ನು ಕೆಣಕುವ ಮಲ್ಲಿಕಾ, ಆಲ್ಫಾನ್ಸೊ, ಬದಾಮಿ ಹಣ್ಣುಗಳ ದರ ವಿಚಾರಿಸುವ ಗ್ರಾಹಕರು, ಒಂದೆರಡು ಹಣ್ಣು ಮಾತ್ರ ಖರೀದಿಸುವುದು ಕಂಡು ಬಂತು.

ಬಿಸಿಲಿಗೆ ಬಸವಳಿದ ಪುಷ್ಪ

ಕರಾವಳಿಯ ಸುಡುಬಿಸಿಲಿಗೆ ಹೂಗಳ ತಾಜಾತನ ಕಾಯ್ದುಕೊಳ್ಳುವುದು ವ್ಯಾಪಾರಸ್ಥರಿಗೆ ಸವಾಲಾಗಿದೆ. ಈ ನಡುವೆ ಹೂಗಳ ಪೂರೈಕೆ ಕಡಿಮೆಯಾಗಿದ್ದು ಬೆಲೆ ಒಂದೇ ಸವನೆ ಏರುತ್ತಿದೆ. ಸೇವಂತಿಗೆ ಮೊಳವೊಂದಕ್ಕೆ ಸಾಮಾನ್ಯವಾಗಿ ₹30 ದರ ಇರುತ್ತದೆ. 10 ದಿನಗಳ ಹಿಂದೆ ₹50ಕ್ಕೆ ತಲುಪಿದ್ದ ಸೇವಂತಿಗೆ ದರ ಪ್ರಸ್ತುತ ₹70ಕ್ಕೆ ಏರಿಕೆಯಾಗಿದೆ. ಚಿಕ್ಕ ಗುಲಾಬಿ ಜೀನಿಯಾ ಬಿಳಿ ಸೇವಂತಿಗೆ ಮೊಳಕ್ಕೆ ತಲಾ ₹70 ಕಾಕಡಾ ಮಲ್ಲಿಗೆ ₹50 ಅರಳಿ ₹40 ಚೆಂಡು ಹೂ ಮಾರಿಗೆ ₹150 ಉಡುಪಿ ಮಲ್ಲಿಗೆ ಒಂದು ಪೀಸ್‌ ₹180ರಂತೆ (ಸಗಟು ಮಾರುಕಟ್ಟೆಯಲ್ಲಿ ಒಂದು ಅಟ್ಟಿಗೆ ₹600) ಮಾರಾಟವಾಗುತ್ತಿದೆ.  ನೀರಿನ ಕೊರತೆಯಿಂದ ಹೂ ಬೆಳೆ ಇಳುವರಿ ಕಡಿಮೆಯಾಗಿದೆ. ಹಾಸನ ತುಮಕೂರು ಚಿತ್ರದುರ್ಗ ಭಾಗದಿಂದ ಇಲ್ಲಿಗೆ ಹೂ ಪೂರೈಕೆಯಾಗುತ್ತದೆ. ದರ ಏರಿಕೆಯಾದರೂ ಬೇಡಿಕೆ ತಗ್ಗಿಲ್ಲ ಎನ್ನುತ್ತಾರೆ ಹಂಪನಕಟ್ಟೆಯ ವ್ಯಾಪಾರಿ ರಝಾಕ್. 

ಮಾವಿನ ಹಣ್ಣಿನ ಬೆಲೆ (ಕೆ.ಜಿ.ಗೆ/ರೂ.ಗಳಲ್ಲಿ)

ಬಂಗನಪಲ್ಲಿ;100–120 ಸಿಂಧೂರ;90–120 ರಸಪೂರಿ;130–140 ಮಲ್ಲಿಕಾ;170–180 ಬದಾಮಿ;180–190 ಅಲ್ಫಾನ್ಸೊ 6 ಹಣ್ಣಿನ ಪ್ಯಾಕ್;300–310 ––––––––––––––––––––––––––– ತರಕಾರಿ ಬೆಲೆ (ಕೆ.ಜಿ.ಗೆ/ರೂ.ಗಳಲ್ಲಿ) ಕ್ಯಾರೆಟ್;55–60 ಹೀರೆಕಾಯಿ;50–55 ತೊಂಡೆಕಾಯಿ;35–40 ಟೊಮೆಟೊ;30–40 ಕ್ಯಾಪ್ಸಿಕಂ;75–80 ಆಲೂಗಡ್ಡೆ;45–50 ಹಸಿಮೆಣಸು;85–90 ಬದನೆಕಾಯಿ;30–35 ಈರುಳ್ಳಿ;30–33 ಸೌತೆಕಾಯಿ;40–45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.